ADVERTISEMENT

ದಾವಣಗೆರೆ | ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ ಸುಗಮ

82 ಕೇಂದ್ರಗಳಲ್ಲಿ ಪರೀಕ್ಷೆ; ಶೇ 99.29 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 14:11 IST
Last Updated 25 ಮಾರ್ಚ್ 2024, 14:11 IST

ದಾವಣಗೆರೆ: ಸೋಮವಾರದಿಂದ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಜಿಲ್ಲೆಯಾದ್ಯಂತ ಮೊದಲ ದಿನ ಯಾವುದೇ ಗೊಂದಲವಿಲ್ಲದೇ ಸುಗಮವಾಗಿ ನಡೆದಿದೆ.

ಜಿಲ್ಲೆಯಲ್ಲಿ ಒಟ್ಟು 82 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಮೊದಲ ದಿನ ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್‌, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಸಂಸ್ಕೃತ ಪರೀಕ್ಷೆ ಬರೆದರು.

ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 21,006 ವಿದ್ಯಾರ್ಥಿಗಳ ಪೈಕಿ 20,856 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 150 ವಿದ್ಯಾರ್ಥಿಗಳು ಗೈರಾಗಿದ್ದರು. ಜಿಲ್ಲೆಯಲ್ಲಿ ಶೇ 99.29 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ADVERTISEMENT

‘ಮೊದಲ ದಿನ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಯಾವುದೇ ಆತಂಕ, ಒತ್ತಡ ಕಂಡು ಬರಲಿಲ್ಲ. ಸಾಕಷ್ಟು ತರಬೇತಿ, ಮಾರ್ಗದರ್ಶನ ನೀಡಿದ್ದರಿಂದ ವಿದ್ಯಾರ್ಥಿಗಳು ಖುಷಿಯಿಂದಲೇ ಪರೀಕ್ಷಾ ಕೇಂದ್ರಗಳಿಗೆ ಬಂದು ಪರೀಕ್ಷೆ ಎದುರಿಸಿದರು’ ಎಂದು ಡಿಡಿಪಿಐ ಜಿ.ಕೊಟ್ರೇಶ್‌ ತಿಳಿಸಿದರು.

ಪರೀಕ್ಷಾ ಕೇಂದ್ರಗಳ ಪ್ರವೇಶ ಧ್ವಾರದಲ್ಲೇ ವಿದ್ಯಾರ್ಥಿಗಳನ್ನು ಪರಿಶೀಲಿಸಿ ಒಳಗಡೆ ಬಿಡಲಾಯಿತು. 9.45ಕ್ಕೆ ಪರೀಕ್ಷಾ ಕೊಠಡಿಗಳಿಗೆ ತೆರಳಿದ ವಿದ್ಯಾರ್ಥಿಗಳಿಗೆ 10.15ಕ್ಕೆ ಪ್ರಶ್ನೆಪತ್ರಿಕೆಗಳನ್ನು ನೀಡಲಾಯಿತು. 10.30ರಿಂದ ಮಧ್ಯಾಹ್ನ 1.30ರ ವರೆಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಪರೀಕ್ಷಾ ಕೇಂದ್ರಗಳಿಗೆ ಭೇಟಿ:

ಡಿಡಿಪಿಐ ಕಚೇರಿಯ 2 ತಂಡ ಹಾಗೂ ಡಯೆಟ್‌ನ 6 ತಂಡಗಳು ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದವು. ತಂಡಗಳ ಸದಸ್ಯರು ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಇದಲ್ಲದೇ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಅವರು ನಗರದ ಮೋತಿ ವೀರಪ್ಪ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿದ್ದರಿಂದ ನಕಲು ನಡೆಸಲು ಅವಕಾಶವೇ ಇರಲಿಲ್ಲ. ಸಿ.ಸಿ. ಟಿವಿ ದೃಶ್ಯಾವಳಿಯನ್ನು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕುಳಿತು ವೀಕ್ಷಿಸಲಾಯಿತು. ಡಿಡಿಪಿಐ ಕಚೇರಿಯ ನಾಲ್ವರು ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿಯ ಇಬ್ಬರು ಸದಸ್ಯರು ವಿದ್ಯಾರ್ಥಿಗಳ ಚಲನವಲನಗಳನ್ನು ನೇರವಾಗಿ ವೀಕ್ಷಿಸಿದೆವು’ ಎಂದು ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ರಾಜಶೇಖರಪ್ಪ ಜಿ.ಎಸ್‌. ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.