ದಾವಣಗೆರೆ: ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ನಗರದ ಸ್ಥಳೀಯ ಸಮಸ್ಯೆಗಳನ್ನು ಸರಿಪಡಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸೊಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ನೇತೃತ್ವದಲ್ಲಿ ಮಂಗಳವಾರ ನಗರದ ಜಯದೇವ ಸರ್ಕಲ್‌ನಲ್ಲಿ ಮತ್ತು ಪಾಲಿಕೆ ಎದುರು ಪ್ರತಿಭಟನೆ ನಡೆಯಿತು.
ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳಿಂದ ಜನ ಜರ್ಜರಿತರಾಗಿದ್ದರು. ಈಗ ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಏರಿಸಿ ಕನಿಷ್ಠ ನೆಮ್ಮದಿಯೂ ದೊರಕದಂತೆ ಮಾಡಿದೆ ಎಂದುಎಸ್‌ಯುಸಿಐ ರಾಜ್ಯ ಸಮಿತಿ ಸದಸ್ಯ ಡಾ. ಸುನೀತ್ ಕುಮಾರ್ ಕುಮಾರ್ ಆರೋಪಿಸಿದರು.
ನಗರದಲ್ಲಿ ಕುಡಿಯುವ ನೀರಿನ ಜೊತೆ ಚರಂಡಿ ನೀರು ಬೆರೆಯುತ್ತಿದೆ. ಚರಂಡಿಗಳು ತುಂಬಿ ಹರಿಯುತ್ತಿವೆ. ಮನೆಗಳಿಗೆ ಚರಂಡಿ ನೀರು ನುಗ್ಗುತ್ತಿದೆ. ಚರಂಡಿಗಳಲ್ಲಿ, ರಸ್ತೆಗಳಲ್ಲಿ ಕಸ ತುಂಬಿವೆ. ನೈರ್ಮಲ್ಯ ದೂರವಾಗಿದೆ. ರೋಗ-ರುಜಿನಗಳು ಹರಡುತ್ತಿವೆ. ಜನರು ಪಾಲಿಕೆ ಸದಸ್ಯರನ್ನು ಪ್ರಶ್ನಿಸಿದರೆ, ಅವರು ಪಾಲಿಕೆಯ ಅಧಿಕಾರಿಗಳನ್ನು ದೂರುತ್ತಾರೆ. ಇವರೆಲ್ಲರ ಬೇಜವಾಬ್ದಾರಿತನಕ್ಕೆ, ಭ್ರಷ್ಟಾಚಾರಕ್ಕೆ ಜನ ಬಲಿಪಶುಗಳಾಗಿದ್ದಾರೆ ಎಂದು ದೂರಿದರು.
ಎಲ್ಲ ಕಾಯಂ ನೇಮಕಾತಿಗಳಿಗೆ ತಿಲಾಂಜಲಿ ನೀಡುತ್ತಿರುವ ಸರ್ಕಾರ ಇದೀಗ ‘ಅಗ್ನಿಪಥ’ ದಂತಹ ಯುವ ವಿರೋಧಿ ಯೋಜನೆಯನ್ನು ತರುವುದರ ಮೂಲಕ ಬಿರುಗಾಳಿಯನ್ನು ಎಬ್ಬಿಸಿದೆ ಎಂದು ರಾಜ್ಯ ಸಮಿತಿ ಸದಸ್ಯೆ ಅಪರ್ಣ ಬಿ.ಆರ್. ತಿಳಿಸಿದರು.
ಎಸ್‌ಯುಸಿಐ ಸದಸ್ಯರಾದ ಪರಶುರಾಮ್, ತಿಪ್ಪೇಸ್ವಾಮಿ, ಭಾರತಿ, ನಾಗಸ್ಮಿತ, ಮಧು ತೊಗಲೇರಿ, ಕಾವ್ಯ ಬಿ, ಪುಷ್ಪಾ ಜಿ, ಪೂಜಾ ಅಭಿಷೇಕ್, ವಿವಿಧ ಬಡಾವಣೆಗಳಿಂದ ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.