ADVERTISEMENT

ನಾಟಕರಂಗ ಗಟ್ಟಿ ಕಲೆ: ಬಾ.ಮಾ. ಬಸವರಾಜಯ್ಯ

ಹಿರಿಯ ರಂಗಕರ್ಮಿ ಬಾ.ಮಾ. ಬಸವರಾಜಯ್ಯ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 5:06 IST
Last Updated 28 ಮಾರ್ಚ್ 2021, 5:06 IST
ದಾವಣಗೆರೆಯ ವನಿತಾ ಸಮಾಜದಲ್ಲಿ ಶನಿವಾರ ನಡೆದ ರಂಗಭೂಮಿ ದಿನಾಚರಣೆಯನ್ನು ಹಿರಿಯ ರಂಗಕರ್ಮಿ ಬಾ.ಮಾ. ಬಸವರಾಜಯ್ಯ ಉದ್ಘಾಟಿಸಿದರು.
ದಾವಣಗೆರೆಯ ವನಿತಾ ಸಮಾಜದಲ್ಲಿ ಶನಿವಾರ ನಡೆದ ರಂಗಭೂಮಿ ದಿನಾಚರಣೆಯನ್ನು ಹಿರಿಯ ರಂಗಕರ್ಮಿ ಬಾ.ಮಾ. ಬಸವರಾಜಯ್ಯ ಉದ್ಘಾಟಿಸಿದರು.   

ದಾವಣಗೆರೆ: ಸಿನಿಮಾ, ಕಿರುತೆರೆಗಳಿಗಿಂತ ನಾಟಕರಂಗ ಗಟ್ಟಿ ಕಲೆಯಾಗಿದೆ ಎಂದುಹಿರಿಯ ರಂಗಕರ್ಮಿ ಬಾ.ಮಾ. ಬಸವರಾಜಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ನಾಟಕ ಅಕಾಡೆಮಿ ಮತ್ತು ಭೂಮಿಕಾ-ವನಿತಾ ರಂಗವೇದಿಕೆ ಸಂಯುಕ್ತಾಶ್ರಯದಲ್ಲಿ ನಗರದ ವನಿತಾ ಸಮಾಜದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ವಿಶ್ವ ರಂಗಭೂಮಿ’ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳು, ನಟರು ಹೆಚ್ಚು ಹೆಚ್ಚಾಗಿ ಚುರುಕುಗೊಳ್ಳುವುದು ನಾಟಕ ರಂಗದಿಂದಲೇ ಹೊರತು ಸಿನಿಮಾದಿಂದಲ್ಲ. ಬಹಳ ನಟರು ಸಿನಿಮಾ ನಿರ್ಮಾಣ ಮಾಡಿ ನಷ್ಟ ಹೊಂದಿ ವಾಪಸ್ ಬರುತ್ತಾರೆ. ಆದರೆ ರಂಗಾಯಣ, ಹೆಗ್ಗೋಡಿನಲ್ಲಿ ತಯಾರಾಗುವವರು ಗಟ್ಟಿ ಕಾಳಾಗಿ ಉಳಿಯುತ್ತಾರೆ’ ಎಂದು ಹೇಳಿದರು.

ADVERTISEMENT

‘ಕಲಾವಿದರು, ಮಕ್ಕಳು ನಾಟಕದಲ್ಲಿ ಅಭಿನಯಿಸುವುದರಿಂದ ಮತ್ತು ನೋಡುವುದರಿಂದ ಚುರುಕಾಗುತ್ತಾರೆ. ಸಿನಿಮಾದಲ್ಲಿ ಅದು ಸಾಧ್ಯವಿಲ್ಲ. ಮಕ್ಕಳಿಗೆ ಓದುವ ಜತೆಗೆ ನಾಟಕ ನೋಡುವ ಅಭಿರುಚಿಯನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.

‘ಜನಸಾಮಾನ್ಯರಿಗೆ ಅರ್ಥವಾಗದ ಕಾವ್ಯಕ್ಕೆ ಅಭಿನಯದ ಸ್ಪರ್ಶ ನೀಡಿದಾಗ ತಯಾರಾಗುವ ಕಲೆಯೇ ನಾಟಕ. ನಾಟಕದ ಮೂಲಕ ಕೊಡುವ ಸಂದೇಶವನ್ನು ಜನರು ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳುವ ಕಾಲಘಟ್ಟವೊಂದಿತ್ತು’ ಎಂದು ಸ್ಮರಿಸಿದರು.

ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಅರಳಗುಪ್ಪಿ ಮಾತನಾಡಿ, ‘ಮನುಷ್ಯನ ನೋವು, ಬೇಸರಗಳನ್ನು ಕಳೆಯುವ ಜತೆಗೆ ಸಮಾಜದ ಓರೆ-ಕೋರೆಗಳನ್ನು ತಿದ್ದುವ ಕೆಲಸವನ್ನು ನಾಟಕಗಳು ಮಾಡುತ್ತಿವೆ’ ಎಂದರು.

‘ಕಲೆಯನ್ನು ನೆಚ್ಚಿರುವವರು ಸೋಲುತ್ತಾರೆ ಎಂದು ಬಹಳ ಜನರು ಹೇಳುತ್ತಾರೆ. ದುಡ್ಡಿನ ವಿಚಾರದಲ್ಲಿ ಸೋಲಬಹುದಷ್ಟೇ. ಆದರೆ, ಕಲೆಯ ವಿಚಾರದಲ್ಲಿ ಕಲಾವಿದ ಗೆಲ್ಲುತ್ತಾನೆ. ಯಾವುದೇ ಕಲೆಯಾಗಲಿ ಕಲಾವಿದರನ್ನು ಮೇಲ್ಪಂಕ್ತಿಗೆ ತರುತ್ತವೆ. ಅವುಗಳ ಆಶ್ರಯದಲ್ಲಿ ನಾವಿರುತ್ತೇವೆ’ ಎಂದು ಹೇಳಿದರು.

ರಂಗವೇದಿಕೆಯ ಕಾರ್ಯದರ್ಶಿ ಬಿ.ಟಿ. ಜಾಹ್ನವಿ, ಉಪಾಧ್ಯಕ್ಷೆ ಸತ್ಯಭಾಮ ಮಂಜುನಾಥ್, ಖಜಾಂಚಿ ಎಚ್.ಎಸ್. ಸುಧಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.