ದಾವಣಗೆರೆ: ಪ್ರವಾಹ ಬಂದು ಹಲವು ಜಿಲ್ಲೆಗಳಲ್ಲಿ ಜನರ ಬದುಕು ತೊಂದರೆಗೆ ಈಡಾಗಿದೆ. ಹಾಗಾಗಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು 6 ದಿನಗಳ ಬದಲು ಒಂದೇ ದಿನ ಮಾಡಲು ನಿರ್ಧರಿಸಲಾಗಿದೆ ಎಂದು ಸಿರಿಗೆರೆ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸೆ.24ರಂದು ಸಿರಿಗೆರೆಯಲ್ಲಿ ನಡೆಯಲಿರುವ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ 27ನೇ ಶ್ರದ್ಧಾಂಜಲಿ ಸಮಾರಂಭಕ್ಕಾಗಿ ಬುಧವಾರ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಭಾಂಗಣದಲ್ಲಿ ನಡೆದ ಅಕ್ಕಿ ಮತ್ತು ಭಕ್ತಿ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ಮಠದಿಂದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ವಸೂಲಿಗೆ ಹೋಗಲಾಗುತ್ತಿತ್ತು. ಈಗ ಭಕ್ತರೇ ಸೇವಾ ಭಾವನೆಯಿಂದ ದೇಣಿಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಬಂದಾಗ ಅವರಿಗೆ ಹೇಗೆ ನೆರವಾಗುವುದು ಎಂದು ಚಿಂತಿಸಲು ಸಿರಿಗೆರೆಯಲ್ಲಿ ರಾತ್ರಿಯೇ ಸಭೆ ಸೇರಲಾಯಿತು. ತಕ್ಷಣವೇ ಜನರು ಎರಡೂವರೆ ಸಾವಿರ ಜನರಿಗೆ ಬಟ್ಟೆ ಬರೆ, ತಾಯಂದಿರು 15 ಸಾವಿರ ರೊಟ್ಟಿ ತಂದು ಇಟ್ಟಿದ್ದರು. ಧರ್ಮ ಅಂದರೆ ಭಾಷಣವಲ್ಲ. ಧರ್ಮ ಅಂದರೆ ಮಾನವೀಯತೆ. ಇನ್ನೊಬ್ಬರ ಸಂಕಷ್ಟಕ್ಕೆ ಕರಗುವುದು ಧರ್ಮ. ಅದನ್ನು ನಮ್ಮ ಜನ ಅಂದು ತೋರಿಸಿದರು. ಕಣ್ಣೀರಿಗೆ ಜಾತಿ, ಧರ್ಮವಿಲ್ಲ ಎಂದು ಸಾರಿದರು ಎಂದು ಹೇಳಿದರು.
ರಾಜ್ಯದಲ್ಲಿ ಒಂದು ಕಡೆ ಪ್ರವಾಹ, ಇನ್ನೊಂದು ಕಡೆ ಬರ ಇದೆ. ಈ ರೀತಿ ಆಗದಂತೆ ಸರ್ಕಾರ ಸರಿದೂಗಿಸಿಕೊಂಡು ಹೋಗುವ ಯೋಜನೆಗಳನ್ನು ಜಾರಿಗೆ ತರಬೇಕು. ಬರ ಇರುವ ಪ್ರದೇಶಗಳಿಗೆ ನೀರು ಹೆಚ್ಚಿರುವ ಪ್ರದೇಶಗಳಿಂದ ನೀರು ಹರಿಸುವ ಯೋಜನೆ ತರಬೇಕು. ವಿದ್ಯುತ್ ಮತ್ತು ನೀರು ಸರಿಯಾಗಿ ದೊರೆತರೆ ರೈತರು ಬೇರೇನನ್ನೂ ಸರ್ಕಾರದಿಂದ ಕೇಳುವುದಿಲ್ಲ ಎಂದು ತಿಳಿಸಿದರು.
ಶಾಸಕ ಎಸ್.ಎ.ರವೀಂದ್ರನಾಥ್, ದಲ್ಲಾಲರ ಸಂಘದ ಅಧ್ಯಕ್ಷ ಜಿ.ಎಸ್. ಪರಮೇಶ್ವರ ಗೌಡರು, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್.ಡಿ. ಮಹೇಶ್ವರಪ್ಪ, ಉಪಾಧ್ಯಕ್ಷ ಬಿ.ಎಲ್. ಶಿವಳ್ಳಿ ಅವರೂ ಇದ್ದರು.
ಇದೇ ವೇಳೆ ಶ್ರೀಗಳ ಶ್ರದ್ಧಾಂಜಲಿಗೆ 101 ಚೀಲ ಅಕ್ಕಿ, ಗ್ರಾಮಾಂತ ಪ್ರದೇಶದ ಜನರು ₹ 5.59 ಲಕ್ಷ ಹಾಗೂ ತರಳಬಾಳು ಬಡಾವಣೆಯ ನಿವಾಸಿಗಳು ₹ 1.02 ಲಕ್ಷ ಸಂಗ್ರಹಿಸಿ ನೀಡಿದರು.
ನೀರಿಗಾಗಿ ಮುಂದುವರಿದ ಹೋರಾಟ
ಕೆರೆಗಿಗೆ ನೀರು ತುಂಬಿಸುವ ಏತ ನೀರಾವರಿಗಾಗಿ ಜಗಳೂರಿಗೆ ₹ 660 ಕೋಟಿ, ಭರಮಸಾಗರಕ್ಕೆ 1,500 ಕೋಟಿ ವೆಚ್ಚದ ಯೋಜನೆ ತಯಾರಿಸಲಾಗಿತ್ತು. ಇದನ್ನು ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಲಾಗಿತ್ತು. ಈ ಕುರಿತು ಎರಡು ವರ್ಷ ಹೋರಾಟ ಮಾಡಲಾಗಿತ್ತು. ಆದರೆ ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಗಳೂರು ಕೆರೆಗೆ ₹ 250 ಕೋಟಿಗೆ ಸೀಮಿತಗೊಳಿಸಿ ಅನುಮೋದನೆ ನೀಡಿದ್ದರು. ಮತ್ತೆ ಮುಖ್ಯಮಂತ್ರಿ ಜತೆ ಮಾತನಾಡಿ ಆ ಆದೇಶವನ್ನು ರದ್ದುಪಡಿಸಲಾಯಿತು. ಹಾಗಾಗಿ ಜಗಳೂರಿಗೆ ₹ 660 ಕೋಟಿ ಹಾಗೂ ಭರಮಸಾಗರಕ್ಕೆ ₹ 520 ಕೋಟಿ ಮಂಜೂರಾಗಿದೆ. ಹಳೇಬಿಡಿನ ರಣಗಟ್ಟ ವ್ಯಾಪ್ತಿಯ ಕೆರೆ ತುಂಬಿಸುವ ಯೋಜನೆಗೆ ₹ 90 ಕೋಟಿ ಮಂಜೂರಾಗಿದೆ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
‘ಸದ್ಧರ್ಮ ಪೀಠದಲ್ಲಿಯೂ ನೀರು ಚರ್ಚೆ’
ಸಿರಿಗೆರೆ ಮಠದ ಸದ್ಧರ್ಮ ನ್ಯಾಯಪೀಠದಲ್ಲಿಯೂ ಇತರ ಸಮಸ್ಯೆಗಳಿಗಿಂತ ನೀರಾವರಿ ಸಮಸ್ಯೆಗಳೇ ಹೆಚ್ಚು ಚರ್ಚೆಗೆ ಬರುತ್ತಿವೆ. ಜನರ ಸಮಸ್ಯೆ ಆಲಿಸಿ ಅವರ ಕಣ್ಣೀರು ಒರೆಸಲು ಮಾಡುವ ಪ್ರಯತ್ನವು ಭಾಷಣಕ್ಕಿಂತ ಹೆಚ್ಚು ಖುಷಿ ನೀಡುತ್ತದೆ ಎಂದು ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.