ಜಗಳೂರು: ಪ್ರಸಕ್ತ ಮುಂಗಾರಿನಲ್ಲಿ ತಾಲ್ಲೂಕಿನ ವಿವಿಧೆಡೆ ಉತ್ತಮ ಮಳೆ ಸುರಿಯುತ್ತಿದ್ದು, ಬಿತ್ತನೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.
ಕಸಬಾ, ಸೊಕ್ಕೆ ಹಾಗೂ ಬಿಳಿಚೋಡು ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿದೆ. ಕಳೆದ ವರ್ಷ ತೀವ್ರ ಬರಗಾಲದಿಂದ ಬೆಳೆ ನಾಶವಾಗಿ ತೀವ್ರ ನಷ್ಟ ಅನುಭವಿಸಿರುವ ರೈತರು ಪ್ರಸಕ್ತ ಮುಂಗಾರಿನಲ್ಲಿ ಉತ್ಸಾಹದಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಜನವರಿಯಿಂದ ಜೂನ್ 9ರವರೆಗೆ 122 ಮಿ.ಮೀ. ವಾಡಿಕೆ ಮಳೆ ಬದಲಿಗೆ, 187 ಮಿ.ಮೀ. ಮಳೆಯಾಗಿದ್ದು, ಎಲ್ಲೆಡೆ ಬಿತ್ತನೆಗೆ ಭೂಮಿ ಹದಗೊಂಡಿದೆ.
ಉತ್ತಮ ಮಳೆಯಿಂದ ರೈತಾಪಿ ಸಮುದಾಯದಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದ್ದು, ಹಿಂದಿನ ವರ್ಷದ ಬರಗಾಲದ ಕಹಿಯನ್ನು ಮರೆತು ಬಿತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
‘ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿಗೆ 54,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದ್ದು, ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸಲಾಗಿದೆ. 900 ಕ್ವಿಂಟಲ್ ಮೆಕ್ಕೆಜೋಳ ಹಾಗೂ ಸೋಯಾಬಿನ್, ತೊಗರಿ ಸೇರಿ ಈಗಾಗಲೇ 1,200 ಕ್ವಿಂಟಲ್ ಬಿತ್ತನೆ ಬೀಜ ತರಿಸಿ ಇಡಲಾಗಿದೆ. 2,300 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ತೊಗರಿ ಬಿತ್ತನೆ ಕಾರ್ಯ ಮುಗಿದಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಕಸಬಾ, ಹೊಸಕೆರೆ ಹಾಗೂ ಬಿಳಿಚೋಡು ರೈತ ಸಂಪರ್ಕ ಕೇಂದ್ರಗಳು ಮತ್ತು ಸೊಕ್ಕೆ, ಅಣಬೂರು, ಬಿದರಕೆರೆಯ ರೈತ ಉತ್ಪಾದಕ ಕಂಪನಿಗಳು ಮತ್ತು ಕೆಚ್ಚೇನಹಳ್ಳಿ, ಬಸವನಕೋಟೆ ಮತ್ತು ಹಾಲೇಕಲ್ಲು ಮುಂತಾದ ಸಹಕಾರ ಸಂಘಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತೆನ ಬೀಜ ಮತ್ತು ರಸಗೊಬ್ಬರ ದಾಸ್ತಾನು ಇದ್ದು, ರೈತರು ಸಮೀಪದ ಕೇಂದ್ರಗಳಿಗೆ ತೆರಳಿ ಬೀಜ, ಗೊಬ್ಬರ ಪಡೆಯಬಹುದಾಗಿದೆ’ ಎಂದು ತಿಳಿಸಿದ್ದಾರೆ.
‘ತಾಲ್ಲೂಕಿನಲ್ಲಿ ಸಮೃದ್ಧವಾಗಿ ಮಳೆ ಸುರಿಯುತ್ತಿದ್ದು, ಆಶಾದಾಯಕ ವಾತಾವರಣ ಇದೆ. ರೈತರಿಗೆ ಬಿತ್ತನೆಗೆ ಅಗತ್ಯವಾದ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಸಕಾಲದಲ್ಲಿ ಪೂರೈಕೆ ಮಾಡುವಂತೆ ಈಗಾಗಲೇ ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಖಾಸಗಿಯವರ ಅಂಗಡಿಗಳು ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಕಳಪೆ ಬೀಜ ವಿತರಣೆ ಮಾಡುವ ಬಗ್ಗೆ ದೂರುಗಳು ಕೇಳಿಬಂದಲ್ಲಿ ಸಂಬಂಧಪಟ್ಟವರನ್ನೇ ಹೊಣೆ ಆಗಿಸಲಾಗುವುದು’ ಎಂದು ಶಾಸಕ ಬಿ.ದೇವೇಂದ್ರಪ್ಪ ಎಚ್ಚರಿಸಿದ್ದಾರೆ.
‘ಮೆಕ್ಕೆಜೋಳ ಮುಂತಾದ ಬೆಳೆಗಳ ಮಧ್ಯೆ ತೊಗರಿ ಅಕ್ಕಡಿಯನ್ನು ಕಡ್ಡಾಯವಾಗಿ ಬೆಳೆಯಬೇಕು. ಪ್ರತಿ 3 ಅಡಿ ಅಂತರದಲ್ಲಿ ಎರಡು ತೊಗರಿ ಬೀಜಗಳನ್ನು ಕೈಯಿಂದ ನೆಲದಲ್ಲಿ ಊರಬೇಕು. ತೊಗರಿಯಂತಹ ದ್ವಿದಳ ಧಾನ್ಯಗಳ ಬೆಳೆಯಿಂದ ಭೂಮಿ ಫಲವತ್ತಾಗಲಿದ್ದು, ರೋಗಗಳಿಂದ ಮುಕ್ತವಾಗಿ ಲಾಭದಾಯಕ ಇಳುವರಿ ಸಿಗಲಿದೆ. ರೈತರು ಅಧಿಕೃತ ಬೀಜ, ಗೊಬ್ಬರ ಮಾರಾಟಗಾರರಿಂದ ಬಿಲ್ ಪಡೆದು ಖರೀದಿಸಬೇಕು. ನ್ಯಾನೋ ಡಿ.ಎ.ಪಿ ಮತ್ತು ನ್ಯಾನೋ ಯೂರಿಯಾ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದರ ಬಳಕೆಗೆ ಆದ್ಯತೆ ನೀಡಬೇಕು’ ಎಂದು ಕೃಷಿ ಅಧಿಕಾರಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.