ದಾವಣಗೆರೆ: ‘ಏಕತಾ ಭಾವನೆ ಮೂಡಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡುವುದು ನನ್ನ ಮಣ್ಣು ನನ್ನ ದೇಶ ಅಭಿಯಾನದ ಉದ್ದೇಶವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸುತ್ತಿರುವ ಪ್ರತಿ ಯೋಜನೆಯ ಹಿಂದೆ ದೇಶದ ಅಭಿವೃದ್ಧಿ ಸಂಕಲ್ಪವಿದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನೆಹರೂ ಯುವ ಕೇಂದ್ರ ಹಾಗೂ ದಾವಣಗೆರೆ ವಿವಿಯ ಎನ್ನೆಸ್ಸೆಸ್ ವಿಭಾಗ ಹಾಗೂ ಪ್ರಧಾನ ಅಂಚೆ ಕಚೇರಿ ಸಹಯೋಗದಲ್ಲಿ ಇಲ್ಲಿನ ಬಿ.ಎಸ್. ಚನ್ನಬಸಪ್ಪ ಪದವಿ ಕಾಲೇಜಿನಲ್ಲಿ ತಾಲ್ಲೂಕು ಮಟ್ಟದ ನನ್ನ ಮಣ್ಣು- ನನ್ನ ದೇಶ ಅಭಿಯಾನದಡಿ ಗುರುವಾರ ಹಮ್ಮಿಕೊಂಡಿದ್ದ ಅಮೃತ ಕಳಸ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಒಂದು ರಾಷ್ಟ್ರ ಒಂದು ಕಾರ್ಡ್‌ನತ್ತ ಹೆಜ್ಜೆ ಇಟ್ಟಿರುವ ನರೇಂದ್ರ ಮೋದಿ ಅವರು, ಒಂದು ದೇಶ ಒಂದು ಚುನಾವಣೆ ನಡೆಸುವ ತೀರ್ಮಾನ ಮಾಡಿದ್ದಾರೆ’ ಎಂದರು.
‘ಗ್ರಾಮಗಳಿಂದ ಸಂಗ್ರಹಿಸಿದ ಮಣ್ಣನ್ನು ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನವದೆಹಲಿಗೆ ಕಳುಹಿಸಲಾಗುತ್ತಿದೆ. ಅಲ್ಲಿ ಹುತಾತ್ಮ ಸೈನಿಕರ ಸ್ಥಳದಲ್ಲಿ ಸುಂದರ ಉದ್ಯಾನ ಮಾಡುವ ಉದ್ದೇಶವಿದೆ. ನವದೆಹಲಿಗೆ ಹೋದಾಗೆಲ್ಲ ನಮ್ಮ ಊರಿನ ಮಣ್ಣು ಇಲ್ಲಿದೆ ಎಂದು ಅಭಿಮಾನ ಪಡಲು ಅವಕಾಶ ಸಿಗಲಿದೆ’ ಎಂದರು.
‘ಗ್ರಾಮಾಂತರ ಭಾಗದ ವಿದ್ಯಾರ್ಥಿಗಳೇ ಐಎಎಸ್, ಐಪಿಎಸ್, ಐಎಫ್‌ಎಸ್ ಮೊದಲಾದ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹಾಗಾಗಿ ವ್ಯಾಸಂಗಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು. ಕೇವಲ ಗುಡಿ-ಗೋಪುರಗಳ ನಿರ್ಮಾಣಕ್ಕೆ ಜನರು ಅನುದಾನ ಕೇಳುವುದು ಸರಿಯಲ್ಲ. ಬದಲಾಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಬೇಕು’ ಎಂದು ಹೇಳಿದರು.
‘ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಅಭಿವೃದ್ಧಿಯಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಧಾರ್ಮಿಕ ವಿಚಾರಧಾರೆಯಲ್ಲಿ ನಮ್ಮ ದೇಶ ವಿಶ್ವಕ್ಕೆ ಗುರುವಾಗಿದೆ’ ಎಂದು ಉದ್ಯಮಿ ಬಿ.ಸಿ. ಉಮಾಪತಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಲ್.ಎ.ಕೃಷ್ಣಾ ನಾಯ್ಕ, ಇಒ ರಾಮಭೋವಿ, ನೆಹರೂ ಯುವಕ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಭುಕ್ಯ ಸಂಜೀವ್, ದಾವಣಗೆರೆ ವಿವಿ ಸಾಮಾಜಿಕ ಕಾರ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ. ತಿಪ್ಪೇಶ್, ದಾವಿವಿ ಎನ್ಸೆಸ್ಸೆಸ್ ಕಾರ್ಯಕ್ರಮಾಧಿಕಾರಿ ಅಶೋಕಕುಮಾರ್ ಪಾಳೇದ, ಪ್ರಾಚಾರ್ಯ ಷಣ್ಮುಖಪ್ಪ, ಬಿಜೆಪಿ ಮುಖಂಡ ಯಶವಂತರಾವ್ ಜಾಧವ್, ಎಚ್.ಎನ್. ಶಿವಕುಮಾರ್, ಚಂದ್ರಶೇಖರ್ ಇತರರಿದ್ದರು. ಮಾಜಿ ಸೈನಿಕರಾದ ಗೋಪಾಲ್ ಸೇತ್ ಸನದಿ, ಮನೋಹರ್ ಮಹೇಂದ್ರಕರ್ ಅವರನ್ನು ಸನ್ಮಾನಿಸಲಾಯಿತು. ಬಿಎಸ್ ಚನ್ನಬಸಪ್ಪ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಗುರು ಸ್ವಾಗತಿಸಿದರು. ಎಚ್.ಜಿ. ರೇಖಾ ವಂದಿಸಿದರು.
ಕಾಲೇಜು ಆವರಣದಿಂದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾ ಪಂಚಾಯಿತಿ ಕಚೇರಿಯವರೆಗೆ ಅಮೃತ ಕಳಶ ಯಾತ್ರೆ ನಡೆಸಲಾಯಿತು. ಸ್ವಯಂಸೇವಕರಾದ ಕರಿಬಸಪ್ಪ, ನಿವೇದಿತಾ, ಪಲ್ಲವಿ, ಆಕರ್ಷ್ ಸೇರಿ ಐವರು ವಿದ್ಯಾರ್ಥಿಗಳು ಮಣ್ಣು ಸಂಗ್ರಹಿಸಲಾದ ಮಡಿಕೆಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಅವರ ಮೂಲಕ ದೆಹಲಿಗೆ ರವಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.