ದಾವಣಗೆರೆ: ನಗರದ ಪಿ.ಬಿ. ರಸ್ತೆಯಲ್ಲಿರುವ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಎದುರು ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಲ್ಲಿ ವಶಕ್ಕೆ ಪಡೆದ ವಾಹನಗಳ ದಟ್ಟಣೆಯಿಂದಾಗಿ ಅಪಘಾತಗಳು ಸಂಭವಿಸುತ್ತಿವೆ.
ಸಂಚಾರ ಪೊಲೀಸ್ ಠಾಣೆಯ ಎದುರೇ ನಿಯಮ ಉಲ್ಲಂಘನೆಯಾಗುತ್ತಿರುವುದು ಮಾತ್ರ ವಿಪರ್ಯಾಸ.
ಈ ಪೊಲೀಸ್ ಠಾಣೆಯ ಬಳಿ ತಹಶೀಲ್ದಾರ್ ಕಚೇರಿ, ಎಪಿಎಂಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಇದೆ. ಜತೆಗೆ ಇದು ಪಿ.ಬಿ. ರಸ್ತೆ. ಈ ಕಾರಣ ಇಲ್ಲಿ ವಾಹನಗಳ ದಟ್ಟಣೆ ಹೆಚ್ಚು.
ಇದರ ಜತೆಗೆ ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪಘಾತ ಪ್ರಕರಣಗಳಲ್ಲಿ ವಾಹನಗಳನ್ನು ವಶಕ್ಕೆ ಪಡೆಯುವ ಸಂಚಾರ ಪೊಲೀಸರು ವಾಹನಗಳನ್ನು ಠಾಣೆ ಎದುರು ನಿಲುಗಡೆ ಮಾಡುತ್ತಾರೆ. ಇದು ಸಮಸ್ಯೆ ಉಲ್ಬಣಗೊಳ್ಳಲು ಕಾರಣ.
ಈಚೆಗೆ ಮಧ್ಯರಾತ್ರಿ 2ರ ಸುಮಾರಿಗೆ ಕೆಎಸ್‌ಆರ್‌ಟಿಸಿ ಬಸ್‌ವೊಂದು ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪಾದಚಾರಿ ಮಾರ್ಗ ಏರಿ, ಠಾಣೆ ಎದುರಿನ ಧ್ವಜಸ್ತಂಬಕ್ಕೇ ಡಿಕ್ಕಿ ಹೊಡೆದಿತ್ತು! ಕಂಬ ಮುರಿದಿತ್ತು.
ಆ ಬಸ್‌ನಲ್ಲಿ ಹಲವು ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿರಲಿಲ್ಲ.
‘ರಾತ್ರಿಯಾದ ಕಾರಣ ಠಾಣೆ ಎದುರು ನಿಲ್ಲಿಸಿದ್ದ ಲಾರಿ ಸ್ಪಷ್ಟವಾಗಿ ಕಾಣಿಸಲಿಲ್ಲ. ಗಂಭೀರ ಅಪಘಾತ ತಪ್ಪಿಸಲು ಬಸ್ ಅನ್ನು ಎಡಕ್ಕೆ ತಿರುಗಿಸಿದ ಕಾರಣ ಬಸ್ ಧ್ವಜಸ್ತಂಭಕ್ಕೆ ಡಿಕ್ಕಿ ಹೊಡೆದಿತ್ತು’ ಎಂದು ಚಾಲಕ ಹೇಳಿದ್ದರು.
ರಸ್ತೆ ಬದಿ ವಾಹನ ನಿಲ್ಲಿಸುವುದರಿಂದ ರಾತ್ರಿ ವೇಳೆ ಅಪಘಾತಗಳು ಸಂಭವಿಸುವುದು ಹೆಚ್ಚು. ನಗರದ ಹಲವೆಡೆ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದು ಸಾಮಾನ್ಯ ಎಂಬಂತಾಗಿದೆ. ಪಿ.ಬಿ.ರಸ್ತೆಯ ಎಲ್ಲೆಡೆ ಇದು ಮಾಮೂಲು. ಇದೇ ರಸ್ತೆಯ ಉಗ್ರಾಣ ನಿಗಮದ ಎದುರೂ ಲಾರಿಗಳು ಸಾಲುಗಟ್ಟಿ ನಿಂತಿರುತ್ತವೆ.
ಸಂಚಾರ ಠಾಣೆಯಿಂದ ವಶಕ್ಕೆ ಪಡೆಯಲಾದ ಬಸ್‌ಗಳನ್ನು ಠಾಣೆಯಿಂದ ಪಿ.ಬಿ. ರಸ್ತೆಯವರೆಗೂ ನಿಲುಗಡೆ ಮಾಡುವುದರಿಂದ ಸಮಸ್ಯೆ ಹೆಚ್ಚಿದೆ. ವಾಹನಗಳನ್ನು ಬೇರೆಡೆ ನಿಲುಗಡೆ ಮಾಡಿದರೆ ಅನುಕೂಲವಾಗಲಿದೆ. ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸಿದರೆ ಅನಾಹುತ ತಡೆಯಬಹುದು ಎಂಬುದು ಸಾರ್ವಜನಿಕರ ಒತ್ತಾಯ.
‘ಪಿ.ಬಿ. ರಸ್ತೆಯಲ್ಲಿ ಸಂಚಾರ ಪೊಲೀಸ್ ಠಾಣೆ ನಿರ್ಮಿಸಿರುವುದು ಅನುಕೂಲ. ಆದರೆ ಠಾಣೆ ಚಿಕ್ಕದಾಗಿರುವುದರಿಂದ ಅಲ್ಲಿ ಠಾಣೆ ಇರುವುದೇ ತಿಳಿಯುವುದಿಲ್ಲ. ನಿಯಮ ಉಲ್ಲಂಘನೆಯ ಪ್ರಕರಣಗಳಲ್ಲಿ ವಶಕ್ಕೆ ಪಡೆದ ವಾಹನಗಳನ್ನು ಬೇರೆಡೆ ನಿಲುಗಡೆ ಮಾಡಬೇಕು’ ಎಂದು ಒತ್ತಾಯಿಸುತ್ತಾರೆ ಸ್ಥಳೀಯರಾದ ಪ್ರದೀಪ್‌ಕುಮಾರ್ ಕೆ.
‘ಇಲ್ಲಿನ ಪಿ.ಬಿ. ರಸ್ತೆಯ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಎದುರು ಆಗಾಗ ಲಾರಿ ಬಸ್ ಸೇರಿದಂತೆ ಇನ್ನಿತರ ವಾಹನಗಳು ಅಪಘಾತಕ್ಕೀಡಾಗುತ್ತವೆ. ಅಪಘಾತ ಪ್ರಕರಣಗಳಲ್ಲಿ ವಶಕ್ಕೆ ಪಡೆದ ವಾಹನಗಳನ್ನು ಪ್ರಕರಣ ಮುಗಿಯುವವರೆಗೂ ಠಾಣೆ ಎದುರೇ ನಿಲ್ಲಿಸಲಾಗುತ್ತಿದೆ. ಇಲ್ಲಿ ವಾಹನ ದಟ್ಟಣೆ ಹೆಚ್ಚು. ವಶಕ್ಕೆ ಪಡೆದ ವಾಹನಗಳನ್ನು ನಗರದ ಬೇರೆಡೆ ಸ್ಥಳಾಂತರಿಸಬೇಕು. ಅಂತಹ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಆವರಗೆರೆ ವಾಸು ಒತ್ತಾಯಿಸಿದರು. ‘ನಿಲುಗಡೆಗೆ ಪರ್ಯಾಯ ಸ್ಥಳ ಕಲ್ಪಿಸಿದರೆ ಅಪಘಾತಗಳ ತಡೆಗೆ ಕಡಿವಾಣ ಹಾಕಬಹುದು. ಠಾಣೆಯನ್ನೂ ಸುಸಜ್ಜಿತವಾಗಿ ನಿರ್ಮಿಸಿದರೆ ಎಲ್ಲರಿಗೂ ಅನುಕೂಲ’ ಎಂದು ಅವರು ಹೇಳಿದರು.
‘ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಶಕ್ಕೆ ಪಡೆದ ವಾಹನಗಳನ್ನು ಠಾಣೆ ಎದುರು ಹಾಗೂ ಕಾಂಪೌಂಡ್ ಒಳಗೆ ನಿಲ್ಲಿಸುತ್ತಿದ್ದೇವೆ. ಸ್ಥಳಾವಕಾಶದ ಕೊರತೆ ಕಾರಣ ಸಮಸ್ಯೆ ಇದೆ. ಠಾಣೆಯ ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಿಸಿ ಸೆಲ್ಲರ್ ಹಾಗೂ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ಕಲ್ಪಿಸುವಂತೆ 5 ವರ್ಷಗಳ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ದಕ್ಷಿಣ ಸಂಚಾರ ಠಾಣೆಯ ಪಿಎಸ್‌ಐ ಶೈಲಜಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಾಗದ ಕೊರತೆಯಿಂದಲೂ ಪ್ರಸ್ತಾವ ನನೆಗುದಿಗೆ ಬಿದ್ದಿದೆ. ನಿಯಮ ಉಲ್ಲಂಘನೆ ಹಾಗೂ ಅಪಘಾತ ಪ್ರಕರಣಗಳಲ್ಲಿ ವಶಕ್ಕೆ ಪಡೆದ ವಾಹನಗಳನ್ನು ತಕ್ಷಣ ಬಿಡುಗಡೆಗೊಳಿಸಲು ಕ್ರಮ ವಹಿಸಲಾಗಿದೆ. ಎದುರುಗಡೆ ಬಸ್ ನಿಲ್ದಾಣ ಇರುವ ಕಾರಣ ಕೆಲ ವಾಹನ ಸವಾರರು ಠಾಣೆ ಎದುರೇ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಅವರಿಗೆ ಹೇಳಿ ಸಾಕಾಗಿದೆ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.
ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಲ್ಲಿ ವಶಕ್ಕೆ ಪಡೆದ ವಾಹನಗಳನ್ನು ಪೊಲೀಸ್ ಠಾಣೆ ಎದುರು ನಿಲ್ಲಿಸುವಂತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಹಳೆ ಪ್ರಕರಣಗಳನ್ನೂ ಶೀಘ್ರ ವಿಲೇವಾರಿ ಮಾಡುವಂತೆ ಸಲಹೆ ನೀಡಿದ್ದೇನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು. ‘ದಕ್ಷಿಣ ಸಂಚಾರ ಪೊಲೀಸ್ ಠಾಣೆಯನ್ನು ಸುಸಜ್ಜಿತ ಕಟ್ಟಡದಲ್ಲಿ ನಿರ್ಮಿಸುವ ಹಾಗೂ ಸೆಲ್ಲರ್ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ. ಅನುದಾನ ಬಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.