ADVERTISEMENT

ಸುಗಮ ಸಂಗೀತ ಕನ್ನಡದ ಅಸ್ಮಿತೆ: ಕಿಕ್ಕೇರಿ ಕೃಷ್ಣಮೂರ್ತಿ

ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಕಾರ್ಯಾಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 16:04 IST
Last Updated 17 ಜೂನ್ 2024, 16:04 IST
ಕಿಕ್ಕೇರಿ ಕೃಷ್ಣಮೂರ್ತಿ
ಕಿಕ್ಕೇರಿ ಕೃಷ್ಣಮೂರ್ತಿ   

ದಾವಣಗೆರೆ: ವಿಶ್ವದ ಬೇರೆ ಯಾವ ಭಾಗದಲ್ಲಿಯೂ ಇರದ ಕಲಾ ಪ್ರಕಾರ ಸುಗಮ ಸಂಗೀತ. ಕನ್ನಡದ ಅಸ್ಮಿತೆಯಂತೆ ಇರುವ ಸುಗಮ ಸಂಗೀತದ ಬಗ್ಗೆ ಕನ್ನಡಿಗರು ಹೆಮ್ಮೆಪಡಬೇಕು ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಕಾರ್ಯಾಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಅನುಶ್ರೀ ಸಂಗೀತ ಶಾಲೆ ಹಾಗೂ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ಸ್ವರಾಭರಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮರಾಠಿ ರಂಗಗೀತೆ ಅನುಸರಿಸಿ ಹುಟ್ಟಿದ ಸುಗಮ ಸಂಗೀತ ಪ್ರತ್ಯೇಕ ಅಸ್ಮಿತೆ ಉಳಿಸಿಕೊಂಡಿದೆ. ಹಿಂದಿ, ತಮಿಳು, ಮರಾಠಿ ಸೇರಿ ಬೇರೆ ಯಾವುದೇ ಭಾಷೆಯಲ್ಲಿ ಈ ಕಲಾ ಪ್ರಕಾರ ಇಲ್ಲ. ಬದುಕಿಗೆ ಔಷಧ ನೀಡುವ ಗುಣ ಈ ಸಂಗೀತಕ್ಕೆ ಇದೆ. ಸ್ನೇಹ, ಪ್ರೀತಿಯ ಅನ್ವರ್ಥನಾಮ ಕೂಡ ಸುಗಮ ಸಂಗೀತ’ ಎಂದು ಹೇಳಿದರು.

ADVERTISEMENT

‘ನಾನೊಬ್ಬ ಸಂಗೀತಗಾರ ಎಂಬ ಅಹಂಕಾರ ಮೊದಲು ಇತ್ತು. ಸುಗಮ ಸಂಗೀತವನ್ನು ಹಾಡುವುದು ಎಷ್ಟು ಕಷ್ಟ ಎಂಬುದು ಗಾಯಕ ಸಿ.ಅಶ್ವಥ್ ಗರಡಿಗೆ ಬಂದಾಗ ತಿಳಿಯಿತು. ಶಾಸ್ತ್ರೀಯ ಸಂಗೀತ ಕಲಿತಾಕ್ಷಣ ಸುಗಮ ಸಂಗೀತ ಸುಲಭವಾಗಿ ನಿಲುಕದು. ನಿಜಕ್ಕೂ ಇದೊಂದು ತಪಸ್ಸು. ಸುಗಮ ಸಂಗೀತ ಬದುಕಿನ ಭಾಗವಾಗಿದ್ದಕ್ಕೆ ಹೆಮ್ಮೆ ಇದೆ’ ಎಂದು ನುಡಿದರು.

‘ಬೆಂಗಳೂರು, ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅಂತಹ ಕವಿಗಳಿಗೆ ‘ಸ್ವರಾಭರಣ’ದಂತಹ ಕಾರ್ಯಕ್ರಮಗಳು ನೆರವಾಗುತ್ತವೆ. ಇಲ್ಲಿ ವಾಚಿಸಿದ ಕವನ, ಗೀತೆಗಳು ಯಾವತ್ತೊ ಒಂದು ದಿನ ರಾಜ್ಯದ ಗಮನ ಸೆಳೆಯುತ್ತವೆ. ಈ ಭರವಸೆ ಕವಿ, ಸಂಗೀತಗಾರರನ್ನು ಜೀವಂತವಾಗಿ ಇಡುತ್ತದೆ. ಇತ್ತೀಚೆಗೆ ದೃಶ್ಯ ಮಾಧ್ಯಮ ಸಮಾಜವನ್ನು ಕಲುಷಿತಗೊಳಿಸುತ್ತಿದೆ. ಐದು ಧಾರಾವಾಹಿ ನೋಡಿದರೆ ಸಾಕು ಕುಟುಂಬ ಹಾಳು ಮಾಡಬಹುದು’ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ಕವಿಗಳು ರಚಿಸಿದ ಕಾವ್ಯಕ್ಕೆ ಸ್ವರ ಸಂಯೋಜನೆ ಮಾಡಿ ಹಾಡಲಾಯಿತು. ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರವೀಣ್, ಖಜಾಂಚಿ ಪ್ರಶಾಂತ ಉಡುಪ, ಮೈಸೂರು ಘಟಕದ ಅಧ್ಯಕ್ಷ ವಿ.ನಾಗರಾಜ್, ಶಿವಮೊಗ್ಗ ಘಟಕದ ಅಧ್ಯಕ್ಷರಾದ ಶಾಂತಾ ಎಸ್.ಶಟ್ಟಿ, ಮಂಡ್ಯ ಘಟಕದ ಅಧ್ಯಕ್ಷ ಡೆವಿಡ್ ಪ್ರತಿಭಾಂಜಲಿ, ಅನುಶ್ರೀ ಸಂಗೀತ ಶಾಲೆಯ ಸಂಸ್ಥಾಪಕರಾದ ವೀಣಾ ಸದಾನಂದ ಹೆಗಡೆ, ಸಾಲಿಗ್ರಾಮ ಗಣೇಶ ಶೆಣೈ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.