ದಾವಣಗೆರೆ: ಖಗ್ರಾಸ ಸೂರ್ಯ ಗ್ರಹಣದ ವೇಳೆ ಮನೆಯಿಂದ ಹೊರಗೆ ಬರಬಾರದು; ಆಹಾರ ಸೇವಿಸಬಾರದು ಎಂಬ ಮೌಢ್ಯವನ್ನು ಧಿಕ್ಕರಿಸಿ ಮಾನವ ಬಂಧುತ್ವ ವೇದಿಕೆಯು ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಸಂಜೆ ಗ್ರಹಣ ಕಾಲದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ವೈಚಾರಿಕ ಚಿಂತನೆಯ ಕಿಡಿಯನ್ನು ಹೊತ್ತಿಸಲಾಯಿತು.
ದಾವಣಗೆರೆಯ ಸ್ಪೆಷಲ್ ತಿನಿಸಾಗಿರುವ ‘ಮಂಡಕ್ಕಿ–ಮಿರ್ಚಿ’ಯನ್ನು ತಿನ್ನುತ್ತ, ಚಹಾ ಸೇವಿಸಿದ ಪ್ರಗತಿಪರ ಚಿಂತಕರು, ಸೂರ್ಯ ಗ್ರಹಣದ ಬಗೆಗಿರುವ ಮಿಥ್ಯದ ಬಗ್ಗೆ ಸಮಾಲೋಚನೆ ನಡೆಸಿದರು.
‘ಗ್ರಹಣ ಎನ್ನುವುದು ನೈಸರ್ಗಿಕ ಕತ್ತಲೆ ಬೆಳಕಿನ ವಿಶೇಷ ಪ್ರಕ್ರಿಯೆ. ಅಮಾವಾಸ್ಯೆ–ಹುಣ್ಣಿಮೆ; ಮಳೆ–ಚಳಿ–ಬಿಸಿಲು ನಿಸರ್ಗದಲ್ಲಿನ ಸಹಜವಾದ ಚಲನಾ ಹೆಜ್ಜೆಗಳು. ಇದನ್ನು ನೋಡಬಾರದು, ಈ ವೇಳೆ ಆಹಾರ ತಿನ್ನಬಾರದು ಎಂಬ ಅಸಂಬದ್ಧ ಆಚರಣೆಗಳಾಗಿವೆ. ಗ್ರಹಣದಿಂದಾಗಿ ಭಾರತದ ಅಳಿಯ ಬ್ರಿಟನ್ನಿನ ಪ್ರಧಾನಿಯಾದರು ಎಂಬ ಜ್ಯೋತಿಷಿಗಳ ಚರ್ಚೆಗಳು ಅಸಂಬದ್ಧವಾಗಿವೆ. ಇಂತಹ ವೇಳೆ ಮಾನವ ಬಂಧುತ್ವ ವೇದಿಕೆಯು ಗ್ರಹಣ ಕಾಲದಲ್ಲಿ ಉಪಾಹಾರ ಸೇವನೆ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುತ್ತಿರುವುದು ಸ್ತುತ್ಯಾರ್ಹ ಕಾರ್ಯಕ್ರಮ’ ಎಂದು ಸಾಹಿತಿ ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ, ‘ಮನುವಾದಿಗಳು ನಿಸರ್ಗ ಸಹಜ ಜೀವನಾವರ್ತನ ಆಚರಣೆಗಳಲ್ಲಿ ಅಸಂಬದ್ಧ ಮೂಢನಂಬಿಕೆಗಳನ್ನು ಬಿತ್ತುತ್ತಿದ್ದಾರೆ. ಇದಕ್ಕೆ ಯಾರೂ ಬಲಿಯಾಗಬಾರದು’ ಎಂದು ಹೇಳಿದರು.
ಪ್ರಾಧ್ಯಾಪಕ ಡಾ. ಎಂ.ಮಂಜಣ್ಣ, ವಕೀಲ ಅನೀಸ್ ಪಾಷಾ, ರಾಘು ದೊಡ್ಡಮನಿ, ಆವರಗೆರೆ ವಾಸು, ಎಚ್.ಚಂದ್ರಪ್ಪ ನೀಲಗುಂದ, ಜಯಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.