ADVERTISEMENT

'ಎಸ್‌.ಟಿ ಹೋರಾಟದ ಹಿಂದೆ ಯಾರ ಕೈವಾಡವೂ ಇಲ್ಲ'

ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 12:12 IST
Last Updated 5 ಡಿಸೆಂಬರ್ 2020, 12:12 IST
ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ
ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ   

ದಾವಣಗೆರೆ: ‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನಡೆಸುತ್ತಿರುವ ಹೋರಾಟದ ಹಿಂದೆ ಯಾರ ಕೈವಾಡವೂ ಇಲ್ಲ. ಕಾಗಿನೆಲೆ ಗುರುಪೀಠ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ’ ಎಂದು ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸ್ಪಷ್ಟಪಡಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿ.ಎಲ್.‌ ಸಂತೋಷ್ ಅವರು ಕರ್ನಾಟಕದ ಪ್ರತಿನಿಧಿಯಾಗಿದ್ದು, ಇಲ್ಲಿನ ವಾತಾವರಣ ಅವರಿಗೆ ಗೊತ್ತಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಂಬ ಕಾರಣಕ್ಕೆ ಅವರನ್ನು ಭೇಟಿ ಮಾಡಿದ್ದೇವೆಯೇ ಹೊರತು ಬೇರೆ ಹಿನ್ನೆಲೆಯಿಂದಲ್ಲ. ಇವರ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಸಂಪರ್ಕಿಸಿದೆವು. ಕೆಲವರು ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳುತ್ತಾರೆ. ಈ ಸಂಘಟನೆಯ ಜೊತೆಗೆ ಯಾರ ಕೈವಾಡವೂ ಇಲ್ಲ. ನಮಗೆ ಬೇಕಾಗಿರುವುದು ಎಸ್‌ಟಿ ಮೀಸಲಾತಿ. ಯಾರು ಕೊಡುತ್ತೇವೆ ಎಂದು ಹೇಳಿದರೂ ಸ್ವಾಗತಿಸುತ್ತೇವೆ’ ಎಂದರು.

‘ಎಸ್‌.ಟಿ ಹೋರಾಟ ಆರಂಭಿಸುವ ಮೊದಲು ಭೇಟಿ ಮಾಡಿದ್ದೇ ಸಿದ್ದರಾಮಯ್ಯ ಅವರನ್ನು. ಅವರ ಅನುಮತಿ ಪಡೆದ ಬಳಿಕವೇ ಈಶ್ವರಪ್ಪ ಅವರ ಬಳಿಗೆ ಹೋದೆವು. ಈಶ್ವರಪ್ಪ ಅವರು ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟರು. ‘ನಿಮ್ಮ ಹೋರಾಟಕ್ಕೆ ನಮ್ಮ ವಿರೋಧವಿಲ್ಲ. ನೀವು ಮುಂದುವರಿಯಿರಿ’ ಎಂದು ಸಿದ್ದರಾಮಯ್ಯ ಹೇಳಿದ ನಂತರ ಹೋರಾಟ ಆರಂಭಿಸಿದೆವು’ ಎಂದು ಸ್ವಾಮೀಜಿ ತಿಳಿಸಿದರು.

ADVERTISEMENT

‘ಕುರುಬ ಸಮಾಜದ ಸಿದ್ದರಾಮಯ್ಯ ಅಹಿಂದ ನಾಯಕರು. ಇಂತಹ ನೂರು ಸಂಘಟನೆ ಹುಟ್ಟಿಬಂದರೂ ಅವರ ವರ್ಚಸ್ಸನ್ನು ಕುಂದಿಸಲು ಸಾಧ್ಯವಿಲ್ಲ. ಅವರು ಯಾವಾಗ ಹೋರಾಟಕ್ಕೆ ಬಂದರೂ ಸ್ವಾಗತಿಸುತ್ತೇವೆ. ಸಮಾಜದಲ್ಲಿ ಇರುವ ಗೊಂದಲಗಳು ಆದಷ್ಟು ಬೇಗ ತಿಳಿಯಾಗುತ್ತವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.