ಹರಿಹರ: ‘ನದಿಗಳಲ್ಲಿ ಸ್ನಾನ ಮಾಡಿ ಬಟ್ಟೆಗಳನ್ನು ಅಲ್ಲೇ ಬಿಟ್ಟರೆ ಪಾಪಗಳು ಪರಿಹಾರವಾಗುತ್ತವೆ ಎಂದು ಕೆಲವು ಜೋತಿಷಿಗಳು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಹೇಳಿದರು.
ನಗರದ ಹೊರ ವಲಯದಲ್ಲಿರುವ ತುಂಗಭದ್ರಾ ನದಿ ದಡದಲ್ಲಿನ ತುಂಗಭದ್ರಾ ಆರತಿ ಮಂಟಪದ ಆವರಣದಲ್ಲಿ ಶುಕ್ರವಾರ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಮೊದಲ ಹಂತದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ನಾನ ಮಾಡಿ ಬಟ್ಟೆಗಳನ್ನು ಅಲ್ಲೇ ತ್ಯಜಿಸುವುದರಿಂದ ನದಿಯ ನೈರ್ಮಲ್ಯ ಹಾಳಾಗಿ ನೀರು ಕಲುಷಿತವಾಗುತ್ತಿದೆ. ತಾಲ್ಲೂಕಿನ ಉಕ್ಕಡಗಾತ್ರಿ ದೇವಸ್ಥಾನಕ್ಕೆ ಪ್ರತಿ ಅಮಾವಾಸ್ಯೆಯಂದು ಸಾವಿರಾರು ಭಕ್ತರು ಬರುತ್ತಾರೆ. ನದಿಯಲ್ಲಿ ಸ್ನಾನ ಮಾಡಿ ಬಟ್ಟೆಗಳನ್ನು ಅಲ್ಲೇ ಬಿಸಾಡುತ್ತಾರೆ. ದೇವಸ್ಥಾನ ಸಮಿತಿ
ಯವರು ಎರಡು ಜೆಸಿಬಿ ಯಂತ್ರಗಳನ್ನು ಮೀಸಲಿಟ್ಟಿದ್ದು, ಲೋಡ್‌ಗಟ್ಟಲೇ ಬಟ್ಟೆ ತೆರವುಗೊಳಿಸುತ್ತಿದ್ದಾರೆ ಎಂದರು.
ಕೃಷಿಭೂಮಿಗೆ ಅತಿ ಹೆಚ್ಚಿನ ಪ್ರಮಾಣದ ರಾಸಾಯನಿಕ ಬಳಸುವುದರಿಂದ ಭೂಮಿಯ ಮೇಲೆ ಅತ್ಯಾಚಾರವಾಗುತ್ತಿದೆ. ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಪರ್ಯಾವರಣ ಟ್ರಸ್ಟ್ ಹಾಗೂ ನಿರ್ಮಲ ತುಂಗಭದ್ರಾ ಅಭಿಯಾನವು ಶೃಂಗೇರಿಯಿಂದ ಹರಿಹರದವರೆಗೂ ಪಾದಯಾತ್ರೆ ಮಾಡುವ ಮೂಲಕ ಜನಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
‘ಮಣ್ಣು, ನೀರು, ಗಾಳಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾವೆಲ್ಲರೂ ಅಭಿಯಾನಕ್ಕೆ ಕೈಜೋಡಿಸುವ ಅವಶ್ಯಕತೆಯಿದೆ’ ಎಂದು ಮಾಜಿ ಶಾಸಕ ಮಹಿಮ ಪಟೇಲ್ ಅಭಿಪ್ರಾಯಪಟ್ಟರು. ಶಾಸಕ ಬಿ.ಪಿ.ಹರೀಶ್, ಪರಿಸರ ಕಾರ್ಯಕರ್ತ ಬಿ.ಎಂ. ಕುಮಾರಸ್ವಾಮಿ ಮತ್ತಿತರರು ಇದ್ದರು.
ನಗರದ ಹರೀಹರೇಶ್ವರ ದೇವಸ್ಥಾನದದಿಂದ ಬೆಳಿಗ್ಗೆ ಆರಂಭವಾದ ಪಾದಯಾತ್ರೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹಾಗೂ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.