ADVERTISEMENT

ಹೊನ್ನಾಳಿ ಬಳಿಯ ಹತ್ತೂರು ಗ್ರಾಮದಲ್ಲಿ ಮೈಸೂರು ಒಡೆಯರ ಕಾಲದ ಬಂಗಾರದ ನಾಣ್ಯ ಪತ್ತೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 3:58 IST
Last Updated 25 ಫೆಬ್ರುವರಿ 2021, 3:58 IST
ಮುಮ್ಮುಖದಲ್ಲಿನ ಬಂಗಾರದ ನಾಣ್ಯ
ಮುಮ್ಮುಖದಲ್ಲಿನ ಬಂಗಾರದ ನಾಣ್ಯ   

ಹೊನ್ನಾಳಿ: ತಾಲ್ಲೂಕಿನ ಹತ್ತೂರು ಗ್ರಾಮದಲ್ಲಿ ಮೈಸೂರಿನ ಮೂರನೇ ಕೃಷ್ಣರಾಜ ಒಡೆಯರ ಕಾಲಾವಧಿಯ ಬಂಗಾರದ ನಾಣ್ಯ ಪತ್ತೆಯಾಗಿದೆ.

ಇತ್ತೀಚೆಗೆ ಹೊನ್ನಾಳಿ ತಾಲ್ಲೂಕಿನ ಹತ್ತೂರು ಗ್ರಾಮದಲ್ಲಿ ಶ್ರೀ ಮೃತ್ಯುಂಜಯ ಶಿವಾಚಾರ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನಿಂದ ಕ್ಷೇತ್ರ ಕಾರ್ಯ ಕೈಗೊಂಡಾಗ ಬಂಗಾರದ ನಾಣ್ಯ ಪತ್ತೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರವೀಣ ದೊಡ್ಡಗೌಡ್ರ, ‘ಈ ನಾಣ್ಯವು ಹತ್ತೂರು ಗ್ರಾಮದ ಹೊಸ್‍ಮನೆ ವಂಶದವರ (ಪಾರಂಪರಿಕವಾಗಿ ಬಂದಿರುವ ನಾಣ್ಯ) ಬಳಿ ಇದ್ದು, ಇದು ನಾಣ್ಯವೆಂದು ಅರಿವು ಇಲ್ಲದೆ ಪೂಜೆ ಸಲ್ಲಿಸುತ್ತಿದ್ದರು. ಕ್ಷೇತ್ರ ಕಾರ್ಯಕ್ಕೆ ಹೋದ ಸಂದರ್ಭದಲ್ಲಿ ಈ ನಾಣ್ಯ ಕಂಡುಬಂದಿತು’ ಎಂದು ತಿಳಿಸಿದ್ದಾರೆ.

ADVERTISEMENT

‘ಈ ನಾಣ್ಯ ಬಂಗಾರದ ಪಗೋಡವಾಗಿದ್ದು, ಮೂರನೇ ಕೃಷ್ಣರಾಜ ಒಡೆಯರ ಕಾಲದಲ್ಲಿ (ಕ್ರಿ.ಶ 1810-1868) ಹೊರಡಿಸಿದ ನಾಣ್ಯ. ನಾಣ್ಯದ ಮುಮ್ಮುಖದಲ್ಲಿ ಶಿವ ಮತ್ತು ಪಾರ್ವತಿ ಕುಳಿತಿರುವಂತೆ ಮುದ್ರಿಸಲಾಗಿದೆ. ಶಿವನು ಡಮರು ಮತ್ತು ತ್ರಿಶೂಲ ಹಿಡಿದಿದ್ದು, ಪಾರ್ವತಿಯು ಬಲ ತೊಡೆಯ ಮೇಲೆ ಕುಳಿತಿದ್ದಾಳೆ. ನಾಣ್ಯದ ಹಿಮ್ಮುಖದಲ್ಲಿ ದೇವನಾಗರಿ ಲಿಪಿಯಲ್ಲಿ ಶ್ರೀ/ಕೃಷ್ಣ ರಾ/ಜ ಎಂಬ ಲೇಖ್ಯ ಇದೆ. ನಾಣ್ಯವು 3.34 ಗ್ರಾಂ ತೂಗುತ್ತದೆ. ಇದರ ಸುತ್ತಳತೆ 12.02 ಮಿ.ಮೀ ಇದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.