ADVERTISEMENT

ಹಾಲು ಕುಡಿದವರ ಮಾತು ಉತ್ತಮವಾಗಿರಲಿ: ತರಳಬಾಳುಶ್ರೀ ಹೇಳಿಕೆಗೆ ಅಣಬೇರು ರಾಜಣ್ಣ

ತರಳಬಾಳುಶ್ರೀ ಹೇಳಿಕೆಗೆ ಉದ್ಯಮಿ ಅಣಬೇರು ರಾಜಣ್ಣ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 20:56 IST
Last Updated 1 ಸೆಪ್ಟೆಂಬರ್ 2024, 20:56 IST
<div class="paragraphs"><p>ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,&nbsp;ಅಣಬೇರು ರಾಜಣ್ಣ</p></div>

ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಅಣಬೇರು ರಾಜಣ್ಣ

   

ದಾವಣಗೆರೆ: ಮುಂದಿನ ಪೀಳಿಗೆಗೆ ತರಳಬಾಳು ಮಠ ಉಳಿಸುವ ಕಾಳಜಿ ಹೊಂದಿದ ಭಕ್ತರ ಬಗ್ಗೆ ಕೀಳು ಮಟ್ಟದ ಟೀಕೆ ಸರಿಯಲ್ಲ. ಹಾಲು ಕುಡಿದು ಪೀಠದ ಮೇಲೆ ಕುಳಿತ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉತ್ತಮವಾಗಿ ಮಾತನಾಡಲಿ ಎಂದು ಉದ್ಯಮಿ ಅಣಬೇರು ರಾಜಣ್ಣ ಅಸಮಾಧಾನ ಹೊರಹಾಕಿದರು.

ವೀರಶೈವ ಲಿಂಗಾಯತ ಭಕ್ತರ ಬಳಗದ ನೇತೃತ್ವದಲ್ಲಿ ನಗರದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆ.4ರಂದು ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಡೆದ ಸಭೆಯನ್ನು ಸ್ವಾಮೀಜಿ ಟೀಕಿಸಿದ ರೀತಿ ಸರಿಯಿಲ್ಲ. ಹಾಲು ಕುಡಿದವರಿಗಿಂತ ಆಲ್ಕೋಹಾಲ್ ಕುಡಿದವರೇ ಚೆನ್ನಾಗಿ ಮಾತನಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸಾವಿರ ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಮಠ ಕಟ್ಟಿದ್ದಾರೆ. ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ 75 ಪ್ರೌಢಶಾಲೆ ಸ್ಥಾಪಿಸಿದ್ದಾರೆ. ಇತ್ತೀಚೆಗೆ ಮಠದ ಶಿಕ್ಷಣ ಸಂಸ್ಥೆ ಸಂಪೂರ್ಣ ಹಾಳಾಗಿವೆ’ ಎಂದು ಆರೋಪಿಸಿದರು.

‘ಆದಾಯ ತೆರಿಗೆಯ ನೆಪದಲ್ಲಿ ಏಕ ವ್ಯಕ್ತಿ ಟ್ರಸ್ಟ್‌ ಡೀಡ್ ರಚಿಸಿಕೊಂಡ ಸ್ವಾಮೀಜಿ, 30 ವರ್ಷ ಏಕೆ ರಹಸ್ಯವಾಗಿಟ್ಟಿದ್ದರು ಎಂಬುದು ಸಮಾಜಕ್ಕೆ ಗೊತ್ತಾಗಬೇಕು. ಸಮಾಜದ ಮುಖಂಡರು, ಗುರುಗಳು ಸೇರಿ ಉತ್ತರಾಧಿಕಾರಿ ನೇಮಕ ಮಾಡಬೇಕು ಎಂಬುದು ಹಳೆ ಬೈಲಾದಲ್ಲಿತ್ತು. ಟ್ರಸ್ಟ್‌ ಡೀಡ್‌ ಪ್ರಕಾರ ಸ್ವಾಮೀಜಿಗೆ ಮಾತ್ರ ಪರಮಾಧಿಕಾರವಿದೆ. 78 ವರ್ಷದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನೂರು ವರ್ಷ ಬದುಕಲಿ ಎಂಬುದು ನಮ್ಮ ಅಪೇಕ್ಷೆ. ಆದರೆ, ಶೀಘ್ರವೇ ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಿ’ ಎಂದು ಒತ್ತಾಯಿಸಿದರು.

ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌, ಸಮುದಾಯದ ಮುಖಂಡರಾದ ಡಿ.ಸಿ.ರಾಜಪ್ಪ, ಬೆನಕಪ್ಪ, ಕೆ.ಸಿದ್ಧಪ್ಪ, ಶ್ರೀನಿವಾಸ ಮೆಳ್ಳೇಕಟ್ಟಿ, ವೆಂಕಟೇಶ್ ಜಕ್ಕಲಿ, ಚೇತನ್ ಎಲೆಬೇತೂರು, ನಾಗರಾಜ್ ಪಲ್ಲಾಗಟ್ಟಿ ಇದ್ದರು.

ಅಣಬೇರು ರಾಜಣ್ಣ

ಮಠ ಉಳಿಯಬೇಕು ಎಂಬುದಷ್ಟೇ ನಮ್ಮ ಕಾಳಜಿ. ಸಮಾಜ ಒಡೆಯುವ ಕಾರ್ಯವನ್ನು ಯಾರೊಬ್ಬರೂ ಮಾಡಬಾರದು. ಸಮಾಜದಲ್ಲಿ ಮೂಡಿರುವ ಗೊಂದಲ ಶೀಘ್ರ ನಿವಾರಣೆಯಾಗಲಿ.

ವಡ್ನಾಳ್ ರಾಜಣ್ಣ ಮಾಜಿ ಶಾಸಕ

‘ಮಾತು ತಪ್ಪಿದ ಪೀಠಾಧಿಪತಿ’

ತರಳಬಾಳು ಮಠದ ಪೀಠತ್ಯಾಗ ಮಾಡುವುದಾಗಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ 2012ರಲ್ಲಿ ಘೋಷಿಸಿದ್ದರು. ನಿವೃತ್ತಿ ಹೊಂದಲು ನಾನೇನು ಸರ್ಕಾರಿ ನೌಕರನೇ ಎಂಬುದಾಗಿ ಈಗ ಪ್ರಶ್ನಿಸುತ್ತಿದ್ದಾರೆ. ಆಡಿದ ಮಾತು ತಪ್ಪುವುದು ಮಠಾಧೀಶರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಆರೋಪಿಸಿದರು. ‘ಪೀಠತ್ಯಾಗ ಘೋಷಣೆ ಮಾಡಿದಾಗ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ 65 ವರ್ಷವಾಗಿತ್ತು. 60 ವರ್ಷಕ್ಕೆ ಪೀಠತ್ಯಾಗ ಮಾಡುವ ಪರಂಪರೆ ಮಠದಲ್ಲಿದೆ. ಭಕ್ತರು ಅಪೇಕ್ಷಿಸದಿದ್ದರೂ ಪೀಠತ್ಯಾಗದ ಬಗ್ಗೆ ತಾವೇ ಮಾಡಿದ್ದ ಘೋಷಣೆಗೆ ಸ್ವಾಮೀಜಿ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಭೇಟಿ ತಿರಸ್ಕರಿಸಿದ ಸ್ವಾಮೀಜಿ’

ತರಳಬಾಳು ಮಠದ ಸದ್ಭಕ್ತರ ಸಮನ್ವಯ ಸಮಿತಿ ಆ.18ರಂದು ನಿಗದಿಪಡಿಸಿದ ಭೇಟಿಯನ್ನು ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿರಸ್ಕರಿಸಿದರು. ಮಠದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸ್ವಾಮೀಜಿಗೆ ಇಷ್ಟವಿಲ್ಲ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ದೂರಿದರು. ‘ಖಾಸಗಿಯಾಗಿ ಯಾರೊಬ್ಬರನ್ನೂ ಭೇಟಿ ಮಾಡುವುದಿಲ್ಲ ಎಂಬುದನ್ನು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಮಠಕ್ಕೆ ಪತ್ರ ಕೊಡಲು ಸೂಚಿಸಿದ್ದಾರೆ. ಹೀಗಾಗಿ ಆ.4ರಂದು ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಸ್ವಾಮೀಜಿ ಭೇಟಿ ಸಾಧ್ಯವಾಗಲಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.