ADVERTISEMENT

ದಾವಣಗೆರೆ: ನ್ಯಾಯಾಲಯ ಸಂಕೀರ್ಣಕ್ಕೆ ಬೇಕಿದೆ ಸೌಲಭ್ಯಗಳ ಸ್ಪರ್ಶ

ಕ್ರಿಯಾಯೋಜನೆ ಮಾರ್ಪಡಿಸಲು ವಕೀಲರ ಸಂಘದ ಒತ್ತಾಯ

ಚಂದ್ರಶೇಖರ ಆರ್‌.
Published 23 ಜುಲೈ 2024, 5:18 IST
Last Updated 23 ಜುಲೈ 2024, 5:18 IST
ದಾವಣಗೆರೆಯ ತುಂಗಭದ್ರಾ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ನ್ಯಾಯಾಲಯ ಸಂಕೀರ್ಣ –ಪ್ರಜಾವಾಣಿ ಚಿತ್ರ
ದಾವಣಗೆರೆಯ ತುಂಗಭದ್ರಾ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ನ್ಯಾಯಾಲಯ ಸಂಕೀರ್ಣ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಇಲ್ಲಿನ ಕುಂದವಾಡ ರಸ್ತೆಯ ತುಂಗಭದ್ರಾ ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಹೈಟೆಕ್‌ ಸ್ಪರ್ಶ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.

ನಗರದಿಂದ 12 ಕಿ.ಮೀ. ದೂರದಲ್ಲಿ ಸಂಕೀರ್ಣ ನಿರ್ಮಾಣ ಆಗುತ್ತಿರುವುದರಿಂದ ತ್ವರಿತಗತಿಯಲ್ಲಿ ತಲುಪಲು ಬಾತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ರಸ್ತೆಯ ವಿಸ್ತರಣೆಯೂ ಆಗಬೇಕು ಎಂಬುದು ಸ್ಥಳೀಯರ ಆಗ್ರಹ.

ಹಲವು ವರ್ಷಗಳಿಂದ ಇಲ್ಲಿನ ಮುನ್ಸಿಪಲ್‌ ನ್ಯಾಯಾಲಯದ ಆವರಣದಲ್ಲೇ ವಿವಿಧ ಬಗೆಯ 14 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕಾರಣ ಸುಸಜ್ಜಿತ ನ್ಯಾಯಾಲಯ ಸಂಕೀರ್ಣಕ್ಕೆ 2008ರಲ್ಲಿ ಕ್ರಿಯಾಯೋಜನೆ ತಯಾರಿಸಿ 2009ರಲ್ಲಿ ಅನುಮೋದನೆಯಾಗಿತ್ತು. ಆದರೆ, ಇಲ್ಲಿ ನ್ಯಾಯಾಲಯಗಳ 25 ಕಚೇರಿಗಳಿಗೆ ಕೊಠಡಿಗಳ ಅಗತ್ಯ ಇದ್ದು, ಕೇವಲ 15 ವಿಭಾಗಗಳ ಕಚೇರಿಗಳ ಕೊಠಡಿಗಳಿಗೆ ಸೀಮಿತಗೊಳಿಸಿ ಕ್ರಿಯಾಯೋಜನೆ ತಯಾರಿಸಲಾಗಿದೆ. ಅಲ್ಲದೇ 2019ರಲ್ಲಿ ಕಾಮಗಾರಿ ಆರಂಭವಾಗಿದ್ದು, ಕುಂಟುತ್ತಾ ಸಾಗಿದೆ.

ADVERTISEMENT

8 ಎಕರೆ ಪ್ರದೇಶದಲ್ಲಿ ಅಂದಾಜು 2 ಎಕರೆಯಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಗೊಳ್ಳುತ್ತಿದೆ. ಈಗ ನಿರ್ಮಿಸಲು ಉದ್ದೇಶಿಸಿರುವ ವಕೀಲರ ಭವನದ ಜಾಗ ಸಾಲುತ್ತಿಲ್ಲ. ಇದನ್ನು ವಿಸ್ತರಿಸ‌ಬೇಕಿದೆ. ಸುಮಾರು ₹ 25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಂಕೀರ್ಣದಲ್ಲಿ ₹ 5 ಕೋಟಿ ವೆಚ್ಚದಲ್ಲಿ ವಕೀಲರ ಭವನ ನಿರ್ಮಿಸಲಾಗುತ್ತಿದೆ. ಇದು ಸಾಲದು, 2009ರಲ್ಲಿ ಕ್ರಿಯಾಯೋಜನೆ ತಯಾರಿಸಿದ್ದು ಮಾರ್ಪಡಿಸಬೇಕು ಎಂಬುದು ವಕೀಲರ ಒತ್ತಾಯ.

ಹೈಟೆಕ್‌ ಸ್ಪರ್ಶ ನೀಡಿ:

2009ರಲ್ಲಿ ದಾವಣಗೆರೆಯಲ್ಲಿ 400ರಷ್ಟು ಇದ್ದ ವಕೀಲರ ಸಂಖ್ಯೆ ಈಗ 1,500ಕ್ಕೆ ಏರಿದೆ. ಜತೆಗೆ ಜಿಲ್ಲಾ ಕೇಂದ್ರಕ್ಕೆ ಇತರೆ ತಾಲ್ಲೂಕುಗಳ ವಕೀಲರೂ ಬರುತ್ತಾರೆ. ಇವರೆಲ್ಲರಿಗೂ ಅಗತ್ಯವಾದ ಭವನ,ಪ್ ರತ್ಯೇಕ ಛೇಂಬರ್‌, ವಿಡಿಯೊ ಸಂವಾದ ಸಭಾಂಗಣ ಇಲ್ಲ. ನಿರ್ಮಾಣ ಹಂತದ ಸಮುಚ್ಚಯವು ನಗರದಿಂದ ದೂರ ಇರುವುದರಿಂದ ಸಂಕೀರ್ಣದಲ್ಲೇ ಬ್ಯಾಂಕ್‌, ಅಂಚೆ ಕಚೇರಿ, ಕ್ಯಾಂಟೀನ್‌, ಮಹಿಳೆಯರಿಗೆ ಪ್ರತ್ಯೇಕ ಪಿಂಕ್‌ ಶೌಚಾಲಯ, ಹೆಚ್ಚುವರಿ ಶೌಚಾಲಯ ಅಗತ್ಯವಿದೆ ಎಂಬುದು ಕೋರಿಕೆ. 

ಒಂದೇ ಸೂರಿನಡಿ ಸೌಲಭ್ಯ ಸಿಗಲಿ: 

5 ಅಂತಸ್ತಿನ ಈ ಕಟ್ಟಡದಲ್ಲಿ ಪ್ರತಿ ಅಂತಸ್ತಿನಲ್ಲಿ 5 ನ್ಯಾಯಾಲಯಗಳಿಗೆ ಜಾಗ ಕಲ್ಪಿಸಿದಲ್ಲಿ ಒಟ್ಟು 25 ನ್ಯಾಯಾಲಯಗಳಿಗೆ ಸ್ಥಳಾವಕಾಶ ದೊರೆಯಲಿದೆ. ಆದರೆ ಈಗಿನ ಕ್ರಿಯಾಯೋಜನೆಯಲ್ಲಿ 15ಕ್ಕೆ ಮಾತ್ರ ಅವಕಾಶ ಇದೆ. ಗ್ರಾಹಕರ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ ಬೇರೆ ಇದ್ದು, ಎಲ್ಲ ಒಂದೇ ಸೂರಿನಡಿ ಇರುವಂತಾಗಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ–ಸ್ಟ್ಯಾಂಪ್‌ ಕಾಗದ, ಕ್ಯಾಂಟೀನ್‌ ಹಾಗೂ ಪ್ರಕರಣಗಳಿಗೆ ಅಗತ್ಯವಾದ ದಾಖಲೆಗಳು ಒಂದೇ ಕಡೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್‌.ಎಚ್‌. ಅರುಣ್‌ಕುಮಾರ್‌.

‘ಪಾರ್ಕಿಂಗ್‌ಗೂ ಸ್ಥಳಾವಕಾಶ ಕಲ್ಪಿಸಬೇಕು. ಪ್ರಥಮ ಚಿಕಿತ್ಸೆ ನೀಡಲು ಒಬ್ಬ ವೈದ್ಯ, ನರ್ಸ್‌ಗಾಗಿ ಕೊಠಡಿ, ತಾಯಂದಿರು ಮಗುವಿಗೆ ಹಾಲುಣಿಸುವ ಕ್ಯಾಬಿನ್‌ ನಿಒಳಗೊಂಡಂತೆ ಜನಸ್ನೇಹಿ ನ್ಯಾಯಾಲಯ ಸಂಕೀರ್ಣ ನಿರ್ಮಿಸಬೇಕು‘ ಎಂಬುದು ಅವರ ಒತ್ತಾಯ.

ಕ್ರಿಯಾಯೋಜನೆ ಮಾರ್ಪಡಿಸಿ, ಅನುದಾನ ಹೆಚ್ಚಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಮಳೆ ನೀರು ಹರಿಯಲು ವ್ಯವಸ್ಥೆ ಇಲ್ಲ:

ನಿರ್ಮಾಣಗೊಳ್ಳುತ್ತಿರುವ ಕಟ್ಟಡದಲ್ಲಿ ಮಳೆ ನೀರು ನಿಲ್ಲುತ್ತಿದ್ದು, ನೀರು ಹರಿದು ಹೋಗಲು ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲ. ಈ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ ಎಂಬುದು ವಕೀಲರೊಬ್ಬರ ದೂರು.

ಅವಳಿ ನಗರ ಸಂಪರ್ಕಿಸುವ ರಸ್ತೆಯಾಗಲಿ

ಹರಿಹರದಲ್ಲೇ ಜಿಲ್ಲಾ ನ್ಯಾಯಾಲಯ ನಿರ್ಮಿಸಬೇಕೆಂಬ ಬೇಡಿಕೆ ಇತ್ತು. ಅದಕ್ಕೆ ಮನ್ನಣೆ ಸಿಕ್ಕಿಲ್ಲ. ಈಗ ನಿರ್ಮಿಸುತ್ತಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಹರಿಹರಕ್ಕೂ ಸಮೀಪವಾಗಲಿದೆ. ಬಾತಿ ಬಳಿಯ  ತಪೋವನದಿಂದ ಹೆದ್ದಾರಿ ಸಂಪರ್ಕಿಸುವ ರಸ್ತೆ ಇದ್ದು ಅದನ್ನು ವಿಸ್ತರಿಸಿದರೆ ಕೋರ್ಟ್‌ ಸಮುಚ್ಚಯಕ್ಕೆ ದಾರಿ ಸಮೀಪವಾಗಲಿದೆ. ಇದರಿಂದ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ. ಈಗಿನ ದಾರಿ ಶಾಮನೂರು ಬ್ರಿಡ್ಜ್‌ ದಾಟಿಯೇ ನ್ಯಾಯಾಲಯಕ್ಕೆ ಹೋಗಬೇಕಿದೆ. ಬಾತಿ ಸೇರಿಸಿ ಸಮಾನಾಂತರ ರಸ್ತೆ ನಿರ್ಮಿಸಿದರೆ ಅನುಕೂಲ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕು ಎಂಬುದು  ಎಲ್‌.ಎಚ್‌. ಅರುಣಕುಮಾರ್ ಒತ್ತಾಯ. ‘ಈಗಿರುವ ಸಂಪರ್ಕ ಮಾರ್ಗವೂ ಕೊಂಚ ಅಪಾಯಕಾರಿಯಾಗಿದೆ. ವಕೀಲರು ಕಕ್ಷಿದಾರರು ಕಚೇರಿ ಸಿಬ್ಬಂದಿ ಸೇರಿ 5000ಕ್ಕೂ ಹೆಚ್ಚು ಜನರು ನ್ಯಾಯಾಲಯಕ್ಕೆ ಬರುತ್ತಾರೆ. ಇವರೆಲ್ಲರೂ ಒಂದೇ ಸಮಯಕ್ಕೆ ಬಂದರೆ ಸಂಚಾರ ದಟ್ಟಣೆ ಹೆಚ್ಚಲಿದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ರಸ್ತೆ ವಿಸ್ತರಿಸಬೇಕು’ ಎಂದು ಅವರು ಬೇಡಿಕೆ ಮಂಡಿಸಿದರು.

ಘನತೆಯ ಬದುಕು ಬೇಕು

‘ವಕೀಲರಿಗೂ ಘನತೆಯ ಬದುಕು ಬೇಕು. ಅವರು ಈಗ ಕಕ್ಷಿದಾರರೊಂದಿಗೆ ಬೀದಿಬದಿಯಲ್ಲೇ ಚರ್ಚೆ ಮಾಡುತ್ತಾರೆ. ಕಕ್ಷಿದಾರರೊಂದಿಗೆ ಚರ್ಚಿಸಲು ವಕೀಲರಿಗೆ ಚಿಕ್ಕ ಕ್ಯಾಬಿನ್‌ ಮೀಸಲಿರಿಸಬೇಕು. ಈಚೆಗೆ ವಕೀಲರ ಅಕಾಡೆಮಿ ಸ್ಥಾಪಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದ್ದು ಮಧ್ಯ ಕರ್ನಾಟಕದಲ್ಲಿ ಮಾಡುವ ಪ್ರಸ್ತಾವ ಇದೆ. ನ್ಯಾಯಾಲಯ ಸಂಕೀರ್ಣದಲ್ಲಿ ಅದಕ್ಕೆ ಕಟ್ಟಡ ಮೀಸಲಿಡಬೇಕು. ಆಗ ವಕೀಲರಿಗೆ ತರಬೇತಿ ಕಾರ್ಯಾಗಾರ ವಿಚಾರಸಂಕಿರಣವನ್ನೂ ಆಯೋಜಿಸಲು ಅನುಕೂಲವಾಗಲಿದೆ. ಅದಕ್ಕೆ ಅಗತ್ಯವಿರುವ ಸ್ಥಳಾವಕಾಶವೂ ಇದೆ’ ಎಂಬುದು ಅವರ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.