ಬಸವಾಪಟ್ಟಣ: ಸಮೀಪದ ಕಂಚುಗಾರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳಲ್ಲದೇ ವಿದ್ಯಾರ್ಥಿಗಳು ಮರಗಳ ಕೆಳಗೆ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂದಾಜು 50 ವರ್ಷಗಳ ಹಿಂದೆ ಮಣ್ಣಿನ ಗೋಡೆ ಹಾಗೂ ಹೆಂಚು ಬಳಸಿ ನಿರ್ಮಿಸಿದ್ದ ತರಗತಿ ಕೋಣೆಗಳು ಸಂಪೂರ್ಣ ಹಾಳಾಗಿದ್ದರಿಂದ ಶಿಕ್ಷಣ ಇಲಾಖೆ ಅವುಗಳನ್ನು ನೆಲಸಮಗೊಳಿಸಲು ಆದೇಶಿತ್ತು. ಇದೇ ಏಪ್ರಿಲ್‌ನಲ್ಲಿ ಶಾಲೆಯ ಐದು ಕೊಠಡಿಗಳನ್ನು ಕೆಡವಲಾಗಿತ್ತು. ಇತ್ತೀಚೆಗೆ ನಿರ್ಮಿಸಲಾಗಿದ್ದ ಒಂದೇ ಕೋಣೆ ಉಳಿದಿದೆ.
‘ಶಾಲೆಯಲ್ಲಿ ಒಂದರಿಂದ ಏಳನೇ ತರಗತಿ ನಡೆಯುತ್ತಿದ್ದು, 142 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಏಳೂ ತರಗತಿಗಳ ಎಲ್ಲ ವಿದ್ಯಾರ್ಥಿಗಳನ್ನೂ ಒಂದೇ ಕೋಣೆಯಲ್ಲಿ ಕೂಡಿಸಿ ಪಾಠ ಮಾಡುವುದು ಅಸಾಧ್ಯವಾಗಿದ್ದು, ಅನಿವಾರ್ಯವಾಗಿ ಶಾಲಾ ಆವರಣದ ಮರಗಳ ಕೆಳಗೆ ಕೂಡಿಸಿ ತರಗತಿ ನಡೆಸುತ್ತಿದ್ದೇವೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಡಿ.ಕೆ.ರಾಜು ಹೇಳಿದರು.
ನೂತನ ಕೊಠಡಿ ನಿರ್ಮಿಸುವಂತೆ ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ರಾಜ್ಯ ಮುಖ್ಯ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.
‘142 ವಿದ್ಯಾರ್ಥಿಗಳ ಪೈಕಿ ಶೇ 90ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಸಮುದಾಯಕ್ಕೆ ಸೇರಿದವರೇ ಇದ್ದಾರೆ. ಇವರಲ್ಲಿ ಬಹುತೇಕರು ಬಡತನದ ಕುಟುಂಬಗಳಿಗೆ ಸೇರಿದ ಮಕ್ಕಳು. ತರಗತಿ ಕೊಠಡಿಗಳ ಕೊರತೆಯು ಈ ಮಕ್ಕಳ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿ.ಇ.ಒ, ಡಿ.ಡಿ.ಪಿ.ಐ ಶಾಲೆಗೆ ಭೇಟಿ ನೀಡಿ ನೂತನ ಕೊಠಡಿ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಎ.ಕುಮಾರ್, ಉಪಾಧ್ಯಕ್ಷ ಗಿರೀಶ್ ಆಗ್ರಹಿಸಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಪಾಲಕರು ಮಕ್ಕಳನ್ನು ಸೇರಿಸುವುದಿಲ್ಲ ಎಂಬ ದೂರಿದೆ. ಆದರೆ ಪಾಠ ಕೇಳಲು ಕೊಠಡಿಗಳೇ ಇಲ್ಲ ಎಂದಮೇಲೆ ಪಾಲಕರು ನಮ್ಮ ಶಾಲೆಗೆ ಮಕ್ಕಳನ್ನು ಹೇಗೆ ಸೇರಿಸುತ್ತಾರೆ. ಮಕ್ಕಳ ಸಂಖ್ಯೆ ಕಡಿಮೆಯಾದರೆ ಶಾಲೆಯನ್ನು ಮುನ್ನಡೆಸುವುದಾದರೂ ಹೇಗೆಎಂ.ಹರೀಶ್ ಎಸ್.ಡಿ.ಎಂ.ಸಿ.ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.