ADVERTISEMENT

ದಾವಣಗೆರೆ: ಡೆಂಗಿ ಸೋಂಕಿತರಿಗಾಗಿ ವಿಶೇಷ ವಾರ್ಡ್‌

ರಾಮಮೂರ್ತಿ ಪಿ.
Published 11 ಜುಲೈ 2024, 5:31 IST
Last Updated 11 ಜುಲೈ 2024, 5:31 IST
ಡೆಂಗಿ ಹರಡುವ ಈಡಿಸ್ ಸೊಳ್ಳೆ
ಡೆಂಗಿ ಹರಡುವ ಈಡಿಸ್ ಸೊಳ್ಳೆ   

ದಾವಣಗೆರೆ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಗಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಡೆಂಗಿ ರೋಗಿಗಳಿಗಾಗಿಯೇ ವಿಶೇಷ ವಾರ್ಡ್ ಆರಂಭಿಸಲಾಗಿದೆ.

ಜಿಲ್ಲೆಯಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಡೆಂಗಿ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಡೆಂಗಿ ಪೀಡಿತರ ಚಿಕಿತ್ಸೆಗಾಗಿ 10 ಹಾಸಿಗೆಗಳ ವಿಶೇಷ ವಾರ್ಡ್‌ ಸ್ಥಾಪಿಸಲಾಗಿದ್ದು, 8 ಹಾಸಿಗೆಗಳು ಈಗಾಗಲೇ ಭರ್ತಿಯಾಗಿವೆ.

ತೀವ್ರತರವಾದ ಲಕ್ಷಣಗಳಿರುವ ಡೆಂಗಿ ಸೋಂಕಿತರಿಗೆ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನುಳಿದ ಡೆಂಗಿ ಪೀಡಿತರಿಗೆ ಸಾಮಾನ್ಯ ವಾರ್ಡ್‌ಗಳಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ.

ADVERTISEMENT

ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲೂ ಡೆಂಗಿ ಸೋಂಕಿತರಿಗಾಗಿ ವಿಶೇಷ ವಾರ್ಡ್‌ ಆರಂಭಿಸುವುದು ಸೇರಿದಂತೆ ಅಗತ್ಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸುವಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಹೆಚ್ಚಿದ ಡೆಂಗಿ ಪ್ರಕರಣ:

ಪ್ರಸಕ್ತ ವರ್ಷದ ಜುಲೈ 10ರ ಅಂತ್ಯದವರೆಗೆ ಜಿಲ್ಲೆಯಲ್ಲಿ 183 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಇದುವರೆಗೂ 1,669 ಡೆಂಗಿ ಎಲಿಸಾ ಪರೀಕ್ಷೆಗಳನ್ನು ನಡೆಸಲಾಗಿದೆ.

ಜಿಲ್ಲೆಯಲ್ಲಿ 2020ರಲ್ಲಿ 114, 2021ರಲ್ಲಿ 287, 2022ರಲ್ಲಿ 240 ಹಾಗೂ 2023ರಲ್ಲಿ 219 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದವು. ‘ಪ್ರಸಕ್ತ ವರ್ಷ ಈಗಾಗಲೇ 183 ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಡಿಸೆಂಬರ್‌ ವೇಳೆಗೆ ಒಟ್ಟು ಪ್ರಕರಣಗಳಲ್ಲಿ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ವೈದ್ಯರು.

ಡೆಂಗಿ ಪರೀಕ್ಷೆಗೆ ದರ ನಿಗದಿ:

ಖಾಸಗಿ ಆಸ್ಪತ್ರೆಗಳಲ್ಲಿ ಕ್ಷಿಪ್ರ ಪರೀಕ್ಷೆಗೆ ₹ 250 ಹಾಗೂ ಎಲಿಸಾ ಪರೀಕ್ಷೆಗೆ ₹ 300 ದರ ನಿಗದಿ ಮಾಡಲಾಗಿದೆ. ಕ್ಷಿಪ್ರ ಪರೀಕ್ಷೆಯಲ್ಲಿ ಸ್ಕ್ರೀನಿಂಗ್‌ ನಡೆಸಲಾಗುತ್ತದೆ. ಅದರಲ್ಲಿ ಪಾಸಿಟಿವ್‌ ಬಂದರೆ, ಖಚಿತಪಡಿಸಿಕೊಳ್ಳಲು ಎಲಿಸಾ ಪರೀಕ್ಷೆ ನಡೆಸಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇಬ್ಬರ ಸಾವು:

ಶಂಕಿತ ಡೆಂಗಿಯಿಂದ ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಇಬ್ಬರು ಮೃತಪಟ್ಟಿದ್ದಾರೆ. ಜೂನ್‌ 26ರಂದು ಹೊನ್ನಾಳಿ ತಾಲ್ಲೂಕಿನ ಹನುಮನಹಳ್ಳಿಯ ನಿವಾಸಿ ಅನುಷಾ (18) ಹಾಗೂ ಜುಲೈ 7ರಂದು ಆಟೊ ಚಾಲಕ, ಹರಿಹರದ ಅರುಣ್ (22) ಮೃತಪಟ್ಟಿದ್ದಾರೆ.

ಆರೋಗ್ಯ ಇಲಾಖೆಯ ದಾಖಲೆಗಳ ಪ್ರಕಾರ 2017ರಿಂದ 2023ರ ವರೆಗೆ ಜಿಲ್ಲೆಯಲ್ಲಿ ಡೆಂಗಿ ಜ್ವರದಿಂದ ಮೃತಪಟ್ಟ ಒಂದೇ ಒಂದು ಪ್ರಕರಣವೂ ವರದಿಯಾಗಿರಲಿಲ್ಲ. ಈ ವರ್ಷ ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮೃತರ ಸಂಖ್ಯೆಯೂ ಹೆಚ್ಚಾಗುವ ಭೀತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಆರೋಗ್ಯ ನಿರೀಕ್ಷಕರ ತಂಡದಿಂದ ಮನೆ ಮನೆಗೆ ಭೇಟಿ ನೀಡಿ ಡೆಂಗಿ ತಡೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಲಾರ್ವಾ ಸರ್ವೇ ನಡೆಸಲಾಗುತ್ತಿದೆ
–ಎಸ್‌.ಷಣ್ಮುಖಪ್ಪ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಡೆಂಗಿ ಸೋಂಕಿತರು ಸೇರಿದಂತೆ ಸಾಮಾನ್ಯ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ಹಾಗೂ ಇನ್ನಿತರ ಔಷಧಗಳ ಕೊರತೆ ಇಲ್ಲ. ಡೆಂಗಿ ಸೋಂಕಿತರಿಗೆ ರೋಗ ಲಕ್ಷಣ ಆಧರಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ
ಎಂ.ಬಿ.ನಾಗೇಂದ್ರಪ್ಪ ಜಿಲ್ಲಾ ಶಸ್ತ್ರಚಿಕಿತ್ಸಕ

‘ಡೆಂಗಿ ತಡೆಗೆ ಮುಂಜಾಗ್ರತಾ ಕ್ರಮ ವಹಿಸಿ’

‘ತುಂತುರು ಮಳೆಯಿಂದಾಗಿ ಡೆಂಗಿ ಉಲ್ಬಣಕ್ಕೆ ಪೂರಕವಾದ ವಾತಾವರಣ ಇರುವುದರಿಂದ ಸಾರ್ವಜನಿಕರು ಡೆಂಗಿ ತಡೆಗೆ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು’ ಎಂದು ಜಿಲ್ಲಾ ಕೀಟಜನ್ಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕೆ.ಎಚ್‌.ಗಂಗಾಧರ್ ಹೇಳಿದರು.

‘ಡ್ರಮ್‌ ತೊಟ್ಟಿಗಳಲ್ಲಿ ಅನವಶ್ಯಕವಾಗಿ ನೀರನ್ನು ಸಂಗ್ರಹಿಸಬಾರದು. ಡ್ರಮ್‌ಗಳನ್ನು ಮುಚ್ಚಳ ಅಥವಾ ಬಟ್ಟೆಯಿಂದ ಮುಚ್ಚಿಡಬೇಕು. ಸೊಳ್ಳೆ ನಿರೋಧಕ ಕ್ರೀಮ್‌ ಲೋಷನ್‌ಗಳನ್ನು ಬಳಸಬೇಕು ಸೊಳ್ಳೆಯಿಂದ ರಕ್ಷಿಸಿಕೊಳ್ಳಲು ಮೈತುಂಬ ಬಟ್ಟೆ ಧರಿಸಬೇಕು ಸೊಳ್ಳೆ ಮನೆಯೊಳಗೆ ಪ್ರವೇಶಿಸದಂತೆ ತಡೆಯಲು ಮನೆ ಹಾಗೂ ಕಿಟಕಿ ಬಾಗಿಲುಗಳನ್ನು ಸಂಜೆ ವೇಳೆ ಮುಚ್ಚಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.