ADVERTISEMENT

ದಾವಣಗೆರೆ: ಸಂಚಾರ ನಿಯಮ ಉಲ್ಲಂಘನೆ.. ದಾರಿಯುದ್ದಕ್ಕೂ ಕಿರಿಕಿರಿ...

ಸಿದ್ದಯ್ಯ ಹಿರೇಮಠ
Published 28 ಅಕ್ಟೋಬರ್ 2024, 5:33 IST
Last Updated 28 ಅಕ್ಟೋಬರ್ 2024, 5:33 IST
<div class="paragraphs"><p>ದಾವಣಗೆರೆಯ ಪಿ.ಜೆ ಬಡಾವಣೆಯ ರಸ್ತೆಯಲ್ಲಿ ಆಟೊ ಚಾಲಕ ಹಾಗೂ ದ್ವಿಚಕ್ರ ವಾಹನ ಸವಾರರ ನಡುವೆ ಸಂಚಾರ ನಿಯಮ ಉಲ್ಲಂಘನೆ ಕುರಿತು ಜಗಳ ನಡೆದ ದೃಶ್ಯ </p></div>

ದಾವಣಗೆರೆಯ ಪಿ.ಜೆ ಬಡಾವಣೆಯ ರಸ್ತೆಯಲ್ಲಿ ಆಟೊ ಚಾಲಕ ಹಾಗೂ ದ್ವಿಚಕ್ರ ವಾಹನ ಸವಾರರ ನಡುವೆ ಸಂಚಾರ ನಿಯಮ ಉಲ್ಲಂಘನೆ ಕುರಿತು ಜಗಳ ನಡೆದ ದೃಶ್ಯ

   

–ಪ್ರಜಾವಾಣಿ ಚಿತ್ರ

ದಾವಣಗೆರೆ: ನಗರದಾದ್ಯಂತ ಸಂಚರಿಸುವ ಬೈಕ್‌, ಆಟೊ ರಿಕ್ಷಾ, ಕಾರ್‌ ಮತ್ತಿತರ ವಾಹನಗಳ ಅನೇಕ ಸವಾರರು ಸಂಚಾರ ನಿಯಮ ಉಲ್ಲಂಘಿಸುವುದಲ್ಲದೇ, ಇತರರ ಸಂಚಾರಕ್ಕೂ ಅಡ್ಡಿಪಡಿಸುತ್ತಿರುವ ಪ್ರಕರಣಗಳು ನಿತ್ಯವೂ ನಡೆಯುತ್ತಿವೆ.

ADVERTISEMENT

ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುತ್ತ ಸಂಚಾರ ನಿಯಮ ಗಾಳಿಗೆ ತೂರುವ, ಎದುರುಗಡೆ ಬರುವ, ಮುಂದೆ ಹೋಗುತ್ತಿರುವ, ಅಕ್ಕಪಕ್ಕದಲ್ಲಿ ಸಾಗುವ ವಾಹನಗಳ ಇತರ ಸವಾರರಿಗೆ ಕಿರಿಕಿರಿ ಉಂಟುಮಾಡುವ ಇಂಥ ಚಾಲಕರು, ತಮ್ಮ ದುರ್ವರ್ತನೆಯನ್ನು ಪ್ರಶ್ನಿಸಿದವರ ಮೇಲೇ ರೇಗಾಡುತ್ತ, ಮನಬಂದಂತೆ ಬೈದು, ಹಲ್ಲೆ ನಡೆಸಿ ಪರಾರಿಯಾಗುತ್ತಿರುವ ಪ್ರಕರಣಗಳೂ ದಿನನಿತ್ಯ ಕಂಡುಬರುತ್ತಿವೆ. ಇಂಥವರಲ್ಲಿ ಯುವಜನರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

ತಮ್ಮ ಬಗ್ಗೆ ಇಲ್ಲದಿದ್ದರೂ ಪರವಾಗಿಲ್ಲ ಕನಿಷ್ಠಪಕ್ಷ ಬೇರೆಯವರ ಜೀವದ ಬಗ್ಗೆ ಕಾಳಜಿಯನ್ನೂ ಹೊಂದಿರದೇ ಅತಿವೇಗದಿಂದ ವಾಹನ ಚಲಾಯಿಸುವ ಪಡ್ಡೆಗಳೇ ರಸ್ತೆಗಳಲ್ಲಿ ಇಂಥ ‘ಕಿರಿಕಿರಿ’ ಉಂಟು ಮಾಡುತ್ತಿರುವುದು ಕಂಡುಬರುತ್ತಿದೆ.

ಕಿರಿದಾದ ರಸ್ತೆಗಳಲ್ಲೂ ಅತಿಯಾದ ವೇಗ, ತಾಳ್ಮೆ ರಹಿತ ಚಾಲನೆ, ರಸ್ತೆ ಮೇಲೆ ಸಂಚರಿಸುವ ಇತರ ವಾಹನ ಸವಾರರು ಮತ್ತು ಪಾದಚಾರಿಗಳ ಬಗ್ಗೆ ಅಸಡ್ಡೆ ಹೊಂದಿರುವ ‘ಪುಂಡರ’ ಕಾಟ ವಿಪರೀತವಾಗುತ್ತಿದೆ. ನಗರದ ಪ್ರಮುಖ ರಸ್ತೆ, ವೃತ್ತ ಹಾಗೂ ಬಡಾವಣೆಗಳಲ್ಲಿ ಸಂಚಾರ ಠಾಣೆ ಪೊಲೀಸರೇ ಕಾಣದಿರುವುದರಿಂದ ಇಂಥ ಪುಂಡರಿಗೆ ಕುಮ್ಮಕ್ಕು ದೊರೆಯುತ್ತಿದೆ. ತಿಳಿಹೇಳಲು ಹೋಗುವ ಜನಸಾಮಾನ್ಯರ ಕಿವಿಮಾತಿಗೆ ಕ್ಯಾರೇ ಅನ್ನದ ಇಂಥ ಪೋಲಿಗಳ ಮೇಲೆ ನಿಗಾ ಇರಿಸುವ ಮೂಲಕ ಉಪದ್ರವ ನಿಗ್ರಹಿಸಬೇಕು ಎಂಬುದು ಸಾರ್ವಜನಿಕರ ಕೋರಿಕೆಯಾಗಿದೆ.

‘ಅನೇಕರು ಪ್ರಮುಖ ವೃತ್ತಗಳಲ್ಲಿ ಸಿಗ್ನಲ್‌ ಜಂಪ್‌ ಮಾಡುವ ಪ್ರಕರಣಗಳು ನಿತ್ಯವೂ ಕಣ್ಣೆದುರೇ ನಡೆಯುತ್ತವೆ. ಕೆಲವು ಆಟೊ, ಟಂಟಂ, ಟಾಟಾ ಏಸ್‌, ಓಮ್ನಿಗಳಲ್ಲಿ ಶಾಲೆಯ ಚಿಕ್ಕಪುಟ್ಟ ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುವ ಕೆಲವರೂ ಸಿಗ್ನಲ್‌ ಜಂಪ್‌ ಮಾಡುತ್ತಾರೆ. ಅಡ್ಡಾದಿಡ್ಡಿಯಾಗಿ, ವಿಪರೀತ ವೇಗದೊಂದಿಗೆ ಸಾಗುತ್ತಾರೆ. ಸ್ಥಳದಲ್ಲಿದ್ದ ಹಿರಿಯರು, ಮಕ್ಕಳ ಮೇಲೆ ಕಾಳಜಿ ಇರುವವರು ಈ ಬಗ್ಗೆ ಪ್ರಶ್ನಿಸಿದರೆ ಅಸಹ್ಯಕರವಾಗಿ ಸಂಜ್ಞೆ ಮಾಡುತ್ತಲೋ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಲೋ ಸಾಗಿಬಿಡುತ್ತಾರೆ. ಇಂಥವರಿಗೆ ಶಾಸ್ತಿ ಮಾಡುವ ಮೂಲಕ ಸನ್ನಡತೆಯ ಮಹತ್ವದ ಪಾಠ ಮಾಡುವ ಅಗತ್ಯವಿದೆ’ ಎಂದು ಸ್ವತಃ ಇಂಥ ಪುಂಡರಿಂದ ನಿಂದನೆಗೆ ಒಳಗಾಗಿರುವ ಶಿವಕುಮಾರಸ್ವಾಮಿ ಬಡಾವಣೆಯ ನಿವಾಸಿ ಎಚ್.ಪಿ. ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ಇಕ್ಕಟ್ಟಾದ ರಸ್ತೆಗಳಲ್ಲಿ ಸಂಚಾರ ನಿಯಮಗಳ ಅರಿವೇ ಇಲ್ಲದಂತೆ ಓಡಾಡುವ ಕೆಲವರು ಅಡ್ಡಾದಿಡ್ಡಿ ವಾಹನ ಚಲಾಯಿಸಿ, ಸಂಚಾರ ವ್ಯವಸ್ಥೆಯನ್ನೇ ಹಾಳುಗೆಡವಿ ಇತರರ ಸಮಯವನ್ನೂ ವ್ಯರ್ಥಗೊಳಿಸುತ್ತಾರೆ. ಈ ಬಗ್ಗೆ ಕೇಳಿದರೆ ರಸ್ತೆಯೇ ತಮ್ಮದೇನೋ ಎಂಬಂತೆ ವರ್ತಿಸುವ ಮೂಲಕ ಕೇಳಿದವರ ಮೇಲೆ ರೇಗುತ್ತಾರೆ’ ಎಂದೂ ಅವರು ಹೇಳಿದರು.

ನಂಬರ್ ಪ್ಲೇಟ್‌ ಇಲ್ಲದ ಸವಾರಿ:

ಅಡ್ಡಾದಿಡ್ಡಿ ವಾಹನ ಚಲಾಯಿಸುವವರು ತಮ್ಮ ದುರ್ನಡೆಯನ್ನು ಪ್ರಶ್ನಿಸಿದವರನ್ನೇ ತರಾಟೆಗೆ ತೆಗೆದುಕೊಂಡು ಹಲ್ಲೆ ನಡೆಸುವಂಥ ದೃಶ್ಯಗಳು ಆಗಾಗ ಕಣ್ಣಿಗೆ ಬೀಳುತ್ತವೆ. ಎರಡು ವಾಹನಗಳ ಸವಾರರು ‘ನಾವು ಬರುವುದು ನಿನ್ನ ಕಣ್ಣಿಗೆ ಕಾಣಿಸುವುದಿಲ್ಲವೇ?, ಕಣ್ಣಲ್ಲಿ ಮಣ್ಣು ತುಂಬಿಕೊಂಡಿದ್ದೀಯಾ? ನಿನಗೆ ಲೈಸನ್ಸ್‌ ಕೊಟ್ಟೋರು ಯಾರು?’ ಎಂದೆಲ್ಲ ಬೈದಾಡಿಕೊಳ್ಳುತ್ತ ಜಗಳವಾಡುವ ದೃಶ್ಯಗಳು ನಿತ್ಯವೂ ಕಾಣಸಿಗುತ್ತವೆ.

ಬೇರೆ ಊರುಗಳಿಂದ ಬರುವ ಅತಿಥಿಗಳು, ಪ್ರವಾಸಿಗರಲ್ಲಿ ಇಂಥ ದೃಶ್ಯಗಳು ಸೋಜಿಗ ಮೂಡಿಸುವುದಲ್ಲದೇ ನಗರ ನಿವಾಸಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಕಾರಣವಾಗಿದೆ. ಇಂಥ ದುರ್ನಡತೆಗೆ ಕಡಿವಾಣ ಹಾಕುವ ಅಗತ್ಯವಿದೆ’ ಎಂದು ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಹೇಳಿದರು.

‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಡಿಐಜಿ ಅವರ ನಿವಾಸಗಳಿರುವ ವಿದ್ಯಾನಗರದಲ್ಲಿ ಅನೇಕ ಯುವಕರು ನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ಗಳನ್ನು ಅಡ್ಡಾದಿಡ್ಡಿ, ವೇಗದಿಂದ ಓಡಿಸುತ್ತಾರೆ. ನಿಯಮ ಉಲ್ಲಂಘಿಸುವವರ ವಾಹನದ ನಂಬರ್‌ ಸಿ.ಸಿ. ಕ್ಯಾಮೆರಾದಲ್ಲಿ ದಾಖಲಾಗದಂತೆ ನೋಡಿಕೊಳ್ಳಲು ಈ ರೀತಿ ಮಾಡುತ್ತಾರೆ’ ಎಂದು ಅವರು ವಿವರಿಸಿದರು.

‘ರಸ್ತೆ ಬದಿಯಲ್ಲಿರುವ ಕೇಕ್‌ ಅಂಗಡಿಗಳೆದುರು, ಪಾನಿಪೂರಿ ಅಂಗಡಿಗಳೆದುರು ರಸ್ತೆ ಮೇಲೇ ಕಾರ್‌ ನಿಲ್ಲಿಸಿ ಖರೀದಿಗಾಗಿ ತೆರಳುವ ಅನೇಕರು ಇತರ ವಾಹನಗಳ ಸಂಚಾರಕ್ಕೂ ಅಡ್ಡಿಪಡಿಸುತ್ತಾರೆ. ಇಂಥವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದೆ, ಕಂಡೂ ಕಾಣದಂತೆ ಇರುವುದು ಏಕೆ? ಎಂಬುದು ಅರ್ಥವಾಗುತ್ತಿಲ್ಲ. ವೃದ್ಧರು, ಮಹಿಳೆಯರು, ಚಿಕ್ಕಮಕ್ಕಳು ರಸ್ತೆ ದಾಟಲೂ ಭಯಪಡುವಂತಾಗಿದೆ’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ಇಂಡಿಕೇಟರ್‌ ಬಳಸುವವರೇ ವಿರಳ!

ಕೆ ಲವು ಬೈಕ್‌ ಚಾಲಕರು ಇಂಡಿಕೇಟರ್‌ ಬಳಸದೆಯೇ ಇದ್ದಕ್ಕಿದ್ದಂತೆ ತಿರುವು ಪಡೆಯುವ ಕಾರಣಕ್ಕಾಗಿಯೇ ವಾಹನ ಸವಾರರ ನಡುವೆ ಜಗಳ ನಡೆಯುತ್ತವೆ. ಮುಂದೆ ಹೋಗುವವರು ಅಡ್ಡರಸ್ತೆ ಬಂದ ಕೂಡಲೇ ದಿಢೀರ್‌ ಎಂದು ವಾಹನ ತಿರುಗಿಸಿಬಿಡುತ್ತಾರೆ. ಇಂಡಿಕೇಟರ್‌ ಮೂಲಕ ಸೂಚನೆ ನೀಡುವುದಿಲ್ಲ. ಕೈ ತೋರಿಸಿಯೂ ಸಂಜ್ಞೆ ಮಾಡದ್ದರಿಂದ ಹಿಂದಿರುವ ವಾಹನ ಚಾಲಕರಿಗೆ ಸಮಸ್ಯೆ ಆಗುತ್ತದೆ.

‘ಇಂಡಿಕೇಟರ್‌ ಹಾಕಬಾರದೇ?’ ಎಂದು ಪ್ರಶ್ನಿಸಿದರೆ ‘ನಿನಗೆ ಕಣ್ಣು ಕಾಣುವುದಿಲ್ಲವೇ?’ ಎಂದು ಹಿರಯರು ಕಿರಿಯರು ಎನ್ನದೇ ಅಸಡ್ಡೆಯಿಂದ ಪ್ರಶ್ನಿಸುವವರಿಂದಾಗಿ ಜಗಳ ಶುರುವಾಗುತ್ತದೆ. ಒಮ್ಮೊಮ್ಮೆ ಇಂಥ ಜಗಳ ತಾರಕಕ್ಕೆ ಹೋಗಿ ಕೈಕೈ ಮಿಲಾಯಿಸುವ ಹಂತ ತಲುಪುತ್ತದೆ. ಆಗ ಎಚ್ಚರಿಕೆ ನೀಡಲು ಪೊಲೀಸ್‌ ಸಿಬ್ಬಂದಿ ಇರುವುದೇ ಇಲ್ಲ. ಇದೂ ಒಂದು ರೀತಿಯಲ್ಲಿ ಅಸಡ್ಡೆ ತೋರುವವರಿಗೆ ವರದಾನವಾಗಿದೆ ಎಂದು ಆರ್‌.ನೂರುಲ್ಲಾ ಎಂಬುವರು ಹೇಳಿದರು.

ಇತ್ತೀಚೆಗಷ್ಟೇ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಅಡ್ಡಾದಿಡ್ಡಿ ಬಂದ ಸ್ಕೂಟಿ ಸವಾರನನ್ನು ಪ್ರಶ್ನಿಸಿದ್ದಕ್ಕೆ ಹಿಗ್ಗಾಮುಗ್ಗಾ ಹೊಡೆಸಿಕೊಂಡ ಘಟನೆಯೂ ನಡೆದಿದೆ. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.