ಜಗಳೂರು: ತಾಲ್ಲೂಕಿನ ದೊಣೆಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬುಧವಾರ ರಾತ್ರಿ ಎರಡು ಲಾರಿಗಳು ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಮೂವರು ಸಜೀವ ದಹನರಾಗಿದ್ದಾರೆ.
ಹೊಸಪೇಟೆ ಕಡೆಯಿಂದ ಚಿತ್ರದುರ್ಗದ ಕಡೆಗೆ ಬರುತ್ತಿದ್ದ ಜಾರ್ಖಂಡ್ ರಾಜ್ಯದ ನೋಂದಣಿ ಸಂಖ್ಯೆ ಹೊಂದಿರುವ, ಕೆಮಿಕಲ್ ಸಾಗಿಸುವ ಟ್ಯಾಂಕರ್ ಮತ್ತು ಟೈರ್ ತುಂಬಿಸಿಕೊಂಡು ಚಿತ್ರದುರ್ಗ ಕಡೆಯಿಂದ ಹೋಗುತ್ತಿದ್ದ ಹರಿಯಾಣ ನೋಂದಣಿ ಸಂಖ್ಯೆ ಹೊಂದಿರುವ ಲಾರಿ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯಾದ ರಭಸಕ್ಕೆ ತಕ್ಷಣ ಬೆಂಕಿ ಹತ್ತಿ ಉರಿಯತೊಡಗಿದೆ. ರಾತ್ರಿ 8ಕ್ಕೆ ಅಪಘಾತವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡು ಗಂಟೆ ಪ್ರಯತ್ನಿಸಿ ಬೆಂಕಿ ನಂದಿಸಿದರು. ಟ್ಯಾಂಕರ್‌ನಲ್ಲಿ ಕರಕಲಾದ ಎರಡು ಮೃತದೇಹಗಳು ಮತ್ತೆಯಾಗಿವೆ. ಟೈರ್ ಸಾಗಿಸುವ ಲಾರಿಯಲ್ಲಿ ಸುಟ್ಟು ಕರಕಲಾದ ಒಂದು ಮೃತದೇಹ ಪತ್ತೆಯಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಬಸವಪ್ರಭು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದುದರಿಂದ ಅರ್ಧ ರಸ್ತೆಯನ್ನು ಮುಚ್ಚಲಾಗಿತ್ತು. ರಸ್ತೆಯಲ್ಲಿ ವೇಗವಾಗಿ ಬಂದಿರುವುದೇ ಅಪಘಾತ ಎಂದು ಶಂಕಿಸಲಾಗಿದೆ. ಬೆಂಕಿ ಜ್ವಾಲೆಯಿಂದಾಗಿ ಸ್ಥಳೀಯರಿಗೆ ಹತ್ತಿರಕ್ಕೆ ಹೋಗಲು ಸಾಧ್ಯವಾಗಿಲ್ಲ. ಈ ಅಪಘಾತದಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಎರಡೂ ಕಡೆಗಳಲ್ಲಿ ಸುಮಾರು 8 ಕಿಲೋಮೀಟರ್ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.