ADVERTISEMENT

ಹೊನ್ನಾಳಿ | ವಾರ್ಡ್, ಬ್ಲಾಕ್ ರಸ್ತೆಗಳಿಗಿಲ್ಲ ನಾಮಫಲಕ: ವಿಳಾಸ ಹುಡುಕಲು ಪರದಾಟ

ಎನ್.ಕೆ.ಆಂಜನೇಯ
Published 28 ಮೇ 2024, 7:08 IST
Last Updated 28 ಮೇ 2024, 7:08 IST
<div class="paragraphs"><p>ನಾಮಫಲಕಗಳು ಎಲ್ಲೆಂದರಲ್ಲಿ ಬಿದ್ದಿರುವುದು</p></div>

ನಾಮಫಲಕಗಳು ಎಲ್ಲೆಂದರಲ್ಲಿ ಬಿದ್ದಿರುವುದು

   

ಹೊನ್ನಾಳಿ: ಪಟ್ಟಣದಲ್ಲಿ ದಿನಕ್ಕೊಂದು ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಆದರೆ, ಊರಿಗೆ ಬರುವ ಹೊಸಬರು ಬಡಾವಣೆಯ ವಿಳಾಸ ಹುಡುಕಿ ಹೊರಟರೆ ಅವರಿಗೆ ನಿರಾಸೆಯೇ ಗತಿ. ಯಾವ ಬಡಾವಣೆಗೂ ಸರಿಯಾದ ನಾಮಫಲಕದ ವ್ಯವಸ್ಥೆ ಇಲ್ಲ. ಹೀಗಾಗಿ ವಿಳಾಸ ಹುಡುಕುವುದೇ ದುಸ್ತರವಾಗಿದೆ.

ವಾರ್ಡ್‍ಗಳು, ಬ್ಲಾಕ್‍ಗಳು ಹಾಗೂ ಬೀದಿಯ ಹೆಸರು ಹೇಳುವುದಕ್ಕೆ ಅಲ್ಲೊಂದು ಫಲಕ ಇರಬೇಕು. ಹೊಸದಾಗಿ ನಿರ್ಮಾಣವಾದ ಯಾವ ಬಡಾವಣೆಗೂ ನಾಮಫಲಕ ಅಳವಡಿಸಿಲ್ಲ. ಬಡಾವಣೆಯ ಒಳಗಿನ ಮುಖ್ಯರಸ್ತೆಗಳು, ಅಡ್ಡರಸ್ತೆಗಳನ್ನು ಪತ್ತೆ ಹಚ್ಚುವುದು ಊರಿಗೆ ಬರುವ ಹೊಸಬರಿಗೆ ಒತಟ್ಟಿಗಿರಲಿ, ಸ್ಥಳೀಯರಿಗೂ ಪ್ರಯಾಸದ ಕೆಲಸ ಎಂದು ಸಾರ್ವಜನಿಕರು ದೂರಿದ್ದಾರೆ.

ADVERTISEMENT

ಹೊಸದಾಗಿ ಹುಟ್ಟಿಕೊಂಡ ದುರ್ಗಿಗುಡಿ ಬಡಾವಣೆಯನ್ನು ಉತ್ತರ ಭಾಗ, ಮಧ್ಯಭಾಗ ಹಾಗೂ ದಕ್ಷಿಣ ಭಾಗ ಎಂದು ಬೇರ್ಪಡಿಸಲಾಗಿದೆ. ಅದೇ ರೀತಿ ತುಂಗಭದ್ರಾ ಬಡಾವಣೆಯನ್ನೂ ಉತ್ತರ ಹಾಗೂ ದಕ್ಷಿಣ ಭಾಗಗಳಾಗಿ ಗುರುತಿಸಲಾಗಿದೆ. ಈ ಬಡಾವಣೆಗಳಲ್ಲಿ ಯಾವುದೋ ಅಡ್ಡರಸ್ತೆಯಲ್ಲಿ ಇರುವ ತಮ್ಮ ಸಂಬಂಧಿಕರ, ಸ್ನೇಹಿತರ, ಪರಿಚಯದವರ ವಿಳಾಸ ಹುಡುಕಿ ಹೊರಟವರು ದಿಕ್ಕು ತಪ್ಪುವುದು ಸಾಮಾನ್ಯ. ದಾರಿಗಾಗಿ ಕಂಡಕಂಡವರನ್ನು ವಿಚಾರಿಸಿ ಸುಸ್ತಾಗುವುದು ಮಾಮೂಲು. ಪರಿಚಯಸ್ಥರು ವಿಳಾಸ ಕೇಳಿಬರುತ್ತಾರೆ. ಕೈ ತೋರಿಸಿ ಅಥವಾ ಮಾತಿನಲ್ಲಿ ಹೇಳಿ ಸೂಚಿಸುವುದು ಕಷ್ಟವಾಗುತ್ತಿದೆ. ಇಲ್ಲವಾದರೆ ಯಾರಾದರೂ ಅವರನ್ನು ಕರೆದುಕೊಂಡೇ ವಿಳಾಸಕ್ಕೆ ತಲುಪಿಸಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಮಂಜುನಾಥ್ ಇಂಚರ.

‘ಪಟ್ಟಣದಲ್ಲಿ 2,500ಕ್ಕೂ ಹೆಚ್ಚು ಮನೆಗಳಿವೆ. ಈ ಹಿಂದೆ ಮನೆಗಳಿಗೆ ಸಂಖ್ಯೆ ನೀಡಲಾಗುತ್ತಿತ್ತು. ಮನೆಯ ಬಾಗಿಲಿನ ಮೇಲೆ ಸಂಖ್ಯೆಯನ್ನು ನಮೂದಿಸಲಾಗುತ್ತಿತ್ತು. ಆದರೆ, ಈಗ ಮನೆಗಳಿಗೆ ಸಂಖ್ಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಮೊಬೈಲ್ ಆ್ಯಪ್‌ನಲ್ಲಿ ಆಸ್ತಿಗಳ ಬಗ್ಗೆ ಮಾಹಿತಿ ನೀಡಲು ಸರ್ಕಾರವು ಮುಂದಾಗಿದೆ. ಆದರೆ, ಮುಂಚಿತವಾಗಿಯೇ ಡೋರ್ ನಂಬರ್, ಬ್ಲಾಕ್ ನಂಬರ್ ಹಾಗೂ ಪ್ರಾಪರ್ಟಿ ಸಂಖ್ಯೆ ನೀಡಿದರೆ ನಿವಾಸಿಗಳು ತಮ್ಮ ಆಸ್ತಿ ಬಗ್ಗೆ ಮಾಹಿತಿ ಪಡೆಯಲು ಹಾಗೂ ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ’ ಎಂದು ನಿವಾಸಿ ಎಚ್.ಸಿ. ನವೀನ್ ಹೇಳಿದರು.

ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದೆ. ಚುನಾವಣೆಯಲ್ಲಿ ಗೆದ್ದರೂ ಸದಸ್ಯರಿಗೆ ಅಧಿಕಾರವಿಲ್ಲದಂತಾಗಿದೆ. ಶಾಸಕರು ಒಮ್ಮೆಯೂ ಪುರಸಭೆ ಸಭೆ ಕರೆದು, ಅಭಿವೃದ್ಧಿ ಬಗ್ಗೆ ಚರ್ಚಿಸಿಲ್ಲ. ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರ ಸಮಸ್ಯೆಗಳು ಏನು ಎಂದು ಕೇಳುವ ಗೋಜಿಗೆ ಹೋಗಿಲ್ಲ ಎಂಬುದು ನಿವಾಸಿಗಳ ದೂರು.

ನಾಮಫಲಕಗಳ ಮೇಲೆ ಪಟ್ಟಣ ಪಂಚಾಯಿತಿ ಬದಲಾಗಿ ಪುರಸಭೆ ಎಂದು ಬದಲಿಸಬೇಕಿದೆ. ಸಮೀಕ್ಷೆ ನಡೆಸಿ ಬದಲಾಯಿಸಲಾಗುವುದು. ವಾರ್ಡ್‍ವಾರು ನಾಮಫಲಕ ಅಳವಡಿಕೆ ಬಗ್ಗೆ ಉಪ ವಿಭಾಗಾಧಿಕಾರಿ ಗಮನಕ್ಕೆ ತರಲಾಗುವುದು.
ಎಚ್. ನಿರಂಜನಿ, ಮುಖ್ಯಾಧಿಕಾರಿ, ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.