ADVERTISEMENT

ಮಾದಿಗ ಸಮಾಜದ ಅವಮಾನ ನಿಲ್ಲಿಸಿ: ಸ್ವಾಭಿಮಾನಿ ಮಾದಿಗ ವೇದಿಕೆ ಮುಖಂಡರ ಆಗ್ರಹ

ಕರ್ನಾಟಕ ರಾಜ್ಯ ಸ್ವಾಭಿಮಾನಿ ಮಾದಿಗ ವೇದಿಕೆ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜೂನ್ 2023, 15:59 IST
Last Updated 30 ಜೂನ್ 2023, 15:59 IST

ದಾವಣಗೆರೆ: ‘ರಾಜ್ಯದಲ್ಲಿ ಸೋತಿರುವ ಬಿಜೆಪಿ ಅಭ್ಯರ್ಥಿಗಳು ಒಳಮೀಸಲಾತಿ ಕೊಟ್ಟಿದ್ದರಿಂದ ಸೋಲಾಗಿದೆ ಎಂದು ಹೇಳುವ ಮೂಲಕ ಮಾದಿಗ ಸಮಾಜವನ್ನು ಅವಮಾನ ಮಾಡುತ್ತಿರುವುದನ್ನು ನಿಲ್ಲಿಸಬೇಕು’ ಎಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಮಾದಿಗ ವೇದಿಕೆ ಮುಖಂಡ ಡಿ.ಹನುಮಂತಪ್ಪ ಆಗ್ರಹಿಸಿದರು.

‘ಬಿಜೆಪಿಯು ತನ್ನ ದುರಾಡಳಿತದಿಂದ ಅಧಿಕಾರ ಕಳೆದುಕೊಂಡಿದೆ ಎಂದ ಅವರು, ಒಳಮೀಸಲಾತಿಯಿಂದ ಸೋಲಾಗಿದೆ ಎಂಬುವವರು ಬಹಿರಂಗ ಚರ್ಚೆಗೆ ಬರಲಿ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

‘ಸದಾಶಿವ ಆಯೋಗದ ಜಾರಿಗಾಗಿ ಹೋರಾಟ ನಡೆಸುತ್ತಿರುವ ಮಾದಿಗ ಸಮಾಜವನ್ನು ಮತ್ತು ಅದರ ಹೋರಾಟಗಾರರನ್ನು ಹೀಯಾಳಿಸಿ ಅವಮಾನ ಮಾಡಿದ ಶಾಸಕರ ಮೇಲೆ ಎಫ್‌ಐಆರ್ ಮಾಡಿದ್ದೇವೆ. ಆದರೂ ಬುದ್ಧಿ ಕಲಿಯದ ಬಿಜೆಪಿಯ ಹೊಳಲ್ಕೆರೆ ಶಾಸಕ ಚಂದ್ರಪ್ಪ, ಹೊನ್ನಾಳಿಯ ಮಾಜಿ ಸಚಿವ ರೇಣುಕಾಚಾರ್ಯ ಅವರು ಒಳಮೀಸಲಾತಿಯಿಂದ ಬಿಜೆಪಿಗೆ ಸೋಲಾಗಿದೆ ಎಂದು ಹೇಳುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ತಿರುಚಿ ಕೇಂದ್ರಕ್ಕೆ ಕಳುಹಿಸಿದ್ದು ಚುನಾವಣೆಯ ಗಿಮ್ಮಿಕ್‌ ಎಂಬುದು ನಮ್ಮ ಸಮಾಜದವರಿಗೆ ಗೊತ್ತಿದೆ, ಆದ್ದರಿಂದ ವಿರೋಧಿಸಿದ್ದಾರೆ. ಇದನ್ನೇ ಗುರಿಯಾಗಿಸಿಕೊಂಡು ಸಮಾಜವನ್ನು ಅವಮಾನಿಸುವುದನ್ನು ಬಿಡಬೇಕು’ ಎಂದರು.

‘ಎಂ.ನಂಜುಂಡಸ್ವಾಮಿ ಅವರು ಬರೆದಿರುವ ಹೊಲೆಯರು ಮಾದರು, ರಾಜರು ಎನ್ನುವ ಪುಸ್ತಕ ಓದಲಿ. ನಂತರ ಸಮಾಜದ ಬಗ್ಗೆ ಮಾತನಾಡಲಿ. ಮೂಲತಃ ರಾಜ್ಯಭಾರ ನಡೆಸಿದಂತಹ ಸಮಾಜ ಎನ್ನುವುದನ್ನು ಅರಿಯಬೇಕು’ ಎಂದು ಹೇಳಿದರು.

ಸಮಾಜದ ಮುಖಂಡರಾದ ತಿಪ್ಪೇರುದ್ರಪ್ಪ, ಚಂದ್ರಪ್ಪ ಕೊಪ್ಪದ, ತಿಪ್ಪೇರುದ್ರಪ್ಪ, ಸಮಾದಪ್ಪ, ನಾಗರಾಜ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.