ADVERTISEMENT

ಸೋಲಿನಿಂದ ಹತಾಶರಾಗಿ ಎಸ್‌ಎಸ್ಎಂರಿಂದ ಕಮಿಷನ್‌ ಆರೋಪ: ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 7:11 IST
Last Updated 21 ಏಪ್ರಿಲ್ 2022, 7:11 IST
ಜಿ.ಎಂ. ಸಿದ್ದೇಶ್ವರ
ಜಿ.ಎಂ. ಸಿದ್ದೇಶ್ವರ   

ದಾವಣಗೆರೆ: ಮೂರು ಬಾರಿ ಲೋಕಸಭೆ, ವಿಧಾನಸಭೆ ಚುನಾವಣೆಗಳ ಸೋಲುಗಳಿಂದ ಹತಾಶರಾಗಿರುವವರು ಕಮಿಷನ್‌ ಆರೋಪ ಮಾಡುತ್ತಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಟೀಕಿಸಿದ್ದಾರೆ.

ಬುಧವರಾ ಸುದ್ದಿಗಾರರ ಜತೆಗೆ ಅವರು ಮಾತನಾಡಿ, ‘ಕಮೀಷನ್ ಪಡೆದೇ ಬದುಕಿದವರು ತಮ್ಮ ಅನುಭವದ ಮಾತುಗಳನ್ನಾಡಿದ್ದಾರೆ’ ಎಂದು ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಟೀಕೆಗೆ ಪ್ರತಿಕ್ರಿಯಿಸಿದರು.

‘ಯಾರೋ ಕಟ್ಟಿದ ಹುತ್ತ ಸೇರಿಕೊಂಡು, ಶ್ರೀಮಂತಿಕೆಯ ಅಹಂಕಾರದಿಂದ ಮಾತನಾಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಯಾರೂ ಕಮೀಷನ್ ಪಡೆದಿಲ್ಲ. ಕಮೀಷನ್ ವಿಚಾರವೇ ಇಲ್ಲ. ಈಗ ಚುನಾವಣೆ ಸಮೀಪಿಸುತ್ತಿದೆ. ಸತತವಾಗಿ ಸೋತವರಿಗೆ ಈಗಷ್ಟೇ ಕುಂದವಾಡ ಕೆರೆ, ಬೇರೆ ವಿಚಾರಗಳು ಕಾಣತೊಡಗಿವೆ. ಇಲ್ಲಿವರೆಗೆ ಹೊರಗೆ ಬಾರದವರು ಈಗ ಬಂದು ಮಾತನಾಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಕೆಲ ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ತಂದೆ, ಮಾಜಿ ಸಂಸದ ದಿವಂಗತ ಜಿ. ಮಲ್ಲಿಕಾರ್ಜುನಪ್ಪ ಅವರ ಹೆಸರನ್ನು ಇಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿ. ಮಲ್ಲಿಕಾರ್ಜುನಪ್ಪ ಹೆಸರನ್ನು ತೆಗೆಸಲಾಗುವುದು ಎಂದು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಹೆಸರು ತೆಗೆಯುವ ಪ್ರಶ್ನೆ ಉದ್ಭವಿಸಲ್ಲ ಎಂದರು.

ಸರ್ಕಾರದ ನಿಯಮಾವಳಿ ಪ್ರಕಾರ ಅನುಮತಿ ಪಡೆದು, ಮಹಾ ನಗರ ಪಾಲಿಕೆ ಅನುಮೋದನೆ ಪಡೆದು, ಜಿ.ಮಲ್ಲಿಕಾರ್ಜುನ ಎಂಬುದಾಗಿ ಹೆಸರಿಡಲಾಗಿದೆ. ಕಾಂಗ್ರೆಸ್ಸಿನವರೂ ಹಾಲಿ ಶಾಸಕರು, ಮಾಜಿ ಸಚಿವರ ಹೆಸರನ್ನು ಇಟ್ಟಿದ್ದಾರೆ. ಹೀಗೆ ಹೆಸರಿಡಲು ಸರ್ಕಾರದ ಅನುಮತಿ ಪಡೆದಿದ್ದಾರಾ ಕೇಳಿ ನೋಡಿ. ನಾವೂ ಅಂತಹ ಹೆಸರನ್ನು ತೆಗೆಸಬಹುದು. ಆದರೆ, ಅಂತಹ ಮೂರ್ಖತನಕ್ಕೆ ನಾವು ಕೈ ಹಾಕುವುದಿಲ್ಲ. ಜೀವಂತ ಇದ್ದವರ ಹೆಸರನ್ನು ಇಡಬಾರದೆಂಬ ನಿಯಮ ಇದೆ. ಹಾಗಿದ್ದರೂ ಕಾಂಗ್ರೆಸ್ಸಿನವರು ಜೀವಂತ ಇದ್ದವರ ಹೆಸರಿಟ್ಟಿದ್ದಾರೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.