ADVERTISEMENT

ಕುರ್ಕಿ ಸಮೀಪದ ರೈಲ್ವೆ ಕೆಳಸೇತುವೆಯಲ್ಲಿ ಮುಳುಗಿದ ಟ್ರ್ಯಾಕ್ಟರ್‌: 10 ಜನರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 19:04 IST
Last Updated 10 ಅಕ್ಟೋಬರ್ 2024, 19:04 IST
   

ದಾವಣಗೆರೆ: ಬಿರುಸಾಗಿ ಸುರಿದ ಮಳೆಯಿಂದ ತಾಲ್ಲೂಕಿನ ಕುರ್ಕಿ ಸಮೀಪದ ರೈಲ್ವೆ ಕೆಳಸೇತುವೆಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಟ್ರ್ಯಾಕ್ಟರ್‌ವೊಂದು ಮುಳುಗಿದ್ದು, ಅಪಾಯಕ್ಕೆ ಸಿಲುಕಿದ್ದ ಹತ್ತು ಜನರನ್ನು ಅಗ್ನಿಶಾಮಕ ಹಾಗೂ ತುರ್ತುಸೇವಾ ಇಲಾಖೆ ಸಿಬ್ಬಂದಿ ಗುರುವಾರ ರಾತ್ರಿ ರಕ್ಷಿಸಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಚಿಕ್ಕಗಂಗೂರು ಹಾಗೂ ಲಕ್ಷ್ಮಿಸಾಗರ ಗ್ರಾಮದ ಬಸವರಾಜ್‌, ಆದರ್ಶ್‌, ವೆಂಕಟೇಶ್‌, ಆನಂದ್‌, ಗೋವಿಂದಪ್ಪ, ರುದ್ರಪ್ಪ, ರಮೇಶ್‌, ಅಶೋಕ್‌, ರಾಕೇಶ್‌ ಹಾಗೂ ತೀರ್ಥಪ್ಪ ಅವರನ್ನು ರಕ್ಷಣೆ ಮಾಡಲಾಗಿದೆ. ಅಡಿಕೆ ತುಂಬಿದ ಟ್ರ್ಯಾಕ್ಟರ್‌ ಅನ್ನು ನೀರಿನಿಂದ ಹೊರತರಲಾಗಿದೆ.

ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗದಲ್ಲಿ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಕುರ್ಕಿ ಸಮೀಪ ನಡೆಯುತ್ತಿದೆ. ಕುರ್ಕಿ ಹಾಗೂ ಆನಗೋಡು ರಸ್ತೆಯಲ್ಲಿ ಸಂಚರಿಸುವ ವಾಹನಗಳು ಈ ಸೇತುವೆಯಲ್ಲಿ ಸಾಗುತ್ತವೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಕೆಳೆಸೇತುವೆಯಲ್ಲಿ ನೀರು ಸಂಗ್ರಹವಾಗಿತ್ತು. ಗುರುವಾರ ಸಂಜೆ ಸುರಿದ ಮಳೆಗೆ ನೀರಿನ ಮಟ್ಟ ಇನ್ನಷ್ಟು ಹೆಚ್ಚಾಗಿತ್ತು ಎಂದು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ADVERTISEMENT

ಹಸಿ ಅಡಿಕೆ ತುಂಬಿದ ಟ್ರ್ಯಾಕ್ಟರ್‌ ಆನಗೋಡಿನಿಂದ ಕುರ್ಕಿ ಮಾರ್ಗವಾಗಿ ಚಿಕ್ಕಗಂಗೂರಿಗೆ ತೆರಳುತ್ತಿತ್ತು. ರಾತ್ರಿ ನೀರಿನ ಮಟ್ಟ ಏರಿಕೆಯಾಗಿದ್ದನ್ನು ಗಮನಿಸದ ಚಾಲಕ ನೀರಿನಲ್ಲಿ ಟ್ರ್ಯಾಕ್ಟರ್‌ ಚಲಾಯಿಸಿದ್ದಾರೆ. ಎಂಜಿನ್‌ ಸ್ಥಗಿತಗೊಂಡು ಟ್ರ್ಯಾಕ್ಟರ್‌ ನಿಂತಿದೆ. ಮಳೆನೀರು ಹೆಚ್ಚುತ್ತಿದ್ದಂತೆ ಟ್ರ್ಯಾಕ್ಟರ್‌ನಲ್ಲಿದ್ದವರು ಅಪಾಯಕ್ಕೆ ಸಿಲುಕಿದ್ದರು ಎಂದು ವಿವರಿಸಿದ್ದಾರೆ.

ಇದನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ಮತ್ತು ತುರ್ತುಸೇವಾ ಠಾಣೆಗೆ ಮಾಹಿತಿ ನೀಡಿದ್ದಾರೆ. ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಂ.ಎನ್‌.ನಾಗೇಶ್‌, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್‌. ಅಶೋಕಕುಮಾರ್‌ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿಗಳಾದ ಭೀಮ್‌ರಾವ್‌ ಉಪ್ಪಾರ್, ಮಹಮ್ಮದ್ ರಫೀಕ್, ಟಿ.ಸಿ.ನಾಗರಾಜ್, ಗಂಗಾ ನಾಯ್ಕ, ನಯಾಜ್, ಧರಣೇಶ, ಪರಶುರಾಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.