ದಾವಣಗೆರೆ: ಇಂದಿನ ರಾಜಕೀಯ, ಸಾಮಾಜಿಕ ವಿದ್ಯಮಾನಗಳಿಗೆ ಯಾರು ಸ್ಪಂದಿಸುವುದಿಲ್ಲವೋ, ಧ್ವನಿ ಎತ್ತುವುದಿಲ್ಲವೋ ಅವರು ಅಪರಾಧಿಗಳು ಎಂದು ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೇಳಿದರು.
ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ‘ಬಿ.ಬಸವಲಿಂಗಪ್ಪ: ನೂರರ ನೆನಪು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಳಸಮುದಾಯಗಳಲ್ಲಿ ನಾಲ್ಕು ವರ್ಗದ ಜನರು ಇರುತ್ತಾರೆ. ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿ, ಒಳ್ಳೆಯ ಉದ್ಯೋಗ ಪಡೆದು ಆರಾಮವಾಗಿ ಇರುವವರು, ಬಡತನದಲ್ಲಿ ಹುಟ್ಟಿ, ಎಲ್ಲ ಅವಮಾನಗಳನ್ನು ಅನುಭವಿಸಿ, ಸ್ವಲ್ಪ ಅನುಕೂಲಸ್ಥರಾದ ಮೇಲೆ ಹಿಂದಿನದ್ದನ್ನೆಲ್ಲ ಮರೆತು ಆರಾಮವಾಗಿ ಇರುವವರು ಮೊದಲ ಎರಡು ವರ್ಗಗಳು ಎಂದರು.
ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿಯೂ ತನ್ನ ಸಮುದಾಯಕ್ಕಾಗಿ ಹೋರಾಟ ಮಾಡುವವರು, ಕೆಲಸ ಮಾಡುವವರು ಮೂರನೇ ವರ್ಗ. ಈ ವರ್ಗಕ್ಕೆ ಸೇರಿದವರು ಬಸವಲಿಂಗಪ್ಪ. ಬಡವರಾಗಿ ಹುಟ್ಟಿ ಎಲ್ಲ ಅಸಮಾನತೆ, ಅಪಮಾನ, ಕ್ರೌರ್ಯಗಳನ್ನು ಅನುಭವಿಸಿ ಮುಂದೆ ಅವುಗಳ ವಿರುದ್ಧ ಹೋರಾಟದ ಬದುಕು ಕಟ್ಟಿಕೊಳ್ಳುತ್ತಾರೆ. ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಉದಾಹರಣೆ ಎಂದು ವಿವರಿಸಿದರು.
‘ಬಸವಲಿಂಗಪ್ಪ ಅವರ ಬದುಕು ಮತ್ತು ಸಾಧನೆಯ ಬಗ್ಗೆ ತಿಳಿಸುವ ಒಂದೇ ಒಂದು ಪುಸ್ತಕ ಇಲ್ಲ. ನಮಗೆ ಮಾದರಿ ಎಂದು ತಿಳಿದವರ ಬಗ್ಗೆ ಈ ರೀತಿಯ ನಿರ್ಲಕ್ಷ್ಯ ಯಾಕೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಇಂದು ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ವಿರುದ್ಧ ಮಾಧ್ಯಮಗಳು ಹೇಗೆ ನಡೆದುಕೊಳ್ಳುತ್ತಿವೆ ಎಂಬುದು ಈಗಿನವರಿಗೆ ಗೊತ್ತು. ಬಸವಲಿಂಗಪ್ಪ ಅವರ ಕಾಲದಲ್ಲಿಯೂ ಮಾಧ್ಯಮ ಇದಕ್ಕಿಂತ ಭಿನ್ನವಾಗಿ ಇರಲಿಲ್ಲ. ಬಸವಲಿಂಗಪ್ಪ ಅವರ ವಿರುದ್ಧವೇ ಇದ್ದವು’ ಎಂದು ತಿಳಿಸಿದರು.
ಕನ್ನಡದಲ್ಲಿ ಇರುವುದು ಬೂಸಾ ಎಂದು ಅವರು ಬಾಯಿ ತಪ್ಪಿ ಹೇಳಿದ್ದಲ್ಲ. ಅದಕ್ಕಿಂತ ಹಿಂದಿನ ಎಲ್ಲ ಘಟನೆಗಳು, ಅವರ ಮಾತುಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ. ದೇವರ ಫೋಟೊಗಳನ್ನು ಚರಂಡಿಗೆ ಎಸೆಯಿರಿ ಎಂದು ಹೇಳಿದ್ದರು. ಗಾಂಧೀಜಿ ಪೂರ್ತಿ ಸತ್ಯಹೇಳಿಲ್ಲ ಎಂದು ಹೇಳಿಕೆ ನೀಡಿದ್ದರು. ವಿಧಾನಸಭೆಯಲ್ಲಿ ಅಧಿವೇಶನ ಆರಂಭಗೊಳ್ಳುವ ಮೊದಲು ದೇವರ ಪ್ರಾರ್ಥನೆ ಮಾಡಬೇಕು ಎಂದು ಆಗಿನ ಸರ್ಕಾರ ನಿರ್ಧರಿಸಲು ಹೊರಟಾಗ ವಿಧಾನಸಭೆಯನ್ನು ದೇವಸ್ಥಾನ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದರು. ಬೂಸಾ ಹೇಳಿಕೆ ಇದರ ಕ್ಲೈಮಾಕ್ಸ್ ಆಗಿತ್ತು ಎಂದು ಅಭಿಪ್ರಾಯಪಟ್ಟರು.
ಇತಿಹಾಸದ ಚಕ್ರಗಳನ್ನು ಹಿಂದಕ್ಕೆ ಬರುತ್ತಿವೆ. ಅಂಬೇಡ್ಕರ್, ಕುವೆಂಪು, ನಾರಾಯಣಗುರು ಮುಂತಾದವರು ಅಂದು ಮಾತನಾಡಿದ್ದವುಗಳನ್ನು ಇಂದು ಮಾತನಾಡಿದ್ದರೆ ಏನಾಗುತ್ತಿತ್ತು? ಬದುಕಲು ಸಾಧ್ಯವಿತ್ತೇ? ಚರ್ಚೆಗೂ ಅವಕಾಶ ಇಲ್ಲದ ಪರಿಸ್ಥಿತಿ ಯಾಕೆ ನಿರ್ಮಾಣವಾಯಿತು? ಎಂದು ಪ್ರಶ್ನಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ, ‘ಬಸವಲಿಂಗಪ್ಪ ಅವರು ಬೂಸಾ ಸಾಹಿತ್ಯ ಹೇಳಿಕೆ ನೀಡಿದ್ದ ಸಂದರ್ಭದಲ್ಲಿ ಕುವೆಂಪು ಅವರನ್ನು ಬೆಂಬಲಿಸಿದ್ದರು. ನಾನು ನಲ್ವತ್ತು ವರ್ಷ ಬರೆದು ಯಾವ ಬದಲಾವಣೆಯನ್ನೂ ಮಾಡಲು ಆಗಿಲ್ಲ. ನಿಮ್ಮ ಒಂದು ಹೇಳಿಕೆಯಿಂದ ಸಾಧ್ಯವಾಗಿದೆ ಶ್ಲಾಘಿಸಿದ್ದರು’ ಎಂದು ನೆನಪು ಮಾಡಿಕೊಂಡರು.
ಬಸವಲಿಂಗಪ್ಪ ಸಂಪುಟದಲ್ಲಿ ಇದ್ದರೆ ಒಳ್ಳೆಯ ಕೆಲಸಗಳಾಗುತ್ತವೆ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ದೇವರಾಜ ಅರಸು ತಿಳಿದುಕೊಂಡಿದ್ದರು. ಅದರಂತೆಯೇ ಬಸವಲಿಂಗಪ್ಪ ಕೆಲಸ ಮಾಡಿದ್ದರು. ಆದರೆ, ಬೂಸಾ ಸಾಹಿತ್ಯ ವಿವಾದದಲ್ಲಿ ಸವರ್ಣೀಯರೆಲ್ಲರೂ ವಿರೋಧಿಸಿದ್ದರಿಂದ ಬಸವಲಿಂಗಪ್ಪ ಅವರ ರಾಜೀನಾಮೆಯನ್ನು ಅರಸು ಪಡೆಯಬೇಕಾಯಿತು ಎಂದು ನೆನಪಿಸಿಕೊಂಡರು.
ಗಾಂಧಿಭವನದ ಕಾರ್ಯದರ್ಶಿ ಇಂದಿರಾ ಕೃಷ್ಫ್ಪ, ಹರಿಹರದ ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್‌ನ ರುದ್ರಪ್ಪ ಹನಗವಾಡಿ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರುದ್ರಮುನಿ ಎನ್., ಸಾಹಿತಿ ಚಂದ್ರಶೇಖರ ತಾಳ್ಯ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ, ಪತ್ರಕರ್ತ ಬಿ. ಚಂದ್ರೇಗೌಡ ಮಾತನಾಡಿದರು. ದಾದಾಪೀರ್ ನವಿಲೇಹಾಳ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.