ದಾವಣಗೆರೆ: ಶರಣರಿಗೆ ಹಲ್ಲೆ, ಕೊಲೆ, ಸುಲಿಗೆ ಮಾಡಿದ, ವಚನಗಳನ್ನು ಸುಟ್ಟು ಹಾಕಿದ ನೋವಿನ ಇತಿಹಾಸ ಇರುವ ತ್ಯಾಗದ ಧರ್ಮ ಲಿಂಗಾಯತ ಧರ್ಮ. ಇತಿಹಾಸದ ಅರಿವಿಲ್ಲದಿದ್ದರೆ ಭವಿಷ್ಯ ಮರೆಯಾಗುತ್ತದೆ. ಶರಣ ಶರಣೆಯರ ತ್ಯಾಗದ ಅರಿವಿಲ್ಲದೆ ವಚನ ಹಾಡಿದರೆ ಪ್ರಯೋಜನವಿಲ್ಲ ಎಂದು ಸಾಹಿತಿ ರಂಜಾನ್ ದರ್ಗಾ ಹೇಳಿದರು.
ನಗರದ ಶಾಮನೂರ ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣಮಂಟಪದಲ್ಲಿ ಮಂಗಳವಾರ ನಡೆದ ಕದಳಿ ಮಹಿಳಾ ವೇದಿಕೆಯ 11ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಶೇ 90ರಷ್ಟು ವಚನಗಳ ಕಟ್ಟುಗಳನ್ನು ಸುಟ್ಟು ಹಾಕಲಾಗಿದೆ. 15 ಸಾವಿರದಷ್ಟು ವಚನಗಳು ಮಾತ್ರ ಸಿಕ್ಕಿವೆ. ಅದರಲ್ಲಿ 33 ವಚನಕಾರ್ತಿಯರನ್ನು ಗುರುತಿಸಲಾಗಿದೆ. ಇನ್ನಿಬ್ಬರ ಬಗ್ಗೆ ಇನ್ನೂ ಗೊಂದಲಗಳಿವೆ. ಅಕ್ಕ ಮಹಾದೇವಿ, ನಾಗಮ್ಮ, ಸತ್ಯಕ್ಕ, ನೀಲಾಂಬಿಕೆ, ಗಂಗಾಬಿಕೆ, ಕೇತಲಾದೇವಿ ಮುಂತಾದ ವೀರ ಮಹಿಳೆಯರ ಹೆಸರನ್ನೇ ನಾವು ನಮ್ಮ ಮಕ್ಕಳಿಗೆ ಇಡುವುದಿಲ್ಲ ಎಂದಾದರೆ ಹೊಸ ಸಮಾಜವನ್ನು ನಾವಾದರೂ ಹೇಗೆ ಕಟ್ಟಬಲ್ಲೆವು. ಹರಳಯ್ಯ, ಮಧುವರಸರ ತ್ಯಾಗದಿಂದ ಲಿಂಗಾಯತ ಧರ್ಮ ಉಳಿದಿದೆ. ಅವರ ಹೆಸರನ್ನು ಮಕ್ಕಳಿಗೆ ಯಾಕೆ ಇಡುತ್ತಿಲ್ಲ’ ಎಂದು ಪ್ರಶ್ನಿಸಿದರು.
ದುಷ್ಟ ರಾಜನ ವಿರುದ್ಧ ಹೋರಾಟ ಮಾಡಿ ಹುತಾತ್ಮನಾದ ಹುಸೇನ್‌ನನ್ನು ಮುಸ್ಲಿಮರು ಮರೆತಿಲ್ಲ. ಮಹಮ್ಮದ್ ಪೈಗಂಬರರ ಮೊಮ್ಮಗನೇ ಹುಸೇನ್. ಈ ಹೆಸರು ಇಲ್ಲದ ಮುಸ್ಲಿಂ ಮನೆತನಗಳೇ ಇಲ್ಲ. ಸ್ವಾರ್ಥ, ಅಹಂಕಾರ, ಶೋಷಣೆಗಳಿಂದ ಉಳಿಯದೇ ತ್ಯಾಗದಿಂದಷ್ಟೇ ಉಳಿದ ಲಿಂಗಾಯತ ಧರ್ಮದಲ್ಲಿ ತ್ಯಾಗ ಮಾಡಿದವರನ್ನೇ ಮರೆತುಬಿಡಲಾಗಿದೆ ಎಂದು ವಿಷಾದಿಸಿದರು.
12ನೇ ಶತಮಾನದ ಬಳಿಕ ಮೂರು ಶತಮಾನಗಳ ಕಾಲ ಲಿಂಗಾಯತ ಧರ್ಮವನ್ನು ಬಹಳ ಕಷ್ಟದಿಂದ ಕಾಪಾಡಿಕೊಂಡು ಬರಬೇಕಾಯಿತು. ಮಾನವ ಲೋಕಕ್ಕೆ ಮಾರ್ಗದರ್ಶನ ಮಾಡಬಲ್ಲ ಈ ಧರ್ಮವನ್ನು ವಿಜಯನಗರದಲ್ಲಿ ಪ್ರೌಢದೇವರಾಯನು ಅರಸನಾಗುವವರೆಗೆ ಉಳಿಸಿಕೊಂಡವರ ತ್ಯಾಗವನ್ನು ನೆನಪಿಸಿಕೊಳ್ಳಬೇಕು. ಪ್ರೌಢದೇವರಾಯನ ಬಳಿಕ ಲಿಂಗಾಯತ ಧರ್ಮ ಪಸರಿಸಿತು ಎಂದು ನೆನಪಿಸಿಕೊಂಡರು.
ಬಸವಣ್ಣ ಒಂದು ಧರ್ಮದ, ಒಂದು ಸಮುದಾಯದ ಮಾರ್ಗದರ್ಶಕನಲ್ಲ. ಹಾಗಾಗಿಯೇ ಜಗಜ್ಯೋತಿ ಬಸವಣ್ಣ ಎಂದು ಕರೆಯಲಾಗಿದೆ. ಜಾತಿ ಇಲ್ಲದ, ಮಠ ಇಲ್ಲದ, ಗುಡಿ ಇಲ್ಲದ, ವಿಗ್ರಹ ಇಲ್ಲದ ಧರ್ಮ ಲಿಂಗಾಯತ ಧರ್ಮ. ಇವೆಲ್ಲವನ್ನು ಆಚರಿಸುತ್ತೀರಿ ಎಂದಾದರೆ ಅದು ಶರಣ ಧರ್ಮವಲ್ಲ. ಎಲ್ಲ ಧರ್ಮಗಳನ್ನು ದೇವರ ವಾಣಿ ಎಂದು ಕರೆಯಲಾಗುತ್ತದೆ. ವೇದ, ಖುರಾನ್, ಭಗವದ್ಗೀತೆ, ಬೈಬಲ್ ಎಲ್ಲವನ್ನು ದೇವರ ವಾಕ್ಯಗಳು, ದೇವರ ಬೋಧನೆಗಳು ಎಂದು ಕರೆಯಲಾಗುತ್ತದೆ. ಆದರೆ ವಚನಗಳು ಮಾತ್ರ ದೇವರಿಗೇ ಹೇಳುವ ಮಾತುಗಳು. ದೇವರು ಹೊರಗಿಲ್ಲ. ನಮ್ಮೊಳಗಿದ್ದಾನೆ ಎಂದು ಅಂತಸ್ಸಾಕ್ಷಿಗೇ ಹೇಳುವ ಮಾತುಗಳು. ಆತ್ಮ ಮಂಥನವಿಲ್ಲದೇ ವಚನಗಳು ಹುಟ್ಟಲಾರವು ಎಂದು ತಿಳಿಸಿದರು.
ವಚನಕಾರರಗಿಂತಲೂ ವಚನಕಾರ್ತಿಯರು ಹೆಚ್ಚು ವೈಜ್ಞಾನಿಕವಾಗಿದ್ದರು. ಗಂಡಂದಿರನ್ನು, ದೇವರನ್ನು ಪ್ರಶ್ನಿಸುವುದು ಮತ್ಯಾವ ಧರ್ಮದಲ್ಲಿಯೂ ಸಿಗಲಾರದು. ವಚನಕಾರ್ತಿಯರು ಪ್ರಶ್ನೆ ಮಾಡಿದ್ದರು. ವಚನಕಾರ್ತಿಯರು ಬರೆಯುವ ಕಾಲಕ್ಕೆ ಇಂಗ್ಲಿಷ್ ಸಾಹಿತ್ಯ ಹುಟ್ಟೇ ಇರಲಿಲ್ಲ. ಸ್ತ್ರೀವಾದಿ, ಮನುಷ್ಯವಾದಿ, ಸಮಾನತಾವಾದಿ ಸಿದ್ಧಾಂತದ ಧರ್ಮ ಇದು ಎಂದು ಬಣ್ಣಿಸಿದರು.
‘ಏಕದೇವೋಪಾಸನೆಯ ಲಿಂಗಾಚಾರ, ಸತ್ಯಶುದ್ಧ ಕಾಯಕ, ದಾಸೋಹಗಳನ್ನು ಹೇಳುವ ಸದಾಚಾರ, ಲಿಂಗ, ಜಾತಿ, ಧರ್ಮ, ವರ್ಣ ಭೇದಗಳನ್ನು ನಿರಾಕರಿಸುವ, ಎಲ್ಲರನ್ನು ಒಳಗೊಳ್ಳುವ ಸಾಮಾಜಿಕ ಸಮಾನತೆಯ ಶಿವಾಚಾರ, ಧರ್ಮದ ಸಮರ್ಥನಾ ಪ್ರಚಾರ ಮಾಡಲು ಪ್ರತಿಜ್ಞೆ ಕೈಗೊಳ್ಳುವ ಗಣಾಚಾರ, ಎನಗಿಂತ ಕಿರಿಯರಿಲ್ಲ ಎಂದು ತಿಳಿಸುವ ಭೃತ್ಯಾಚಾರವನ್ನು ನಮ್ಮ ಮಕ್ಕಳಿಗೆ ಹೇಳಿಕೊಡಬೇಕು’ ಎಂದು ಸಲಹೆ ನೀಡಿದರು.
ಚಿನ್ನಮ್ಮ ಮಹೇಶ್ವರಯ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪುಟ್ಟಮ್ಮ ಮಹಾರುದ್ರಯ್ಯ ಅವರಿಗೆ ಕದಳಿಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು.
ಇಷ್ಟಲಿಂಗ ಯೋಗ ಕರ್ನಾಟಕ ನೀಡಿದ್ದು: ವಚನಾನಂದ ಶ್ರೀ
ಎಲ್ಲ ಯೋಗಗಳು ಹಿಮಾಲಯದಿಂದ ಕರ್ನಾಟಕಕ್ಕೆ ಬಂತು. ಆದರೆ, ಶಿವಯೋಗ ಎಂದು ಕರೆಯುವ ಇಷ್ಟಲಿಂಗಯೋಗವನ್ನು ಕರ್ನಾಟಕವೇ ನೀಡಿದೆ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ಹಿಂದೆ ಕಾಯಕ ಮಾಡುತ್ತಿದ್ದುದರಿಂದ ತನುಶುದ್ಧಿಯಾಗುತ್ತಿತ್ತು. ದಾಸೋಹ ಮಾಡುತ್ತಿದ್ದುದರಿಂದ ಮನಶುದ್ಧಿಯಾಗುತ್ತಿತ್ತು. ಇಷ್ಟಲಿಂಗದಿಂದ ಭಾವಶುದ್ಧಿಯಾಗುತ್ತಿತ್ತು. ಆದರೆ, ಈಗ ದೈಹಿಕ ಶ್ರಮದ ಕಾಯಕ ಮಾಡುತ್ತಿಲ್ಲ. ಹಾಗಾಗಿ ವ್ಯಾಯಾಮ, ಯೋಗ ಎಲ್ಲ ಅನಿವಾರ್ಯ. ಇಷ್ಟಲಿಂಗ ಯೋಗದ ಜತೆಗೆ ಅಷ್ಟಾಂಗ ಯೋಗ ಕೂಡಾ ಕಲಿಸುವುದು ಅವಶ್ಯಕ. ಆದರೆ ಯೋಗ ಸಾಧಕರ ಕೊರತೆ ಇದೆ ಎಂದು ಹೇಳಿದರು.
ಈಗ ಅಲ್ಲಗಳೆಯುವುದು, ಟೀಕೆ ಮಾಡುವುದೇ ತತ್ವವಾಗಿದೆ. ಮಾತುಗಳೇ ಜಾಸ್ತಿಯಾಗಿ, ಕೃತಿಯಲ್ಲಿ ಇಲ್ಲದಂತಾಗಿದೆ. ಭಗವದ್ಗೀತೆಗಿಂತ ವಚನಗಳು ಶ್ರೇಷ್ಠ ಎನ್ನಬೇಕಿದ್ದರೆ ಭಗವದ್ಗೀತೆಯನ್ನು ತಿಳಿದಿರಬೇಕು ಎಂದು ಸಲಹೆ ನೀಡಿದರು.
ಜ.14 ಮತ್ತು 15ರಂದು ಪಂಚಮಸಾಲಿ ಪೀಠದಲ್ಲಿ ನಡೆಯುವ ಹರಜಾತ್ರೆಗೆ ಎಲ್ಲರನ್ನು ಆಹ್ವಾನಿಸಿದರು.
ಕದಳಿ ಮಹಿಳಾ ವೇದಿಕೆಯ ಯಶಾ ದಿನೇಶ್, ಸುಜಾತ, ಪ್ರಮಿಳಾ, ಪಲ್ಲವಿ ಪಾಟೀಲ್, ದಿಬ್ಬಳ್ಳಿ ಸುಧಾ, ಕಿರುವಾಡಿ ಗಿರಿಜಮ್ಮ, ವಿನೋದಾ, ವಸಂತಾ ಅವರೂ ಇದ್ದರು. ವಿಜಯ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.