ADVERTISEMENT

ಹೊನ್ನಾಳಿ: ದಿನೇ ದಿನೇ ಸಡಿಲಗೊಳ್ಳುತ್ತಿದೆ ಹಳೆ ಸೇತುವೆಯ ತಡೆಗೋಡೆ

ತುಂಗಭದ್ರಾ ಸೇತುವೆ ತಡೆಗೋಡೆ ಮೇಲೆ ಬೆಳೆದ ಅರಳಿಮರ

ಎನ್.ಕೆ.ಆಂಜನೇಯ
Published 23 ಅಕ್ಟೋಬರ್ 2024, 6:10 IST
Last Updated 23 ಅಕ್ಟೋಬರ್ 2024, 6:10 IST
ಹೊನ್ನಾಳಿ ತುಂಗಭದ್ರಾ ಸೇತುವೆ ಗೀಡೆ ಮೇಲೆ ಬೆಳೆದಿರುವ ಅರಳಿಮರದ ಗಿಡಗಳು
ಹೊನ್ನಾಳಿ ತುಂಗಭದ್ರಾ ಸೇತುವೆ ಗೀಡೆ ಮೇಲೆ ಬೆಳೆದಿರುವ ಅರಳಿಮರದ ಗಿಡಗಳು   

ಹೊನ್ನಾಳಿ: ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಇಲ್ಲಿನ ತುಂಗಭದ್ರಾ ನದಿಯ ಹಳೆ ಸೇತುವೆಯ ಗೋಡೆ ಮೇಲಿನ ಹಾಸುಗಲ್ಲುಗಳು ಅರಳಿಮರದ ಬೇರುಗಳಿಂದ ಸಡಿಲಗೊಂಡು ಬೀಳುವ ಹಂತ ತಲುಪಿವೆ.

ಪಟ್ಟಣದಲ್ಲಿ ಹಾದುಹೋಗಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶತಮಾನ ಪೂರೈಸಿದೆ. ಸೇತುವೆ ನಿರ್ಮಾಣ ಕಾರ್ಯಕ್ಕೆ 1918ರಲ್ಲಿ ಚಾಲನೆ ನೀಡಲಾಗಿತ್ತು. 1922ರಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. 21  ಕಮಾನು ಹೊಂದಿರುವ ಈ ಸೇತುವೆ 315 ಮೀಟರ್ ಉದ್ದವಿದೆ. ಒಂದೊಂದು ಕಮಾನು 15 ಮೀಟರ್ ಉದ್ದ ಹಾಗೂ 4.15 ಮೀಟರ್ ಅಗಲದ ವಿಸ್ತೀರ್ಣ ಹೊಂದಿವೆ.

ಈ ಕಮಾನುಗಳು ಸಿಮೆಂಟ್, ಮರಳು, ಜಲ್ಲಿಕಲ್ಲುಗಳನ್ನೊಳಗೊಂಡ ಕಾಂಕ್ರೀಟ್‌ನಿಂದ ನಿರ್ಮಾಣಗೊಂಡಿಲ್ಲ. ಬದಲಿಗೆ ಸುಣ್ಣ, ಬೆಲ್ಲ ಹಾಗೂ ಮರಳು ಮಿಶ್ರಣದೊಂದಿಗೆ ಕಪ್ಪುಕಲ್ಲುಗಳನ್ನು (ಸೈಜ್‍ಗಲ್ಲುಗಳನ್ನು) ಬಳಸಿ ನಿರ್ಮಾಣಗೊಂಡಿವೆ. ಎಲ್ಲಿಯೂ ಕಬ್ಬಿಣವನ್ನು ಬಳಸಿಲ್ಲ. ಸೇತುವೆ ಅಡಿಪಾಯ ಸುಮಾರು 15ರಿಂದ 20 ಅಡಿ ಆಳದಿಂದ ಕಲ್ಲುಗಳಿಂದಲೇ ಪಿಲ್ಲರ್‌ಗಳನ್ನು ಮಾಡಿದ್ದು, ಸುಂದರವಾದ ಕಟ್ಟಡವನ್ನು ಕಟ್ಟಲಾಗಿದೆ. ಸೇತುವೆಯ ಮೇಲ್ಭಾಗದಲ್ಲಿ ಉದ್ದನೆಯ ಹಾಸುಗಲ್ಲನ್ನು ಹೊದಿಸಿದ್ದು ಸುಭದ್ರವಾಗಿ ನಿರ್ಮಿಸಲಾಗಿದೆ. ಆದರೀಗ ಸೇತುವೆಯ ಭದ್ರತೆಗೆ ಧಕ್ಕೆ ಎದುರಾಗಿದೆ.

ADVERTISEMENT

ಸೇತುವೆ ಅಡಿಪಾಯದ ಪಿಲ್ಲರ್‌ಗಳಲ್ಲಿ ಚಿಕ್ಕ ಚಿಕ್ಕ ಸೈಜ್‍ಕಲ್ಲುಗಳು ಬಿದ್ದು ಹೋಗುತ್ತಿರುವ ಬಗ್ಗೆ ದೂರು ಇದೆ. ಆದರೀಗ ಸೇತುವೆಯ ಗೋಡೆ ಮೇಲಿನ ಹಾಸುಗಲ್ಲುಗಳು ಕೂಡ ಅರಳಿಮರದ ಬೇರುಗಳಿಂದ ಸಡಿಲಗೊಂಡು ಬೀಳುವ ಹಂತ ತಲುಪಿವೆ. ಸೇತುವೆಯ ಎರಡೂ ಬದಿಯ ಗೋಡೆಗಳಲ್ಲಿ ಸುಮಾರು 10 ರಿಂದ 12 ಕಡೆಗಳಲ್ಲಿನ ಹಾಸುಗಲ್ಲುಗಳು ಸಡಿಲಗೊಂಡಿವೆ. ಅರಳಿಮರದ ಗಿಡಗಳನ್ನು ಬುಡಸಹಿತ ಕಿತ್ತು ಹಾಕಲು ಲೋಕೋಪಯೋಗಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಅಪಾಯ ಎದುರಾಗಿದೆ. ಈ ಗಿಡಗಳನ್ನು ತಕ್ಷಣ ನಾಶಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮರಳು ಗಣಿಗಾರಿಕೆಯಿಂದಲೂ ಅಪಾಯ: ಈ ಸೇತುವೆಯಿಂದ ಒಂದೂವರೆ ಕಿ.ಮೀ. ದೂರದವರೆಗೆ ಮರಳುಗಾರಿಕೆ ಮಾಡುವ ಹಾಗಿಲ್ಲ ಎಂಬ ನಿಯಮ ಇದೆ. ಆದರೂ ಸೇತುವೆ ಸಮೀಪದಲ್ಲಿಯೇ ಮರಳು ಗಣಿಗಾರಿಕೆ ನಡೆಯುತ್ತಿದೆ. ನದಿದಡಕ್ಕೆ ಟ್ರ್ಯಾಕ್ಟರ್‌ಗಳನ್ನು ಒಯ್ದು ಜೆಸಿಬಿ ಯಂತ್ರಗಳ ಮೂಲಕ ಮರಳು ತೋಡುವುದರಿಂದ ಸೇತುವೆ ಅಡಿಪಾಯದ ಪಿಲ್ಲರ್‌ಗಳ ಬಳಿ ನೆಲ ಸಡಿಲಗೊಳ್ಳುತ್ತಿದೆ. ನದಿಯ ಒಡಲನ್ನು ಬಸಿದು ಮರಳು ಹೆಕ್ಕಿ ತೆಗೆಯುತ್ತಿರುವುದರಿಂದ ನದಿಯ ಉದ್ದಗಲಕ್ಕೂ ಬೃಹತ್ ಗಾತ್ರದ ಕಂದಕಗಳು ನಿರ್ಮಾಣವಾಗುವ ಸಾಧ್ಯತೆ ಇದೆ. ಸೇತುವೆ ಮೇಲಿನ ರಸ್ತೆಯಲ್ಲಿ ಬಿದ್ದ ಮಳೆ ನೀರು ಸರಿದು ಹೋಗಲು ನಿರ್ಮಿಸಿದ್ದ ಮ್ಯಾನ್‍ಹೋಲ್‌ಗಳು ಈಗ ಕಾಣುತ್ತಿಲ್ಲ. ಇದರಿಂದಾಗಿ ಮಳೆನೀರು ನಿಂತು ಸೇತುವೆ ಒಳಗಡೆ ನೀರು ಬಸಿದು ದುರ್ಬಲವಾಗುತ್ತಿದೆ ಎಂದು ಇಲ್ಲಿನ ನಿವಾಸಿ ಎಸ್.ಆರ್. ಹೇಮಾ ಬೇಸರ ವ್ಯಕ್ತಪಡಿಸಿದರು. 

ಶತಮಾನದ ಸೇತುವೆ ಸುಭದ್ರವಾಗಿದ್ದಲ್ಲಿ ಜನರ ಸಂಚಾರಕ್ಕೆ ಅನುಕೂಲವಾಗುತ್ತದೆ. ರಕ್ಷಣೆಗೆ ಗಮನ ನೀಡದಿದ್ದಲ್ಲಿ ಸೇತುವೆಯ ಅವಸಾನವನ್ನು ಕಾಣಬೇಕಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಸೇತುವೆ ಗೋಡೆಯಲ್ಲಿ ಬೆಳೆದಿರುವ ಅರಳಿ ಗಿಡಗಳನ್ನು ತೆರವುಗೊಳಿಸಲು ₹ 5.6 ಲಕ್ಷ ಅನುದಾನ ಬಿಡುಗಡೆಗೆ ಅನುಮತಿ ಸಿಕ್ಕಿದ್ದು ಮಳೆ ಕಡಿಮೆಯಾದ ನಂತರ ಜಂಗಲ್ ಕಟಾವಿಗೆ ಮುಂದಾಗುತ್ತೇವೆ.
-ಎಸ್.ಕೆ. ಕಣುಮಪ್ಪ, ಎಇಇ ಲೋಕೋಪಯೋಗಿ ಇಲಾಖೆ
ಹೊನ್ನಾಳಿ ತುಂಗಭದ್ರಾ ಸೇತುವೆಯ ಪಾಟಪಟ್ಟಿ ಹಾಸುಗಲ್ಲು ಸಡಿಲಗೊಂಡಿರುವುದು
ಹೊನ್ನಾಳಿ ತುಂಗಭದ್ರಾ ಸೇತುವೆಯ ಪಾಟಪಟ್ಟಿ ಹಾಸುಗಲ್ಲು ಸಡಿಲಗೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.