ದಾವಣಗೆರೆ: 'ಶ್ರದ್ಧಾ ಕೇಂದ್ರಗಳನ್ನು ಉಳಿಸಲು ಹೋರಾಟ ಮಾಡಿದ ಕರಸೇವಕರನ್ನು ಮುಟ್ಟಿದರೆ ಕಾಂಗ್ರೆಸ್ ಭಸ್ಮವಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಎಚ್ಚರಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಮ ಭಕ್ತರ, ರಾಷ್ಟ್ರಭಕ್ತರ ಬೃಹತ್ ಸಂಘಟನೆ ನಮ್ಮಲ್ಲಿ ಇದ್ದು, ಎಷ್ಟು ಜನ ಕಳುಹಿಸುತ್ತಾರೋ ಕಳುಹಿಸಲಿ ನೋಡೋಣ’ ಎಂದು ಸವಾಲು ಹಾಕಿದರು.
‘30 ವರ್ಷಗಳ ಹಿಂದಿನ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಆ ಭಾಗದಲ್ಲಿ ಇದ್ದ 600 ಫೈಲ್‌ಗಳಲ್ಲಿ (ಪ್ರಕರಣಗಳಲ್ಲಿ) ಇದೇ ಫೈಲ್ ಯಾಕೆ ಅವರ ಕಣ್ಣಿಗೆ ಬಿತ್ತು. ಈ ರೀತಿ ರಾಜಕಾರಣದಿಂದ ಕಾಂಗ್ರೆಸ್‌ಗೆ ತೊಂದರೆಯಾಗುತ್ತದೆ. ರಾಮಭಕ್ತರ ಸಿಟ್ಟಿಗೆ ಗುರಿಯಾಗಬೇಡಿ’ ಎಂದು ಎಚ್ಚರಿಸಿದರು.
‘ಲೋಕಸಭಾ ಚುನಾವಣೆಯಲ್ಲಿ ಚುನಾವಣೆ ವಿಷಯ ಯಾಕೆ ಆಗಬಾರದು ಎಂದು ಪ್ರಶ್ನಿಸಿದ ಅವರು, ಅಭಿವೃದ್ಧಿ ಮೇಲೆ ಚುನಾವಣೆಗೆ ಹೋಗೋಣ ಎಂದರೆ ಅದಕ್ಕೂ ತಯಾರು. ಹಿಂದುತ್ವ, ಮುಸಲ್ಮಾನರ ಹೆಸರಿನಲ್ಲಿ ಚುನಾವಣೆಗೆ ಹೋಗುವುದಾದರೆ ಅದಕ್ಕೂ ನಾವು ತಯಾರಿದ್ದೇವೆ. ಆದರೆ ನೀವು ಪಿಎಫ್‌ಐ, ರಾಷ್ಟ್ರದ್ರೋಹಿಗಳಿಗೆ ಬೆಂಬಲ ಕೊಡುವುದಾದರೆ ಬಹಿರಂಗವಾಗಿ ಹೇಳಿ. ಚುನಾವಣೆ ನೆಮ್ಮದಿಯಿಂದ ಮಾಡಿಕೊಡಲು ಅವಕಾಶಕೊಡಿ. ಕೋಮುಗಲಭೆ ಮುಖಾಂತರ ಚುನಾವಣೆ ಮಾಡಬೇಕು ಎಂದು ನಿಮ್ಮ ಆಸೆ ಇದ್ದರೆ ನಾವು ಏನು ಮಾಡಲು ಆಗುವುದಿಲ್ಲ’ ಎಂದರು.
‘ಮಾಜಿ ಸಚಿವ ಎಚ್.ಆಂಜನೇಯ ಸಿದ್ದರಾಮಯ್ಯ ಅವರನ್ನು ಪೂಜಿಸುವುದಾದರೆ ಮಾಡಿಕೊಳ್ಳಲಿ. ಅವರಿಗೆ ಸ್ವಾತಂತ್ರ್ಯವಿದೆ. ಆದರೆ ಅಯೋಧ್ಯೆಯ ರಾಮನ ಬಗ್ಗೆ ಟೀಕಿಸುವುದು ತರವಲ್ಲ. ರಾಮಮಂದಿರವನ್ನು ರಾಷ್ಟ್ರಮಂದಿರ ಎಂದು ಕರೆಯುತ್ತೇವೆ. ರಾಜಕಾರಣದಲ್ಲಿ ಟೀಕೆ ಸಹಜ. ಆದರೆ ಸಂಸ್ಕೃತಿ, ಹಿಂದುತ್ವದ ಬಗ್ಗೆ ಮಾತನಾಡಿದರೆ ಪ್ರಾಣ ಹೋದರೂ ಬಿಡುವುದಿಲ್ಲ. ಬಿಜೆಪಿ ಇರುವುದೇ ಹಿಂದುತ್ವ ಉಳಿಸಲು’ ಎಂದು ಸಮರ್ಥಿಸಿಕೊಂಡರು.
‘ಹಿಂದುತ್ವ ಯಾವುದೋ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಸುಪ್ರೀಂ ಕೋರ್ಟ್ ಹೇಳಿರುವಂತೆ ಅದು ಜೀವನದ ಪದ್ಧತಿ. ಯಾವ ದೇವರನ್ನಾದರೂ ಪೂಜೆ ಮಾಡಲು ಸ್ವಾತಂತ್ರ್ಯವಿದೆ. ಆದರೆ ನನ್ನ ಪೂಜೆ, ಪದ್ಧತಿಗೆ ಅಡ್ಡ ಬಂದರೆ ಬಿಡುವುದಿಲ್ಲ. ನಾವು ರಾಮ, ಕೃಷ್ಣ, ವಿಶ್ವನಾಥನ ಬಗ್ಗೆ ಆಸಕ್ತಿ ತೋರಿಸಿದರೆ ಇವರಿಗೆ ಯಾಕೆ ಸಿಟ್ಟು, ಇವರೇನು ಬಾಬರ್ ವಂಶದವರಾ?’ ಎಂದು ಕಾಂಗ್ರೆಸ್‌ನವರಿಗೆ ಕುಟುಕಿದರು.
‘ಯು–ಟರ್ನ್ ಖಂಡಿತ’
‘ಕಾಂಗ್ರೆಸ್‌ನವರು ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರನ್ನು ಬಳಸಿಕೊಂಡು ಚುನಾವಣೆ ಎದುರಿಸಿದರು. ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹಿಂದುಳಿದವರು ಹಾಗೂ ದಲಿತರಿಗೆ ಅರಿವಾಗಿ ಈಗ ಕಾಂಗ್ರೆಸ್ ಬಿಟ್ಟಿದ್ದಾರೆ. ಮುಸಲ್ಮಾನರೊಬ್ಬರನ್ನೇ ಗಟ್ಟಿಯಾಗಿಟ್ಟುಕೊಂಡು ರಾಜಕಾರಣ ಮಾಡಲು ಹೊರಟಿರುವ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ಯು–ಟರ್ನ್ ಹೊಡೆಯುತ್ತದೆ. ಮುಸಲ್ಮಾನರಿಗೆ ₹10 ಸಾವಿರ ಕೋಟಿಗಿಂತಲೂ ಜಾಸ್ತಿ ಕೊಡಿ. ಆದರೆ ದಲಿತರು ಹಿಂದುಳಿದ ವರ್ಗಗಳಿಗೂ ₹5 ಸಾವಿರ ಕೋಟಿ ಘೋಷಿಸಿ. ಮುಸಲ್ಮಾನರನ್ನೇ ತಲೆಯ ಮೇಲೆ ಕೂರಿಸಿಕೊಳ್ಳುವ ಪ್ರಯತ್ನ ಯಾಕೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.