ADVERTISEMENT

ಸೇಂಟ್ ಜಾನ್ಸ್‌ ಶಾಲೆ ವಿದ್ಯಾರ್ಥಿಗಳಿಗೆ ‘ಗಂಧದ ಗುಡಿ’ ಚಿತ್ರ ವೀಕ್ಷಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 6:14 IST
Last Updated 1 ನವೆಂಬರ್ 2022, 6:14 IST

ದಾವಣಗೆರೆ: ಕರ್ನಾಟಕದ ಪರಿಸರ, ಜೀವವೈವಿಧ್ಯದ ಬಗ್ಗೆ ಹೇಳುವ ನಟ ಪುನೀತ್‌ ರಾಜ್‌ಕುಮಾರ್ ಅಭಿನಯದ ‘ಗಂಧದ ಗುಡಿ’ ಚಿತ್ರವನ್ನು ಸೇಂಟ್ ಜಾನ್ಸ್‌ ಶಾಲೆಯ ಮಕ್ಕಳಿಗೆ ಸಂಸ್ಥೆಯಿಂದ ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದುಸೇಂಟ್ ಜಾನ್ಸ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯ (ಸಿಬಿಎಸ್‌ಇ) ಪ್ರಾಚಾರ್ಯ ಸಯ್ಯದ್‌ ಆರಿಫ್‌ ಹೇಳಿದರು.

‘ಚಿತ್ರದಲ್ಲಿ ಕರ್ನಾಟಕದ ಪ್ರಕೃತಿ ಸೌಂದರ್ಯ, ಪಾರಂಪರಿಕ ತಾಣಗಳು,ಜೀವವೈವಿಧ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ. ಇದನ್ನು ಕರುನಾಡಿನ ಪ್ರತಿಯೊಬ್ಬರೂ ನೋಡಲೇಬೇಕು. ಹೀಗಾಗಿ ನಮ್ಮ ವಿದ್ಯಾಸಂಸ್ಥೆಯಿಂದ ನವೆಂಬರ್‌ 2ರಂದು ವಸಂತ ಚಿತ್ರಮಂದಿರದ ಬೆಳಗಿನ 11ರ‍ಪ್ರದರ್ಶನದ ಟಿಕೆಟ್ ಕಾಯ್ದಿರಿಸಲಾಗಿದ್ದು, 750 ವಿದ್ಯಾರ್ಥಿಗಳಿಗೆ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುನೀತ್‌ ರಾಜ್‌ಕುಮಾರ್ ಅವರ ಮೇಲಿನ ಅಭಿಮಾನ ಹಾಗೂ ಗೌರವ ಸಮರ್ಪಣೆ ಭಾಗವಾಗಿ ಅಂದು ರೇಣುಕಾ ಮಂದಿರದಿಂದ ವಸಂತ ಚಿತ್ರಮಂದಿರದವರೆಗೆ ವಿದ್ಯಾರ್ಥಿಗಳು ಜಾಥಾ ನಡೆಸಲಿದ್ದಾರೆ. ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕರು ಭಾಗವಹಿಸಲಿದ್ದಾರೆ. ಪುನೀತ್ ಅವರ ಸಾಮಾಜಿಕ ಸೇವೆ, ದಾನ ಮಾಡುವ ಮನೋಭಾವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲೆಯ 1000 ವಿದ್ಯಾರ್ಥಿಗಳಿಗೆ ಚಿತ್ರ ತೋರಿಸಲಾಗುವುದು. ಪ್ರತಿ ಶಾಲೆಯ ವಿದ್ಯಾರ್ಥಿಗಳಿಗೂ ಚಿತ್ರ ವೀಕ್ಷಣೆಗೆ ಸಂಬಂಧಿಸಿದ ಶಾಲಾ ಆಡಳಿತ ಮಂಡಳಿ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.

ADVERTISEMENT

‘ರಾಜ್ಯದ ಪ್ರಕೃತಿ ಸಂಪತ್ತಿನ ವೈಭವ ಅನಾವರಣ ಮಾಡುವ ಇಂತಹ ಚಿತ್ರವನ್ನು ರಾಜ್ಯದ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಶಾಲೆಯ ಪ್ರಾಚಾರ್ಯರಾದ ಜ್ಯೋತಿ ಉಪಾಧ್ಯಾಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಲೆಯ ಪ್ರೀತಾ ರೈ, ನೇತ್ರಾವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.