ADVERTISEMENT

ಜಗಳೂರು: ಬರದ ನಾಡಿನಲ್ಲಿ ಮನೆ ಮಾಡಿದ ಜಲ ಸಂಭ್ರಮ

ತುಂಗಭದ್ರಾ ನದಿಯಿಂದ 57 ಕೆರೆ ತುಂಬಿಸುವ ಯೋಜನೆ ಯಶಸ್ವಿ; ರೈತರಲ್ಲಿ ಭರವಸೆ ಮೂಡಿಸಿದ ಯೋಜನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 6:29 IST
Last Updated 18 ನವೆಂಬರ್ 2024, 6:29 IST
<div class="paragraphs"><p>ತುಂಗಭದ್ರಾ</p></div>

ತುಂಗಭದ್ರಾ

   

– ಪ್ರಜಾವಾಣಿ ಚಿತ್ರ

ಜಗಳೂರು: ರಾಜ್ಯದಲ್ಲೇ ಅತ್ಯಂತ ಹಿಂದುಳಿದ, ಶಾಶ್ವತ ಬರಪೀಡಿತ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿದ್ದ ಜಗಳೂರು ತಾಲ್ಲೂಕಿನ ಎಲ್ಲೆಡೆ ಈಗ ನೀರಿನ ಕಲರವ ಕೇಳಿ ಬರುತ್ತಿದೆ. ಐದಾರು ದಶಕಗಳಿಂದ ಹನಿ ನೀರಿಲ್ಲದೇ ಬರಿದಾಗಿದ್ದ ಬಹುತೇಕ ಕೆರೆಗಳು ಇದೀಗ ಕೋಡಿ ಹರಿಯುತ್ತಿದ್ದು, ಜಲಸಂಭ್ರಮ ಮನೆಮಾಡಿದೆ.

ADVERTISEMENT

ರಾಜ್ಯದಲ್ಲೇ ಮೊದಲ ದೊಡ್ಡ ಏತನೀರಾವರಿ ಯೋಜನೆ ಎನಿಸಿರುವ, ತುಂಗಭದ್ರಾ ನದಿಯಿಂದ ಜಗಳೂರು ವಿಧಾನಸಭಾ ಕ್ಷೇತ್ರದ 57 ಕೆರೆಗಳನ್ನು ತುಂಬಿಸುವ ₹660 ಕೋಟಿ ವೆಚ್ಚದ ಯೋಜನೆ ಸಂಪೂರ್ಣ ಯಶಸ್ವಿಯಾಗಿದೆ. 57 ಕೆರೆಗಳ ಪೈಕಿ 25 ದೊಡ್ಡ ಕೆರೆಗಳು ತುಂಬಿ ಕೋಡಿ ಹರಿದಿದ್ದು, 20ಕ್ಕೂ ಹೆಚ್ಚು ಕೆರೆಗಳಲ್ಲಿ ಶೇ 70ರಷ್ಟು ನೀರು ಸಂಗ್ರಹವಾಗಿದೆ.

57 ಕೆರೆಗಳ ಪೈಕಿ 45 ಕೆರೆಗಳಿಗೆ ಪೈಪ್ ಲೈನ್ ಸಂಪರ್ಕ ಕಲ್ಪಿಸಲಾಗಿದ್ದು, ತಾಂತ್ರಿಕ ಕಾರಣಗಳಿಂದಾಗಿ 12 ಕೆರೆಗಳಿಗೆ ಪಪ್ ಲೈನ್ ಸಂಪರ್ಕ ಕಲ್ಪಿಸುವುದು ವಿಳಂಬವಾಗಿದೆ. ಮುಂದಿನ ಒಂದೆರೆಡು ತಿಂಗಳಲ್ಲಿ ಎಲ್ಲ ಕೆರೆಗಳಿಗೆ ನೀರು ಹರಿಸುವ ದಿಸೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

1960ರ ದಶಕದಿಂದ ಜಗಳೂರು ತಾಲ್ಲೂಕಿಗೆ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎಂಬ ಬೇಡಿಕೆ ಇದ್ದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ 5 ದಶಕ ಕಳೆದರೂ ಬೇಡಿಕೆ ನನೆಗುದಿಗೆ ಬಿದ್ದಿತ್ತು. 2018ರಲ್ಲಿ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ಸಿರಿಗೆರೆ ಶ್ರೀಗಳ ಒತ್ತಡದ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಯೋಜನೆ ಘೋಷಿಸಿ ಅನುದಾನ ನೀಡಿದ್ದರು. ನಂತರ ಬಂದ ಸರ್ಕಾರಗಳ ಸಹಕಾರ ಮತ್ತು ಅಂದು ಶಾಸಕರಾಗಿದ್ದ ಎಚ್.ಪಿ. ರಾಜೇಶ್, ಎಸ್.ವಿ. ರಾಮಚಂದ್ರ ಹಾಗೂ ಹಾಲಿ ಶಾಸಕ ಬಿ. ದೇವೇಂದ್ರಪ್ಪ ಅವರ ನಿರಂತರ ಶ್ರಮದಿಂದಾಗಿ ಕನಸಿನ ಗಂಟು ಎನಿಸಿದ್ದ ಮಹತ್ವದ 57 ಕೆರೆ ತುಂಬಿಸುವ ಯೋಜನೆ ಸಾಕಾರಗೊಂಡಿದೆ. ಈ ಯೋಜನೆಯಿಂದ, ಕಳೆದ 100 ವರ್ಷಗಳ ‍‍ಪೈಕಿ 70 ವರ್ಷಕ್ಕೂ ಹೆಚ್ಚು ಕಾಲ ಬರಕ್ಕೆ ಸಿಲುಕಿ ನಲುಗಿದ್ದ ಜಗಳೂರು ತಾಲ್ಲೂಕಿನ ಚಿತ್ರಣವೇ ಬದಲಾಗುವ ನಿರೀಕ್ಷೆಗಳು ಗರಿಗೆದರಿವೆ.

57 ಕೆರೆಗಳನ್ನು ತುಂಬಿಸುವ ಯೋಜನೆಯಡಿ ವಿಧಾನಸಭಾ ಕ್ಷೇತ್ರದ ಹರಪನಹಳ್ಳಿ ತಾಲ್ಲೂಕಿನ 6 ಕೆರೆಗಳು ಹಾಗೂ ಜಗಳೂರು ತಾಲ್ಲೂಕಿನ 51 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಹರಪನಹಳ್ಳಿ ತಾಲ್ಲೂಕಿನ ಎಲ್ಲ 6 ಕೆರೆಗಳು ಭರ್ತಿಯಾಗಿದ್ದು, ಜಗಳೂರಿನ 19 ಕೆರೆಗಳು ತುಂಬಿ ಹರಿಯುತ್ತಿವೆ. ತುಪ್ಪದಹಳ್ಳಿ ಕೆರೆ, ಜಗಳೂರು ಕೆರೆ, ಗಡಿಮಾಕುಂಟೆ ಕೆರೆ, ಭರಮಸಮುದ್ರ ಕೆರೆ, ಅಸಗೋಡು ಕೆರೆ, ಮುಷ್ಟಿಗರಹಳ್ಳಿ ಕೆರೆ, ರಸ್ತೆಮಾಚಿಕೆರೆ, ಕ್ಯಾಸೇನಹಳ್ಳಿ, ಕೆಚ್ಚೇನಹಳ್ಳಿ, ಗೋಡೆ, ಗೌಡಗೊಂಡನಹಳ್ಳಿ ಹೊಸಕೆರೆ ಸೇರಿದಂತೆ 19 ಕೆರೆಗಳು ದಶಕಗಳ ನಂತರ ಮೊದಲ ಬಾರಿಗೆ ಕೋಡಿ ಹರಿಯುತ್ತಿವೆ. 20ಕ್ಕೂ ಹೆಚ್ಚು ಕೆರೆಗಳಿಗೆ ಶೇ 50ರಷ್ಟು ನೀರು ಹರಿಸಲಾಗಿದೆ. ಇದೇ ಮೊದಲ ಬಾರಿ ಪೈಪ್ ಲೈನ್ ಮೂಲಕ 45 ಕೆರೆಗಳಿಗೆ ನೀರು ಹರಿಸಿದ್ದು, ಈ ಬಾರಿ ಒಳ್ಳೆಯ ಮಳೆಯಾಗಿರುವುದೂ ಕೆರೆಗಳು ಭರ್ತಿಯಾಗಲು ಕಾರಣವಾಗಿದೆ.

57 ಕೆರೆಗಳಲ್ಲಿ 2 ಟಿಎಂಸಿ ನೀರು ಸಂಗ್ರಹ: ‘57 ಕೆರೆಗಳಿಗೆ ತುಂಗಭದ್ರಾ ನದಿಯಿಂದ 1.40 ಟಿಎಂಸಿ ಅಡಿ ನೀರು ತುಂಬಿಸುವ ಯೋಜನೆಯಡಿ, ಈ ವರ್ಷದ ಮುಂಗಾರಿನಲ್ಲಿ 45 ಕೆರೆಗಳಿಗೆ 1 ಟಿಎಂಸಿ ಅಡಿ ನೀರನ್ನು ಲಿಫ್ಟ್‌ ಮಾಡಿ ಹರಿಸಲಾಗಿದೆ. ಮಳೆನೀರು ಸೇರಿದಂತೆ ಎಲ್ಲಾ 57 ಕೆರೆಗಳಲ್ಲಿ ಪ್ರಸ್ತುತ 2 ಟಿಎಂಸಿ ಅಡಿಗೂ ಹೆಚ್ಚು ನೀರಿನ ಸಂಗ್ರಹವಿದೆ. ಇದರಿಂದಾಗಿ ವ್ಯಾಪಕವಾಗಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ’ ಎಂದು ನೀರಾವರಿ ನಿಗಮದ ಎಇಇ ಶ್ರೀಧರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ತಾಂತ್ರಿಕ ನೈಪುಣ್ಯತೆ ಸಾಕ್ಷಿಯಾದ ಯೋಜನೆ:

ತುಂಗಭದ್ರಾ ನದಿಪಾತ್ರದ ಹರಿಹರ ತಾಲ್ಲೂಕಿನ ದೀಟೂರಿನ ಜಾಕ್‌ವೆಲ್‌ನಲ್ಲಿ 8 ಮೋಟಾರುಗಳನ್ನು ಬಳಸಿ 30 ಕಿ.ಮೀ ದೂರದ ಹರಪನಹಳ್ಳಿ ತಾಲ್ಲೂಕಿನ ಚಟ್ನಳ್ಳಿ ಗುಡ್ಡಕ್ಕೆ ನೀರನ್ನು ಪಂಪ್ ಮಾಡಲಾಗುತ್ತದೆ. ಗುಡ್ಡದ ಮೇಲಿರುವ ಡೆಲಿವರಿ ಚೇಂಬರ್‌ನಿಂದ ಎಲ್ಲ ಕೆರೆಗಳಿಗೆ ಕೇವಲ ಗುರುತ್ವಾಕರ್ಷಣೆ ಬಲದ ಆಧಾರದಲ್ಲಿ ನೀರು ಹರಿಸಲಾಗುತ್ತಿದೆ. ನದಿಪಾತ್ರದ ದೀಟೂರಿನಿಂದ ಜಗಳೂರು ತಾಲ್ಲೂಕಿನ ಅಗಸನಹಳ್ಳಿ 90 ಕಿ.ಮೀ., ಗಡಿಮಾಕುಂಟೆ ಕೆರೆಗೆ 80 ಕಿ.ಮೀ. ಅಂತರವಿದೆ. ಇಷ್ಟೊಂದು ದೂರದವರೆಗೆ ಮೋಟಾರ್ ಮತ್ತು ಗುರುತ್ವಾಕರ್ಷಣೆಯ ಬಲದ ಆಧಾರದ ಮೇಲೆ ಯಶಸ್ವಿಯಾಗಿ ನೀರು ಹರಿಸಲಾಗಿದೆ. ಇದು ತಾಂತ್ರಿಕ ನೈಪುಣ್ಯಕ್ಕೆ ಸಾಕ್ಷಿಯಾಗಿದ್ದು, ರಾಜ್ಯದ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅಪರೂಪದ ಯೋಜನೆ ಎಂದು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಹೆಮ್ಮೆಯಿಂದ ಹೇಳುತ್ತಾರೆ.

ಯೋಜನೆಯಿಂದಾಗಿ ತಾಲ್ಲೂಕಿನ ಕೆರೆಗಳು ಮೈದುಂಬಿದ್ದು, ಎಲ್ಲೆಡೆ ಬರಿದಾಗಿದ್ದ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಕೆಲವೆಡೆ ಮೋಟಾರ್ ಚಾಲನೆ ಮಾಡದಿದ್ದರೂ ಕೊಳವೆ ಬಾವಿಗಳಿಂದ ನೀರು ಉಕ್ಕಿ ಬರುತ್ತಿದ್ದು, ರೈತರಲ್ಲಿ ಸಂತಸ ಇಮ್ಮಡಿಗೊಳಿಸಿದೆ.

45 ಕೆರೆಗಳಿಗೆ ಹರಿದ ನದಿ ನೀರು 12 ಕೆರೆಗಳಿಗೆ ಶೀಘ್ರ ನೀರು ಎಲ್ಲ ಕೆರೆಗಳಿಂದ ಒಟ್ಟು 2 ಟಿಎಂಸಿ ಅಡಿ ನೀರು ಸಂಗ್ರಹ
ಕೆರೆ ಮಗ್ಗುಲಲ್ಲೇ ನನ್ನ ಅಡಿಕೆ ತೋಟ ಇದೆ. ಕಳೆದ ವರ್ಷ ತೀವ್ರ ಬರದ ಕಾರಣ 3 ಎಕರೆ ಅಡಿಕೆ ತೋಟ ಒಣಗಿತ್ತು. ಕೆರೆಗೆ ನೀರು ಹರಿಸಿದ್ದರಿಂದ 50 ವರ್ಷದ ನಂತರ ಭರಮಸಮುದ್ರ ಕೆರೆ ಕೋಡಿ ಬಿದ್ದಿದೆ. ಬತ್ತಿದ ಕೊಳವೆಬಾವಿಯಲ್ಲಿ ನೀರು ಉಕ್ಕಿದೆ. ಇದೇ ಧೈರ್ಯದಲ್ಲಿ ಮತ್ತೆ ಅಡಿಕೆ ಗಿಡ ಹಾಕಿದ್ದೇನೆ
ಸುಮಕ್ಕ ಭರಮಸಮುದ್ರ ಗ್ರಾಮದ ರೈತ ಮಹಿಳೆ
ನಾನು ಹುಟ್ಟಿದಾಗಿಂದ ಇದೇ ಮೊದಲ ಬಾರಿಗೆ ಜಗಳೂರು ಕೆರೆ ಮತ್ತು ಭರಮಸಮುದ್ರ ಕೆರೆಗಳು ತುಂಬಿ ಹರಿಯುತ್ತಿದ್ದು ನಮ್ಮ ಹೊಲದ ಮೂರು ಕೊಳವೆ ಬಾವಿಗಳಲ್ಲಿ ಸಮೃದ್ಧ ನೀರು ಬಂದಿದೆ. ಯೋಜನೆಯಿಂದ ನಂಬಿಕೆ ಮತ್ತು ಭರವಸೆ ಹೆಚ್ಚಾಗಿದೆ
ಅಜಯ್ ಕುಮಾರ್ ಯುವ ರೈತ ಹನುಮಂತಾಪುರ
ಜಲಸಂಭ್ರಮಕ್ಕೆ ಸಾಕ್ಷಿಯಾಗಲಿದೆ ಜಗಳೂರು ಉತ್ಸವ
ಸತತ ಬರಗಾಲದ ಹೊಡೆತದಿಂದ ಜರ್ಝರಿತವಾಗಿದ್ದ ಜಗಳೂರು ತಾಲ್ಲೂಕಿನಲ್ಲಿ 57 ಕೆರೆ ತುಂಬಿಸುವ ಯೋಜನೆಯು ಜಲಕ್ರಾಂತಿಗೆ ಮುನ್ನುಡಿ ಬರೆದಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು. ‘ಸಿರಿಗೆರೆ ಶ್ರೀಗಳ ಮುನ್ನೋಟ ಎಲ್ಲ ಸರ್ಕಾರಗಳು ಹಾಗೂ ನನ್ನನ್ನು ಒಳಗೊಂಡಂತೆ ಹಿಂದಿನ ಎಲ್ಲ ಶಾಸಕರ ಶ್ರಮ ಮತ್ತು ಸಹಕಾರ ನೀರಾವರಿ ಇಲಾಖೆ ಅಧಿಕಾರಿಗಳ ಕಠಿಣ ಪರಿಶ್ರಮದಿಂದ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಂಡಿದೆ. ರಾಷ್ಟ್ರೀಯ ಹೆದ್ದಾರಿ-50ರ ಕೆಳಗೆ 4 ಮೀಟರ್ ಆಳದಲ್ಲಿ ಸುರಂಗ ಕೊರೆದು ಪೈಪ್‌ ಅಳವಡಿಸುವ ಕಾರ್ಯ ಭರದಿಂದ ನಡೆಯುತ್ತಿದ್ದು ವಾರದೊಳಗೆ ತೊರೆಸಾಲು ಪ್ರದೇಶದ 8 ಕೆರೆಗಳಿಗೆ ಸಂಪರ್ಕ ಕಲ್ಪಿಸುವ ಪೈಲ್‌ಲೈನ್ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಅವರು ಹೇಳಿದರು. ಅರಣ್ಯ ಇಲಾಖೆಯ ಕಾನೂನು ತೊಡಕಿನಿಂದಾಗಿ ಗುರುಸಿದ್ದಾಪುರ ರಂಗಯ್ಯನದುರ್ಗ ಮಾಗಡಿ ಮತ್ತು ಅಗಸನಹಳ್ಳಿ ಕೆರೆಗಳಿಗೆ ಸಂಪರ್ಕ ವಿಳಂಬವಾಗಿದ್ದು ಕೆಲವೇ ದಿನಗಳಲ್ಲಿ ಉಳಿದ ಎಲ್ಲ ಕೆರೆಗಳಿಗೂ ನೀರು ಹರಿಸಲಾಗುತ್ತದೆ. ಅರ್ಧ ಶತಮಾನದಲ್ಲಿ ಮೊದಲ ಬಾರಿ ಕೆರೆಗಳು ತುಂಬಿದ್ದರಿಂದ ಜನರಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ಡಿಸೆಂಬರ್‌ನಲ್ಲಿ ಅದ್ದೂರಿಯಾಗಿ ‘ಜಗಳೂರು ಉತ್ಸವ’ ನಡೆಸುವ ಮೂಲಕ ಜಲಸಂಭ್ರಮವನ್ನು ಆಚರಿಸಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.