ADVERTISEMENT

ಮಳೆ ಕಣ್ಣಾಮುಚ್ಚಾಲೆ, ಒಣಗುತ್ತಿರುವ ಬೆಳೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:43 IST
Last Updated 19 ಜೂನ್ 2024, 14:43 IST
ಸಂತೇಬೆನ್ನೂರು ಸಮೀಪದ ಮಂಗೇನಹಳ್ಳಿ ಬಳಿಯ ಹೊಲದಲ್ಲಿ ಬಾಡುತ್ತಿರುವ ಬೆಳೆಗೆ ಹೆಡೆಕುಂಟೆ ಬೇಸಾಯದಲ್ಲಿ ನಿರತ ರೈತರು
ಸಂತೇಬೆನ್ನೂರು ಸಮೀಪದ ಮಂಗೇನಹಳ್ಳಿ ಬಳಿಯ ಹೊಲದಲ್ಲಿ ಬಾಡುತ್ತಿರುವ ಬೆಳೆಗೆ ಹೆಡೆಕುಂಟೆ ಬೇಸಾಯದಲ್ಲಿ ನಿರತ ರೈತರು   

ಸಂತೇಬೆನ್ನೂರು: ಎರಡು ವಾರಗಳಿಂದ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಮಣ್ಣಿನ ತೇವಾಂಶ ಒಣಗಿದ ಪರಿಣಾಮ ಮೊಳಕೆಯೊಡೆದ ಬೆಳೆ ಬಾಡುತ್ತಿವೆ. ಮತ್ತೆ ಬೆಳೆ ಅಳಿಸಿ ಮರು ಬಿತ್ತನೆ ಮಾಡಬೇಕಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.

‘ಎರಡು ಎಕರೆಯಲ್ಲಿ ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇನೆ. ಬಿತ್ತನೆ ನಂತರ ಒಂದು ಹನಿ ಮಳೆ ಬಿದ್ದಿಲ್ಲ. ಮಳೆ ಬಂದು ಬುಧವಾರಕ್ಕೆ 17 ದಿನಗಳು ಕಳೆದವು. ಬಿತ್ತನೆ ಬೀಜ ಪೂರ್ಣ ಪ್ರಮಾಣದಲ್ಲಿ ಮೊಳಕೆ ಒಡೆದಿಲ್ಲ. ಎರಡು ಎಕರೆ ಬಿತ್ತನೆಗೆ ₹ 20,000 ಖರ್ಚು ಮಾಡಿದ್ದೇನೆ. ಒಂದೆರಡು ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ಅಳಿಸಿ ರಾಗಿ ಬಿತ್ತಲು ಚಿಂತನೆ ಮಾಡುತ್ತಿದ್ದೇನೆ’ ಎನ್ನುತ್ತಾರೆ ಗೆದ್ದಲಹಟ್ಟಿ ರೈತ ಮಂಜುನಾಥ್.

‘ಈಗಾಗಲೇ ನಾಲ್ಕೈದು ಗರಿ ಕಿತ್ತಿರುವ ಮೆಕ್ಕೆಜೋಳ ಸಮೃದ್ಧವಾಗಿ ಬೆಳೆಯುತ್ತಿದೆ. ಮಧ್ಯಾಹ್ನದ ಬಿಸಿಲಿಗೆ ಬಾಡುತ್ತವೆ. ಸಂಜೆ ತಂಪಿಗೆ ಮತ್ತೆ ನಳನಳಿಸುತ್ತವೆ. ಮಳೆ ಬಾರದಿದ್ದಲ್ಲಿ ಒಣಗುವ ಆತಂಕ ಶುರುವಾಗಿದೆ. 10 ಎಕರೆ ಮೆಕ್ಕೆಜೋಳ ಬಿತ್ತನೆಗೆ ₹ 1 ಲಕ್ಷಕ್ಕಿಂತ ಹೆಚ್ಚು ಖರ್ಚಾಗಿದೆ. ಮಳೆ ನಿರೀಕ್ಷೆಯಲ್ಲಿ ಹೆಡೆಕುಂಟೆ ಹೊಡೆದು ಕಳೆ ನಿವಾರಣೆ ಮಾಡಲಾಗಿದೆ’ ಎಂದು ರೈತ ಸುರೇಶ್ ದೊಡ್ಡಬಾಯಿ ಹೇಳಿದರು.

ADVERTISEMENT

ಹೋಬಳಿಯ ಮಳೆಯಾಶ್ರಿತ ಸಂತೇಬೆನ್ನೂರು, ಗೆದ್ದಲಹಟ್ಟಿ, ಮಂಗೇನಹಳ್ಳಿ, ಸಿದ್ಧನಮಠ, ಚೆನ್ನಾಪುರ, ಸೋಮಲಾಪುರ, ಹಿರೇಕೋಗಲೂರು, ತಣಿಗೆರೆ, ದೊಡ್ಡಬ್ಬಿಗೆರೆ, ಕುಳೇನೂರು, ದೊಡ್ಡೇರಿಕಟ್ಟೆ, ಕಾಕನೂರು ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ.

‘ಈಗಾಗಲೇ 5,000 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಇದರಲ್ಲಿ ಬಹುಪಾಲು ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆ ಆಗಿದೆ. ಬಹುತೇಕ ಗ್ರಾಮಗಳ ಕ್ಷೇತ್ರ ವೀಕ್ಷಣೆ ನಡೆಸಲಾಗಿದೆ. ಮಳೆ ಕೈಕೊಟ್ಟ ಕಾರಣ ಅಲ್ಲಲ್ಲಿ ಫಸಲು ಬಾಡುತ್ತಿದೆ. ಎರಡು ಮೂರು ದಿನಗಳಲ್ಲಿ ಮಳೆ ಬಂದರೆ ಸುಧಾರಣೆ ಕಾಣಬಹುದು. ಬೆಳೆ ವಿಮೆಗೆ ಜುಲೈ 31ರವರೆಗೆ ಕಾಲಾವಕಾಶ ಇದೆ. ಬೆಳೆ ವಿಮೆ ಗ್ರಾಮ ಒನ್ ಕೇಂದ್ರಗಳಲ್ಲಿ ಮಾಡಿಸಬೇಕು. ಮಳೆ ಬಾರದಿದ್ದಲ್ಲಿ ಪಾಪ್‌ಕಾರ್ನ್ ಮೆಕ್ಕೆಜೋಳ ಬೆಳೆ ಅಳಿಸಿದರೆ ಮೆಕ್ಕೆಜೋಳ ಬಿತ್ತನೆಗೆ ಇನ್ನೂ ಕಾಲಾವಕಾಶ ಇದೆ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಮೆಹತಾಬ್ ಅಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.