ADVERTISEMENT

ಹೊನ್ನಾಳಿ: 3 ವರ್ಷಗಳಿಂದ ಮುಗಿಯದ ಕಾಮಗಾರಿ; ಬೆಳಗದ ಅಲಂಕಾರಿಕ ವಿದ್ಯುತ್ ದೀಪಗಳು 

ಎನ್.ಕೆ.ಆಂಜನೇಯ
Published 21 ಡಿಸೆಂಬರ್ 2023, 6:27 IST
Last Updated 21 ಡಿಸೆಂಬರ್ 2023, 6:27 IST
ಹೊನ್ನಾಳಿ ಪಟ್ಟಣದಲ್ಲಿ ಅಳವಡಿಸಿರುವ ಅಲಂಕಾರಿಕ ವಿದ್ಯುತ್ ದೀಪಗಳು
ಹೊನ್ನಾಳಿ ಪಟ್ಟಣದಲ್ಲಿ ಅಳವಡಿಸಿರುವ ಅಲಂಕಾರಿಕ ವಿದ್ಯುತ್ ದೀಪಗಳು   

ಹೊನ್ನಾಳಿ: ನ್ಯಾಮತಿ, ಸುರಹೊನ್ನೆ ಹಾಗೂ ಹೊನ್ನಾಳಿ  ತಾಲ್ಲೂಕು ವ್ಯಾಪ್ತಿಯ ರಾಜ್ಯ ಹೆದ್ದಾರಿ –48 ಹಾಗೂ ರಾಜ್ಯ ಹೆದ್ದಾರಿ –26ರ ಮುಖ್ಯರಸ್ತೆಗಳ ವಿಭಜಕದಲ್ಲಿ ಅಲಂಕಾರಿಕ ವಿದ್ಯುತ್‌ ದೀಪ (ಮಿಡಿಯನ್‌ನಲ್ಲಿ ಜೆರ್ಸಿ ಕ್ರ್ಯಾಶ್ ಬ್ಯಾರಿಯರ್) ಅಳವಡಿಸುವ ₹ 25 ಕೋಟಿ ವೆಚ್ಚದ ಕಾಮಗಾರಿ 2020ರಲ್ಲಿ ಅನುಮೋದನೆಗೊಂಡಿದ್ದು, ಮೂರು ವರ್ಷಗಳು ಉರುಳಿದರೂ ಶೇ 50ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ.

ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಅಭಿವೃದ್ಧಿ ಯೋಜನೆಗಳಲ್ಲೊಂದಾದ ಅಲಂಕಾರಿಕ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಗೆ 2018–19ರಲ್ಲಿಯೇ ಅನುಮೋದನೆ ದೊರೆತಿದ್ದು, ಚನ್ನರಾಯಪಟ್ಟಣದ ಬಿಎಂಆರ್‌ಜಿ ಕನ್‌ಸ್ಟ್ರಕ್ಷನ್‌ ಕಾಮಗಾರಿಯ ಗುತ್ತಿಗೆ ಪಡೆದಿತ್ತು. ಅವರಿಂದ ಉಪಗುತ್ತಿಗೆ ಪಡೆದಿರುವ ಚನ್ನರಾಯಪಟ್ಟಣದ ಗುತ್ತಿಗೆದಾರರೊಬ್ಬರು ಈ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ. 

‘ನ್ಯಾಮತಿ ತಾಲ್ಲೂಕಿನ ಸವಳಂಗದಿಂದ ಆರಂಭಗೊಂಡು, ಸುರಹೊನ್ನೆ, ನ್ಯಾಮತಿ, ಹೊನ್ನಾಳಿ ಪಟ್ಟಣ, ಗೊಲ್ಲರಹಳ್ಳಿ ಸಮೀಪದ ಬಸವಾಪಟ್ಟಣ ರಸ್ತೆಯ ಕ್ರಾಸ್‌ವರೆಗೂ ಸುಮಾರು 365 ಕಂಬಗಳನ್ನು ಅಳವಡಿಸಲಾಗಿದೆ. ಜೊತೆಗೆ ಹೊನ್ನಾಳಿ ಪಟ್ಟಣದ ಒಳಗೆ ಸಿಂಗಲ್ ಆರ್ಮ್ ಪೋಲ್ಸ್ ಅಳವಡಿಸುವ ಕಾಮಗಾರಿಯನ್ನು ಕೈಗೊಂಡಿದ್ದು, ಸುಮಾರು 200 ಕಂಬಗಳನ್ನು ಅಳವಡಿಸಲಾಗಿದೆ’ ಎಂದು ಮಾಹಿತಿ ನೀಡಿದರು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಕಾರ್ಯನಿರ್ವಾಹಕ ಎಂಜಿನಿಯರ್‌ ಶಶಿಧರ್.

ADVERTISEMENT

ಅಪೂರ್ಣ ಮತ್ತು ಕಳಪೆ: ಆದರೆ, ಈ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕೆಲವು ಕಂಬಗಳು ಅಂಕುಡೊಂಕಾಗಿವೆ. ಇನ್ನು ಕೆಲವು ಮುರಿದು ಬಿದ್ದಿವೆ. ಎರಡು ಕಂಬಗಳ ಮಧ್ಯಭಾಗದ ವಿದ್ಯುತ್ ಕಂಬದ ಬುರುಡೆಗಳು ಕಳಚಿ ಬಿದ್ದಿವೆ. ಕೆಲವೆಡೆ ಮುಖ್ಯರಸ್ತೆಗಳ ವಿಭಜಕದಲ್ಲಿ ಅಲಂಕಾರಿಕ ವಿದ್ಯುತ್‌ ದೀಪ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸಿಲ್ಲ. ಈ ಕಾಮಗಾರಿಯನ್ನು 2022ರಲ್ಲೇ ಪೂರ್ಣಗೊಳಿಸಬೇಕಿತ್ತು. ಬಳಿಕ ಆಯಾ ಭಾಗದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಹೊನ್ನಾಳಿ ಪುರಸಭೆಯ ಎನ್‍ಒಸಿ ಪಡೆದು ಅವುಗಳ ಸುಪರ್ದಿಗೆ ವಹಿಸಬೇಕಾಗಿತ್ತು. ಆದರೆ 2023 ಕಳೆಯುತ್ತಾ ಬಂದಿದ್ದರೂ ಕಾಮಗಾರಿ ಪೂರ್ಣಗೊಳಿಸುವ ಆಸಕ್ತಿಯನ್ನು ಗುತ್ತಿಗೆದಾರರು ತೋರುತ್ತಿಲ್ಲ.

ಸ್ವತಃ ಶಾಸಕ ಡಿ.ಜಿ.ಶಾಂತನಗೌಡ ಅವರು ಗುತ್ತಿಗೆದಾರರೊಂದಿಗೆ ಮಾತನಾಡಿದರೂ ಪ್ರಯೋಜನವಾಗಿಲ್ಲ. ‘ಗುತ್ತಿಗೆದಾರರು ಕಾಮಗಾರಿಗೆ ಸಂಬಂಧಿಸಿದಂತೆ ಈಗಾಗಲೇ ₹ 10 ಕೋಟಿಯಷ್ಟು ಬಿಲ್ ಪಡೆದುಕೊಂಡಿದ್ದಾರೆ’ ಎಂದು ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

‘ಗುತ್ತಿಗೆದಾರರಿಗೆ ಈಗಾಗಲೇ 8ರಿಂದ 10 ನೋಟಿಸ್‌ ನೀಡಿದ್ದೇವೆ. ಅದ್ಯಾವುದಕ್ಕೂ ಅವರು ಸ್ಪಂದಿಸಿಲ್ಲ. ನಿಯಮಗಳ ಪ್ರಕಾರ ಇನ್ನೂ ಎರಡು ನೋಟಿಸ್ ಕೊಡಲಾಗುವುದು. ಅನಂತರವೂ ಅವರು ಕೆಲಸ ಆರಂಭಿಸದೇ ಇದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಇಇ ಶಶಿಧರ್ ಹೇಳಿದರು.

ಹೊನ್ನಾಳಿ ಪಟ್ಟಣದಲ್ಲಿ ಅಳವಡಿಸಿರುವ ಅಲಂಕಾರಿಕ ವಿದ್ಯುತ್ ದೀಪಗಳು
ಹೊನ್ನಾಳಿ ಪಟ್ಟಣದಿಂದ ದೇವನಾಯನಹಳ್ಳಿಗೆ ಹೋಗುವ ರಸ್ತೆಯಲ್ಲಿನ ಅಲ್ಲಲ್ಲಿ ವಿದ್ಯುತ್‌ ಕಂಬಗಳನ್ನು ಅಳವಡಿಸದಿರುವುದು
ಗುತ್ತಿಗೆದಾರರು ಈ ಕಾಮಗಾರಿಯನ್ನು 5 ವರ್ಷಗಳವರೆಗೆ ನಿರ್ವಹಿಸಬೇಕಾಗಿದ್ದು ಅಲ್ಲಿಯವರೆಗೂ ಅದರ ವಿದ್ಯುತ್ ಬಿಲ್ ಕೂಡಾ ಅವರೇ ಭರಿಸಬೇಕಾಗಿದೆ. ಅನಂತರ ಸಂಬಂಧಪಟ್ಟ ಪಂಚಾಯಿತಿಗಳಿಗೆ ಅದನ್ನು ವಹಿಸಬೇಕು.
ಶಶಿಧರ್ ಕಾರ್ಯನಿರ್ವಾಹಕ ಎಂಜಿನಿಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.