ADVERTISEMENT

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ: ಅಭ್ಯರ್ಥಿ ಪರ ಹಣ ಹಂಚಿಕೆ; ಇಬ್ಬರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 23:42 IST
Last Updated 3 ಜೂನ್ 2024, 23:42 IST
ಹೊನ್ನಾಳಿ ತಾಲ್ಲೂಕು ಪಂಚಾಯಿತಿ ಕಚೇರಿ ಪಕ್ಕದಲ್ಲಿ ಪಕ್ಷೇತರ ಅಭ್ಯರ್ಥಿ ಎಸ್.ಪಿ. ದಿನೇಶ್ ಪರ ಹಣ ಹಂಚಿಕೆ ಆರೋಪದ ಮೇಲೆ ಅವರನ್ನು ಹಿಡಿದು ವಿಚಾರಣೆ ನಡೆಸುತ್ತಿರುವ ಉಪವಿಭಾಗಾಧಿಕಾರಿ, ಪಿಎಸ್‍ಐ ಹಾಗೂ ತಹಶೀಲ್ದಾರ್, ಎಂ.ಜಿ. ಶಶಿಕಲಾ ಅವರ ಎದೆಯ ಮೇಲೆ ಎಸ್.ಪಿ. ದಿನೇಶ್ ಭಾವಚಿತ್ರವಿರುವ ಬ್ಯಾಡ್ಜ್ ನ್ನು ಗಮನಿಸಬಹುದು.   
ಹೊನ್ನಾಳಿ ತಾಲ್ಲೂಕು ಪಂಚಾಯಿತಿ ಕಚೇರಿ ಪಕ್ಕದಲ್ಲಿ ಪಕ್ಷೇತರ ಅಭ್ಯರ್ಥಿ ಎಸ್.ಪಿ. ದಿನೇಶ್ ಪರ ಹಣ ಹಂಚಿಕೆ ಆರೋಪದ ಮೇಲೆ ಅವರನ್ನು ಹಿಡಿದು ವಿಚಾರಣೆ ನಡೆಸುತ್ತಿರುವ ಉಪವಿಭಾಗಾಧಿಕಾರಿ, ಪಿಎಸ್‍ಐ ಹಾಗೂ ತಹಶೀಲ್ದಾರ್, ಎಂ.ಜಿ. ಶಶಿಕಲಾ ಅವರ ಎದೆಯ ಮೇಲೆ ಎಸ್.ಪಿ. ದಿನೇಶ್ ಭಾವಚಿತ್ರವಿರುವ ಬ್ಯಾಡ್ಜ್ ನ್ನು ಗಮನಿಸಬಹುದು.      

ಹೊನ್ನಾಳಿ: ವಿಧಾನ ಪರಿಷತ್‌ ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಪಿ.ದಿನೇಶ್ ಪರ ಮತದಾನ ಮಾಡುವ ಉದ್ದೇಶದಿಂದ ಹಣ ಹಂಚುತ್ತಿದ್ದ ಎಂಬ ಆರೋಪದ ಮೇಲೆ ಎಂ.ಜಿ.ಶಶಿಕಲಾ ಎಂಬುವವರ ವಿರುದ್ಧ ದೂರು ದಾಖಲಿಸಲಾಗಿದೆ.

ಫ್ಲೈಯಿಂಗ್ ಸ್ಕ್ವಾಡ್‌ನ ಅಧಿಕಾರಿ ಶಶಿಧರ್ ಅವರು ನೀಡಿದ ದೂರಿನ ಆಧಾರದ ಮೇರೆಗೆ ಶಶಿಕಲಾ ವಿರುದ್ಧ ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೋಮವಾರ ಬೆಳಿಗ್ಗೆ 9.35ರ ಹೊತ್ತಿಗೆ ಶಶಿಕಲಾ ಅವರು ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ವ್ಯಾನಿಟಿ ಬ್ಯಾಗ್‌ನಲ್ಲಿ ಹಣ ಇಟ್ಟುಕೊಂಡು ಎಸ್.ಪಿ. ದಿನೇಶ್ ಪರವಾಗಿ ಮತ ನೀಡುವಂತೆ ಹಣ ಹಂಚಿಕೆ ಮಾಡುತ್ತಿದ್ದರು ಎಂದು ಉಪ ವಿಭಾಗಾಧಿಕಾರಿ ತಿಳಿಸಿದ ಮೇರೆಗೆ ಶಶಿಧರ್ ಅವರು ಹೊನ್ನಾಳಿ ಪೊಲೀಸರಿಗೆ ದೂರು ನೀಡಿದರು. ಈ ಆರೋಪದ ಮೇರೆಗೆ ಮಹಿಳೆ ಮತ್ತು ಅವರಿಗೆ ಸಹಕಾರ ನೀಡುತ್ತಿದ್ದ ಬಸವನಹಳ್ಳಿ ಬೀರೇಶ್ ಅವರನ್ನು ಬಂಧಿಸಿ ಸ್ಟೇಶನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಶಶಿಕಲಾ ಅವರು ನ್ಯಾಮತಿ ತಾಲ್ಲೂಕು ಮಾದಾಪುರ ಗ್ರಾಮದವರಾಗಿದ್ದು, ಶಿಕಾರಿಪುರದ ಪ್ರಥಮದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೀರೇಶ್ ಅವರು ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮದವರು ಎಂಬ ಮಾಹಿತಿ ಲಭ್ಯವಾಗಿದೆ.

‘ಶಶಿಕಲಾ ಅವರ  ಬಳಿ ಇದ್ದ ₹ 30,000 ನಗದು, ಸ್ಮಾರ್ಟ್‍ಫೋನ್, ಚುನಾವಣಾ ಐಡಿ ಕಾರ್ಡ್‌ ಹಾಗೂ ಬೀರೇಶ್‌ ಬಳಿ ಇದ್ದ ಸ್ಮಾರ್ಟ್‌ಫೋನ್ ಮತ್ತು ಬೈಕ್ ಕೀ ವಶಪಡಿಸಿಕೊಳ್ಳಲಾಗಿದೆ’ ಎಂದು ಪಿಎಸ್‍ಐ ಶಾಂತಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.