ದಾವಣಗೆರೆ: ಕ್ರೀಡೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಕೆಯಾಗಬೇಕಿದ್ದ ನಗರದ ಹೈಸ್ಕೂಲ್ ಮೈದಾನವು ಆಟಗಳಿಗಿಂತ ಹೆಚ್ಚಾಗಿ ಬೇರೆ ಬೇರೆ ಕಾರ್ಯಗಳಿಗೆ ಬಳಕೆಯಾಗುತ್ತಿದೆ.
ವಿದ್ಯಾರ್ಥಿಗಳು ಸೇರಿದಂತೆ ಕ್ರೀಡಾಪಟುಗಳಿಗೆ ಮೀಸಲಾಗಿರಬೇಕಿದ್ದ ಹೈಸ್ಕೂಲ್ ಮೈದಾನದ ಅರ್ಧದಷ್ಟು ಜಾಗವನ್ನು ಸಾರಿಗೆ ಸಂಸ್ಥೆ ಹಾಗೂ ಖಾಸಗಿಯವರ ತಾತ್ಕಾಲಿಕ ಬಸ್ ನಿಲ್ದಾಣಗಳೇ ಆವರಿಸಿಕೊಂಡಿವೆ.
ತಾತ್ಕಾಲಿಕ ಬಸ್ ನಿಲ್ದಾಣಗಳಿಂದ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಕಾರ್ಯಾಚರಣೆ ನಡೆಸುವುದನ್ನು ಸ್ಥಗಿತಗೊಳಿಸಿ ಒಂದೂವರೆ ತಿಂಗಳು ಕಳೆದರೂ, ನಿಲ್ದಾಣದ ಕಟ್ಟಡಗಳ ತೆರವು ಕಾರ್ಯ ಮಾತ್ರ ನಡೆಯುತ್ತಿಲ್ಲ. ಸದ್ಯಕ್ಕೆ ಬಸ್ ನಿಲ್ದಾಣಗಳ ತೆರವು ಕಾರ್ಯ ನಡೆಯುವ ಲಕ್ಷಣಗಳೂ ಕಾಣುತ್ತಿಲ್ಲ.
ಬಸ್ ನಿಲ್ದಾಣವನ್ನು ತೆರವುಗೊಳಿಸಿ ಮೈದಾನವನ್ನು ಸುಸ್ಥಿತಿಗೆ ತರುವ ವಿಚಾರದಲ್ಲಿ ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹಾಗೂ ದಾವಣಗೆರೆ ಸ್ಮಾರ್ಟ್‌ಸಿಟಿ ನಡುವೆ ನಡೆದ ತಿಕ್ಕಾಟ ಸದ್ಯಕ್ಕೆ ಮುಗಿದಿದ್ದರೂ, ನಿಲ್ದಾಣ ತೆರವುಗೊಳಿಸಲು ಮುಹೂರ್ತ ಮಾತ್ರ ನಿಗದಿಯಾಗಿಲ್ಲ.
ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಬಸ್ ನಿಲ್ದಾಣವನ್ನು ಕೆಎಸ್‌ಆರ್‌ಟಿಸಿಯಿಂದ ಹಾಗೂ ಖಾಸಗಿ ಬಸ್ ನಿಲ್ದಾಣವನ್ನು ಸ್ಮಾರ್ಟ್‌ಸಿಟಿಯಿಂದ ತೆರವುಗೊಳಿಸಲು ನಿರ್ಧರಿಸಲಾಗಿದೆ. ಆದರೆ, ನಾನಾ ಕಾರಣಗಳಿಂದ ತೆರವು ಕಾರ್ಯಾಚರಣೆ ನಡೆಯುವುದು ಮತ್ತಷ್ಟು ವಿಳಂಬವಾಗಲಿದೆ.
ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ತೆರವುಗೊಳಿಸಿ ಮೈದಾನವನ್ನು ಸುಸ್ಥಿತಿಗೆ ತರುವಂತೆ ನಗರದ ಕ್ರೀಡಾಪಟುಗಳು ನಿರಂತರವಾಗಿ ಆಗ್ರಹಿಸುತ್ತಲೇ ಇದ್ದಾರೆ. ಸರ್ಕಾರಿ ಪಿ.ಯು.ಸಿ ಕಾಲೇಜಿನಿಂದಲೂ ಈ ಬಗ್ಗೆ ಮನವಿ ಮಾಡಲಾಗಿದೆ.
‘ಸ್ಮಾರ್ಟ್‌ಸಿಟಿಯಿಂದಲೇ ತೆರವು ಕಾರ್ಯ ನಡೆಯಲಿ’ ಎಂದು ಮಹಾನಗರ ಪಾಲಿಕೆ ಹೇಳಿದ್ದರೆ, ‘ಪಾಲಿಕೆಯೇ ತೆರವು ಮಾಡಲಿ’ ಎಂದು ಸ್ಮಾರ್ಟ್‌ಸಿಟಿ ತಿಳಿಸಿತ್ತು. ಈ ಬಗ್ಗೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕರು ಪತ್ರವನ್ನೂ ಬರೆದಿದ್ದರು.
ಪಿ.ಬಿ. ರಸ್ತೆಯಲ್ಲಿ ದಾವಣಗೆರೆ ಸ್ಮಾರ್ಟ್‌ಸಿಟಿ ಅನುದಾನದಲ್ಲಿ ನೂತನವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ ಹೈಸ್ಕೂಲ್ ಮೈದಾನದಿಂದ ಬಸ್‌ಗಳ ಕಾರ್ಯಾಚರಣೆಗೆ ನಿರ್ಧರಿಸಲಾಗಿತ್ತು. ಈ ಕಾರಣಕ್ಕೆ 2019ರ ಡಿಸೆಂಬರ್‌ನಲ್ಲಿ ಹೈಸ್ಕೂಲ್ ಮೈದಾನದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಸ್ಮಾರ್ಟ್‌ಸಿಟಿಯು ಕ್ರಮವಾಗಿ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳನ್ನು ನಿರ್ಮಿಸಿದ್ದವು.
ಇದೇ ಸೆಪ್ಟೆಂಬರ್ 22ರಿಂದ ನೂತನ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಅಕ್ಟೋಬರ್ 7ರಿಂದ ಶಾಮನೂರು ಶಿವಶಂಕರಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಸೇವೆ ಒದಗಿಸುತ್ತಿವೆ.
ಸದ್ಯ ಎರಡೂ ತಾತ್ಕಾಲಿಕ ಬಸ್ ನಿಲ್ದಾಣಗಳು ಖಾಲಿಯಿದ್ದರೂ, ಅವುಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಮಾತ್ರ ವಿಳಂಬ ದೋರಣೆ ಮುಂದುವರಿದಿದೆ. ಇದರಿಂದಾಗಿ ಕ್ರೀಡಾಪಟುಗಳು, ವಿದ್ಯಾರ್ಥಿಗಳು, ನಗರದ ಯುವಜನತೆಗೆ ಕ್ರೀಡಾಕೂಟಕ್ಕೆ ಸೂಕ್ತ ಜಾಗ ದೊರೆಯದಂತಾಗಿದೆ. ಶೀಘ್ರವೇ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ತೆರವು ಮಾಡಿ ಮೈದಾನವನ್ನು ಸುಸ್ಥಿತಿಗೆ ತರುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕು ಎಂದು ಯುವಜನರು ಒತ್ತಾಯಿಸಿದ್ದಾರೆ.
Quote - ಹೈಸ್ಕೂಲ್ ಮೈದಾನದಲ್ಲಿನ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ಕೆಎಸ್‌ಆರ್‌ಟಿಸಿ ಹಾಗೂ ಸ್ಮಾರ್ಟ್‌ಸಿಟಿಯವರು ತೆರವುಗೊಳಿಸಲು ಒಪ್ಪಿದ್ದಾರೆ. ತೆರವಾದ ಬಳಿಕ ಕ್ರೀಡಾ ಚಟುವಟಿಕೆಗೆ ಯಾವುದೇ ಅಡ್ಡಿ ಇರುವುದಿಲ್ಲ ಕೆ.ಚಮನ್‌ಸಾಬ್ ಮೇಯರ್
Cut-off box - ತೆರವು ಕಾರ್ಯ ಯಾಕೆ ವಿಳಂಬ? ತಾತ್ಕಾಲಿಕ ಬಸ್ ನಿಲ್ದಾಣದ ಕಟ್ಟಡವನ್ನು ತೆರವುಗೊಳಿಸಲು ಟೆಂಡರ್ ಕರೆಯಲು ಅನುಮತಿ ಕೋರಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ಇಲ್ಲಿನ ವಿಭಾಗೀಯ ಕಚೇರಿಯಿಂದ ಪತ್ರ ಬರೆಯಲಾಗಿದೆ. ಆದರೆ ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ. ಆದಷ್ಟು ಶೀಘ್ರ ಅನುಮತಿ ಸಿಗುವ ನಿರೀಕ್ಷೆಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಅಧಿಕಾರಿಗಳಿದ್ದಾರೆ. ‘ಕೇಂದ್ರ ಕಚೇರಿಯಿಂದ ಅನುಮತಿ ದೊರೆತ ಬಳಿಕವೇ ಟೆಂಡರ್ ಕರೆಯಬೇಕಾಗುತ್ತದೆ. ಆದರೆ ಟೆಂಡರ್ ಕರೆಯಲು ಸ್ಥಳೀಯ ಸಂಸ್ಥೆಗಳ ಉಪಚುನಾವಣೆ ನೀತಿಸಂಹಿತೆ ಅಡ್ಡಿಯಾಗಿದೆ. ನೀತಿಸಂಹಿತೆ ಮುಗಿಯುವವರೆಗೂ ಟೆಂಡರ್ ಕರೆಯಲಾಗುವುದಿಲ್ಲ. ಆ ಬಳಿಕ ಟೆಂಡರ್ ಕರೆದು 15 ದಿನ ಕಾಲಾವಕಾಶ ನೀಡಲಾಗುವುದು. ಟೆಂಡರ್ ಪಡೆದವರು ಕಟ್ಟಡವನ್ನು ಕೆಡವಿ ಎಲ್ಲ ಸಾಮಗ್ರಿಯನ್ನೂ ಅಲ್ಲಿಂದ ಸಾಗಿಸಿ ಮೈದಾನವನ್ನು ಸುಸ್ಥಿತಿಗೆ ತರಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮುಗಿಯಲು ಕನಿಷ್ಠ ಒಂದೂವರೆಯಿಂದ ಎರಡು ತಿಂಗಳಾದರೂ ಬೇಕಾಗುತ್ತದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್.ಹೆಬ್ಬಾಳ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
Cut-off box - ‘ಚರ್ಚಿಸಿ ತೀರ್ಮಾನ’ ‘ಸರ್ಕಾರಿ ಬಸ್ ನಿಲ್ದಾಣದ ತೆರವಿನ ಬಳಿಕ ಖಾಸಗಿ ಬಸ್ ನಿಲ್ದಾಣವನ್ನು ಸ್ಮಾರ್ಟ್‌ಸಿಟಿಯಿಂದಲೇ ತೆರವು ಮಾಡಲು ನಿರ್ಧರಿಸಲಾಗಿದೆ. ಯಾವಾಗ ತೆರವು ಮಾಡುವುದು ಹೇಗೆ ಮಾಡುವುದು ಎಂಬ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನ ತೆಗೆದುಕೊಂಡಿಲ್ಲ. ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ ಈ ಬಗ್ಗೆ ಯೋಜನೆ ರೂಪಿಸಲಾಗುವುದು’ ಎಂದು ದಾವಣಗೆರೆ ಸ್ಮಾರ್ಟ್‌ಸಿಟಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎನ್. ಕೃಷ್ಣಪ್ರಸಾದ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
Cut-off box - ರಾಜಕೀಯ ಸಮಾವೇಶಕ್ಕೆ ಉಚಿತ! ಹೈಸ್ಕೂಲ್ ಮೈದಾನದಲ್ಲಿ ನಡೆಯುವ ರಾಜಕೀಯ ಸಮಾವೇಶಕ್ಕೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಗೆ ಮೈದಾನವನ್ನು ಉಚಿತವಾಗಿ ನೀಡಲಾಗುತ್ತಿದೆ. ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಮೈದಾನದ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಈ ಸಮಿತಿ ಅಧ್ಯಕ್ಷರು. ಮೈದಾನ ಬಳಸಿಕೊಳ್ಳುವವರು ಈ ಸಮಿತಿಗೆ ಅರ್ಜಿ ಸಲ್ಲಿಸುತ್ತಾರೆ. ರೈತರು ರಾಜಕೀಯ ಪಕ್ಷ ಹಾಗೂ ಸಂಘ–ಸಂಸ್ಥೆಗಳಿಗೆ ಮೈದಾನವನ್ನು ಉಚಿತವಾಗಿ ನೀಡುವ ಅವಕಾಶ ಇದೆ. ‘ವಾಣಿಜ್ಯ ಚಟುವಟಿಕೆಗೆ ಮಾತ್ರ ಶುಲ್ಕ ವಿಧಿಸಲಾಗುತ್ತಿದೆ. ಬಳಸಿಕೊಳ್ಳುವ ಭೂವಿಸ್ತೀರ್ಣದ ಆಧಾರದ ಮೇರೆಗೆ ಇದು ನಿರ್ಧಾರವಾಗುತ್ತದೆ. ಸ್ವಚ್ಛತೆ ಧ್ವನಿವರ್ಧಕದ ಬಳಕೆಗೆ ಸಂಬಂಧಿಸಿದ ತಿಳಿವಳಿಕೆ ಕೊಟ್ಟು ಅನುಮತಿ ನೀಡಲಾಗುತ್ತದೆ. ರಾಜಕೀಯ ಪಕ್ಷಗಳಿಗೆ ಹಿಂದಿನಿಂದಲೂ ಶುಲ್ಕ ರಹಿತ ಅವಕಾಶ ನೀಡುತ್ತ ಬರಲಾಗಿದೆ’ ಎನ್ನುತ್ತಾರೆ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.