ADVERTISEMENT

ಸಂತೇಬೆನ್ನೂರು: ಮಂಡಿಗಳಲ್ಲಿ ತೋತಾಪುರಿ ಮಾವಿನ ಸದ್ದು, ನಿತ್ಯ 8–10 ಟನ್ ರಫ್ತು

ಮುಂಬೈ, ಪುಣೆ ಮಾರುಕಟ್ಟೆಗೆ ಸಾಗಣೆ

ಕೆ.ಎಸ್.ವೀರೇಶ್ ಪ್ರಸಾದ್
Published 2 ಮಾರ್ಚ್ 2024, 6:11 IST
Last Updated 2 ಮಾರ್ಚ್ 2024, 6:11 IST
<div class="paragraphs"><p>ಬಾಕ್ಸ್‌ಗಳಲ್ಲಿ ತುಂಬಿರುವ ತೋತಾಪುರಿ ಮಾವು</p></div>

ಬಾಕ್ಸ್‌ಗಳಲ್ಲಿ ತುಂಬಿರುವ ತೋತಾಪುರಿ ಮಾವು

   

ಸಂತೇಬೆನ್ನೂರು: ಇಲ್ಲಿನ ಮಾವಿನ ಮಂಡಿಗಳಲ್ಲಿ ತೋತಾಪುರಿ ಹಣ್ಣಿನ ವಹಿವಾಟು ಬಿರುಸಿನಿಂದ ಸಾಗಿದೆ. ಕಾಯಿ ಹಂತದಲ್ಲೇ ಬೇಡಿಕೆ ಹೊಂದಿದ್ದ ತೋತಾಪುರಿ ಇದೀಗ ಮಂಡಿಗಳಿಗೆ ಲಗ್ಗೆಯಿಟ್ಟಿದ್ದು, ಹೊರರಾಜ್ಯಗಳಿಗೆ ನಿತ್ಯವೂ ರಫ್ತಾಗುತ್ತಿದೆ. ಹಣ್ಣಾಗುವ ಮೊದಲೇ ಮಾರುಕಟ್ಟೆಗೆ ಬಂದಿದ್ದು, ಸದ್ಯ ಉಪ್ಪಿನಕಾಯಿ ಉತ್ಪಾದಕ ಕಂಪನಿಗಳ ಬೇಡಿಕೆಯನ್ನು ಪೂರೈಸುತ್ತಿದೆ.

ಆಲ್ಫೋನ್ಸೋ, ರಸಪುರಿ, ಸಿಂಧೂರ ತಳಿಯ ಮಾವಿನ ಇಳುವರಿಯು ಹವಾಮಾನ ವೈಪರೀತ್ಯದ ಕಾರಣದಿಂದ ತೀವ್ರವಾಗಿ ಕುಸಿದಿದೆ. ತೋತಾಪುರಿ ಮಾವಿನ ವ್ಯಾಪ್ತಿ ಕಡಿಮೆಯಿದ್ದರೂ, ಇಳುವರಿ ಹೆಚ್ಚು. ಹೀಗಾಗಿ ಉಳಿದ ತಳಿಯ ಮಾವುಗಳಿಗಿಂತ ತೋತಾಪುರಿ ಈ ಬಾರಿ ಹೆಚ್ಚಾಗಿ ಕಾಣಸಿಗುತ್ತಿದೆ.

ADVERTISEMENT

ಕಳೆದ ಮೂರು ವರ್ಷದಿಂದ ಮಾವು ಬೆಳೆಯಲ್ಲಿ ಸ್ಥಿರತೆ ಇರಲಿಲ್ಲ. ಉತ್ಕೃಷ್ಟ ತಳಿಗಳು ಹೂವಿನ ಹಂತದಲ್ಲಿಯೇ ನುಸಿ ಕಾಟದಿಂದ ಅಂಟು ಬಿದ್ದು ಒಣಗಿವೆ. ಈ ಬಾರಿಯೂ ಶೇ 25ರಷ್ಟು ಇಳುವರಿ ಕೊರತೆಯಾಗಿದೆ. ತೋತಾಪುರಿಯ ದೊಡ್ಡ ಮರಗಳಲ್ಲಿ 1,000ದಿಂದ 2,000 ಕಾಯಿಗಳು ಬಿಡುತ್ತವೆ. ಬೆಲೆ ಕಡಿಮೆ ಇದ್ದರೂ ಇಳುವರಿ ಹೆಚ್ಚು ಎನ್ನುತ್ತಾರೆ ಬೆಳೆಗಾರ ಕೆ. ವಿಜಯ್.

‘ನಿತ್ಯ ನಮ್ಮ ಮಾವಿನ ಮಂಡಿಯಲ್ಲಿ 3ರಿಂದ 4 ಟನ್ ತೋತಾಪುರಿ ಮಾವು ಮುಂಬೈ, ಪುಣೆ ಮಾರುಕಟ್ಟೆಗೆ ರಫ್ತಾಗುತ್ತಿದೆ. ತಲಾ 40 ಕೆ.ಜಿ. ತೂಕದ 1,000 ಬಾಕ್ಸ್‌ ಪ್ಯಾಕಿಂಗ್ ಮಾಡುತ್ತೇವೆ’ ಎನ್ನುತ್ತಾರೆ ಎಸ್‌ಕೆಎಚ್ ಫ್ರೂಟ್ಸ್ ಮಂಡಿ ಮಾಲೀಕ ಜಬೀರ್.

ಎರಡು ತಿಂಗಳಿನಿಂದ ತೋತಾಪುರಿ ಮಾವು ವಹಿವಾಟು ನಡೆಯುತ್ತಿದೆ. ಬೇಗ ಹೂ ಬಿಟ್ಟಿದ್ದ ಕಾರಣ, ಇದು ಬೋನಸ್ ಬೆಳೆಯಾಗಿದೆ. ಇನ್ನೂ ಒಂದು ತಿಂಗಳು ವಹಿವಾಟು ನಡೆಯಲಿದೆ. ನಿತ್ಯವೂ ಗ್ರಾಮದ ವಿವಿಧ ಮಂಡಿಗಳಿಂದ 8 ರಿಂದ 10 ಟನ್ ತೋತಾಪುರಿ ಮಾವು ಹೊರ ರಾಜ್ಯಗಳಿಗೆ ರಫ್ತಾಗುತ್ತಿದೆ’ ಎನ್ನುತ್ತಾರೆ ಖರೀದಿದಾರರಾದ ಅಫ್ರೋಜ್ ಹಾಗೂ ವಾಸೀಂ.

‘ದೊಡ್ಡಬ್ಬಿಗೆರೆ ಗ್ರಾಮದ ಸುತ್ತಮುತ್ತ ತೋತಾಪುರಿ ಬೆಳೆಯಲಾಗುತ್ತಿದೆ. ಈಗಾಗಲೇ ಶೇ 75ರಷ್ಟು ಫಸಲನ್ನು ರೈತರು ಮಾರಾಟ ಮಾಡಿದ್ದಾರೆ. ಆರಂಭದಲ್ಲಿ ಪ್ರತಿ ಕೆ.ಜಿ.ಗೆ ₹ 100 ಬೆಲೆ ಇತ್ತು. ಈಗ ₹ 55ಕ್ಕೆ ಬಿಕರಿಯಾಗುತ್ತಿದೆ. ಮರದಲ್ಲಿ 2ನೇ ಬಾರಿ ತೋತಾಪುರಿ ಹೂವು ಅರಳಿ ಈಚು ಕಟ್ಟುತ್ತಿದ್ದು, ಬಿಸಿಲಿನ ತಾಪಕ್ಕೆ ಕಪ್ಪಾಗುತ್ತಿವೆ. ಮಳೆ ಬಂದರೆ ಮತ್ತೊಮ್ಮೆ ಉತ್ತಮ ಇಳುವರಿ ಸಿಗುವ ಸಾಧ್ಯತೆ ಇದೆ’ ಎನ್ನುತ್ತಾರೆ ದೊಡ್ಡಬ್ಬಿಗೆರೆ ಪ್ರಸನ್ನ.

ತೋತಾಪುರಿ ಮಾವು
ಸಂತೇಬೆನ್ನೂರು ಸಮೀಪದ ತೋಟದಲ್ಲಿನ ತೋತಾಪುರಿ ಫಸಲು (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.