ADVERTISEMENT

‘ಮೈತ್ರಿ’ ಯೋಜನೆ: ನೆರವಿಗೆ ನಿರಾಸಕ್ತಿ!

ರಾಜ್ಯದಲ್ಲಿರುವವರು 10,939 ಮಂದಿ: ಮಾಸಾಶನ ಪಡೆಯುವವರ ಸಂಖ್ಯೆ 2,238

ರಾಮಮೂರ್ತಿ ಪಿ.
Published 19 ನವೆಂಬರ್ 2024, 21:57 IST
Last Updated 19 ನವೆಂಬರ್ 2024, 21:57 IST
ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್‌ ನಿಲ್ದಾಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆಯಲ್ಲಿ ತೊಡಗಿರುವುದು
ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್‌ ನಿಲ್ದಾಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆಯಲ್ಲಿ ತೊಡಗಿರುವುದು   

ದಾವಣಗೆರೆ: ಹಿಂಜರಿಕೆ ಹಾಗೂ ಯೋಜನೆ ಬಗೆಗಿನ ಮಾಹಿತಿ ಕೊರತೆಯಿಂದಾಗಿ ಬಹುಪಾಲು ಲಿಂಗತ್ವ ಅಲ್ಪಸಂಖ್ಯಾತರು ಸರ್ಕಾರದ ‘ಮೈತ್ರಿ’ ಯೋಜನೆಯ ಮಾಸಾಶನದಿಂದ ದೂರ ಉಳಿಯುತ್ತಿದ್ದಾರೆ. ಸರ್ಕಾರ ಆರ್ಥಿಕ ನೆರವು ನೀಡಿದರೂ ಅದರ ಪ್ರಯೋಜನ ಪಡೆಯಲಾಗದೇ ಭಿಕ್ಷಾಟನೆ ಹಾಗೂ ಇನ್ನಿತರ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ ಒಟ್ಟು 10,939 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಸಮುದಾಯ ಆಧರಿತ ಸಂಘಟನೆಗಳಲ್ಲಿ (ಸಿಬಿಒ) ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 2,238 ಮಂದಿ ಮಾತ್ರ ‘ಮೈತ್ರಿ’ ಯೋಜನೆಯಡಿ ಮಾಸಾಶನ ಪಡೆಯುತ್ತಿದ್ದಾರೆ. ಸಿಬಿಒಗಳಲ್ಲಿ ಹೆಸರು ನೋಂದಾಯಿಸಿಕೊಳ್ಳದವರ ಸಂಖ್ಯೆಯೇ ಹೆಚ್ಚು ಎಂದು ಅಧಿಕಾರಿಗಳು ಹೇಳುತ್ತಾರೆ.

ದಾವಣಗೆರೆ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ‘ಅಭಯ ಸ್ಪಂದನ’ ಸಿಬಿಒ ಸಂಸ್ಥೆಯಲ್ಲಿ ಒಟ್ಟು 1,309 ಜನ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ‘ಮೈತ್ರಿ’ ಯೋಜನೆಗೆ ಇದೇ ಅಕ್ಟೋಬರ್‌ ಅಂತ್ಯದವರೆಗೆ 53 ಜನ ಮಾತ್ರವೇ ಹೆಸರು ನೋಂದಾಯಿಸಿಕೊಂಡಿದ್ದಾರೆ.

ADVERTISEMENT

ರಾಜ್ಯ ಸರ್ಕಾರವು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಹಾಯ ಮಾಡುವ ಉದ್ದೇಶದಿಂದ 2013ರಲ್ಲಿ ಮೈತ್ರಿ ಯೋಜನೆ ಆರಂಭಿಸಿತ್ತು. ಈ ಯೋಜನೆಯಡಿ ಫಲಾನುಭವಿಗಳಿಗೆ ₹ 800 ಮಾಸಾಶನ ನೀಡಲಾಗುತ್ತಿದೆ. ಆರಂಭದಲ್ಲಿ ₹ 500 ಇದ್ದ ಮಾಸಾಶನವನ್ನು 2018ರಲ್ಲಿ ₹6 00ಕ್ಕೆ, 2022ರಲ್ಲಿ ₹ 800ಕ್ಕೆ ಹೆಚ್ಚಿಸಲಾಗಿದೆ.

ಹಿಂದೇಟಿಗೆ ಕಾರಣವೇನು?:

‘ಮೈತ್ರಿ’ ಯೋಜನೆಯ ನೋಂದಣಿಗೆ ಲಿಂಗತ್ವ ಅಲ್ಪಸಂಖ್ಯಾತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದಾಗ ಗ್ರಾಮ ಆಡಳಿತ ಅಧಿಕಾರಿಗಳು ಅರ್ಜಿದಾರರ ಮನೆಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸುತ್ತಾರೆ. ಹೀಗೆ ಅಧಿಕಾರಿಗಳು ಮನೆಗೆ ಹೋಗಿ ಪರಿಶೀಲನೆ ನಡೆಸುವುದರಿಂದ ತಮ್ಮ ವಿಷಯ ಬಹಿರಂಗಗೊಳ್ಳುತ್ತದೆ ಎಂಬ ಆತಂಕ ಬಹುತೇಕ ಲಿಂಗತ್ವ ಅಲ್ಪಸಂಖ್ಯಾತರಲ್ಲಿದೆ. ಹೀಗಾಗಿಯೇ ಹೆಚ್ಚಿನವರು ಈ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ.

‘ಲಿಂಗತ್ವ ಅಲ್ಪಸಂಖ್ಯಾತರ ಪೈಕಿ ಹಲವರು ತಮ್ಮ ಬಗ್ಗೆ ನೆರೆಹೊರೆಯವರಿಗೂ ತಿಳಿಯಬಾರದೆಂದೇ ಬಯಸುತ್ತಾರೆ. ಬೇರೆಬೇರೆ ವೃತ್ತಿಗಳಲ್ಲಿ ತೊಡಗಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಮೈತ್ರಿ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಅಧಿಕಾರಿಗಳು ಪರಿಶೀಲನೆಗೆಂದು ಮನೆಗೆ ಬಂದಾಗ  ಮುಜುಗರ ಉಂಟಾಗುತ್ತದೆ ಎಂಬ ಮನಃಸ್ಥಿತಿ ಹಲವರಲ್ಲಿ ಇದೆ’ ಎಂದು ‘ಅಭಯ ಸ್ಪಂದನ’ ಸಂಸ್ಥೆಯ ಅಧ್ಯಕ್ಷೆ ಚೈತ್ರಾ ಎಸ್‌. ಹೇಳುತ್ತಾರೆ.

‘ಆಧಾರ್ ಕಾರ್ಡ್‌ ಸೇರಿದಂತೆ ಇನ್ನಿತರ ದಾಖಲೆಗಳಲ್ಲಿ ಮೂಲ ಹೆಸರುಗಳಿವೆ. ಹಲವರು ಲಿಂಗ ಪರಿವರ್ತನೆಗೆ ಒಳಗಾದ ಮೇಲೂ ದಾಖಲೆಗಳಲ್ಲಿ ಹೆಸರು ತಿದ್ದುಪಡಿ ಮಾಡಿಸಿಕೊಂಡಿಲ್ಲ. ಸಮರ್ಪಕ ದಾಖಲೆಗಳ ಕೊರತೆಯಿಂದಾಗಿಯೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಹಲವರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಅವರು ತಿಳಿಸುತ್ತಾರೆ.

‘ಭಿಕ್ಷಾಟನೆಯಲ್ಲೇ ಮುಂದುವರಿಯುವ ಉದ್ದೇಶವಿಲ್ಲ. ಉನ್ನತ ಶಿಕ್ಷಣ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳುವ ಬಯಕೆಯಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಬಿ.ಎ. ಪದವಿ ಪಡೆಯಲು ನಿರ್ಧರಿಸಿದ್ದೇನೆ. ಈಗಾಗಲೇ ನಗರದ ಕಾಲೇಜೊಂದರ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ್ದು, ಪ್ರವೇಶ ನೀಡಲು ಒಪ್ಪಿದ್ದಾರೆ’ ಎಂದು ದ್ವಿತೀಯ ಪಿಯುಸಿ ಓದಿರುವ ಗೌತಮಿ ಹೇಳಿದರು.

ಚೈತ್ರಾ ಎಸ್‌.

‘ಮೈತ್ರಿ’ ಫಲಾನುಭವಿಗಳಿಗೆ ₹ 800 ಮಾಸಾಶನ ಲಿಂಗತ್ವ ಅಲ್ಪಸಂಖ್ಯಾತರಿಗೆ ಪರಿಶೀಲನೆಯ ಭೀತಿ ಯೋಜನೆ ಬಗ್ಗೆ ಜಾಗೃತಿಯ ಕೊರತೆಯೂ ಕಾರಣ

ಲಿಂಗತ್ವ ಅಲ್ಪಸಂಖ್ಯಾತರಿಗೆ ಮನೆ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಹಲವು ಕುಟುಂಬಗಳು ಇಂದಿಗೂ ಲಿಂಗತ್ವ ಅಲ್ಪಸಂಖ್ಯಾತರನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ
ಚೈತ್ರಾ ಎಸ್. ಅಭಯ ಸ್ಪಂದನ ಸಂಸ್ಥೆಯ ಅಧ್ಯಕ್ಷೆ

‘ಬಾಡಿಗೆ ಮನೆ ದೊರೆಯುವುದಿಲ್ಲ’

‘ಲಿಂಗತ್ವ ಅಲ್ಪಸಂಖ್ಯಾತರು ವಾಸಿಸಲು ಬಾಡಿಗೆಗೆ ಮನೆಗಳೇ ದೊರೆಯುವುದಿಲ್ಲ. ಸಿಕ್ಕರೂ ಅಧಿಕ ಬಾಡಿಗೆ ಕೇಳುತ್ತಾರೆ. ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ’ ಎಂದು ಗೊಂಬೆ ಎಂಬುವವರು ಸಂಕಷ್ಟ ತೋಡಿಕೊಂಡರು. ‘ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ ಭಿಕ್ಷಾಟನೆ ಮಾಡುತ್ತೇವೆ. ಕೆಲವೊಮ್ಮೆ ನಮ್ಮವರ ಅತಿರೇಕದ ವರ್ತನೆಯಿಂದಾಗಿ ಸಮುದಾಯದ ಎಲ್ಲರೂ ಪೊಲೀಸರಿಂದ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೈತ್ರಿ’ ಯೋಜನೆ ಮಾನದಂಡಗಳು

* ವಾರ್ಷಿಕ ಆದಾಯ ಮಿತಿ ₹ 32000

* ವೃದ್ಧಾಪ್ಯ ವೇತನ ವಿಧವಾ ವೇತನ ಸಂಧ್ಯಾ ಸುರಕ್ಷಾ ಯೋಜನೆ ದೇವದಾಸಿ ವೇತನ ಅಂಗವಿಕಲರ ವೇತನ ಸೇರಿದಂತೆ ಯಾವುದೇ ಬಗೆಯ ಮಾಸಾಶನ ಪಡೆಯುತ್ತಿರಬಾರದು‌ ಬೇಕಿರುವ ದಾಖಲೆಗಳು * ಬಿಪಿಎಲ್‌ ಪಡಿತರ ಚೀಟಿ

* ಚುನಾವಣಾ ಗುರುತಿನ ಚೀಟಿ ಅಥವಾ ವಿಳಾಸ ದೃಢೀಕರಣ ಪತ್ರ

* ಲಿಂಗತ್ವ ಅಲ್ಪಸಂಖ್ಯಾತರೆಂದು ಸಮುದಾಯ ಆಧರಿತ ಸಂಸ್ಥೆಯಿಂದ (ಸಿಬಿಒ) ಪಡೆದ ಸದಸ್ಯತ್ವ ಪ್ರಮಾಣ ಪತ್ರ

* ಬ್ಯಾಂಕ್‌ ವಿವರ ಆಧಾರ್‌ ಕಾರ್ಡ್ ಪ್ರತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.