ದಾವಣಗೆರೆ: ನಗರ ಸೇರಿದಂತೆ ಜಿಲ್ಲೆಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ನಿತ್ಯವೂ ನಡೆಯುತ್ತಲೇ ಇದೆ.
ಸಂಚಾರ ಠಾಣೆ ಪೊಲೀಸರು ತಪಾಸಣೆ ನಡೆಸುವ ನಿಗದಿತ ಜಾಗಗಳಲ್ಲಿ ಮಾತ್ರ, ನಿಯಮ ಪಾಲಿಸುವವರಂತೆ ಬಿಂಬಿಸಿಕೊಳ್ಳುವ ಎಷ್ಟೋ ಸವಾರರು, ಅಲ್ಲಿಂದ ನಾಲ್ಕು ಹೆಜ್ಜೆ ಮುಂದೆ ಬರುತ್ತಿದ್ದಂತೆಯೇ ಮತ್ತೆ ನಿಯಮಗಳನ್ನು ಗಾಳಿಗೆ ತೂರುವುದು ಮುಂದುವರಿದಿದೆ.
ಒಂಟಿ ಕೈಯಲ್ಲಿ ಬೈಕ್ ಚಲಾಯಿಸುವುದು, ರೆಡ್ ಸಿಗ್ನಲ್ ಇದ್ದರೂ ರಾಜಾರೋಷವಾಗಿ ನುಗ್ಗುವುದು, ವಾಹನ ಚಲಾಯಿಸುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತ ಸಾಗುವುದು, ಫುಟ್‌ಪಾತ್‌ಗಳಲ್ಲಿ ವಾಹನ ನುಗ್ಗಿಸುವುದು ಎಗ್ಗಿಲ್ಲದೆ ಸಾಗಿದೆ. ನಿಯಮ ಉಲ್ಲಂಘಿಸುವ ಸವಾರರು ತಮ್ಮ ಜೊತೆಗೆ ರಸ್ತೆಯಲ್ಲಿ ಸಾಗುತ್ತಿರುವ ಇತರರ ಜೀವವನ್ನೂ ಪಣಕ್ಕಿಡುತ್ತಾರೆ.
ಜನವರಿಯಿಂದ ಜುಲೈವರೆಗಿನ ಅವಧಿಯಲ್ಲಿ ಜಿಲ್ಲೆಯ ಜನರು ಸಂಚಾರ ನಿಯಮಗಳ ಉಲ್ಲಂಘನೆಗಾಗಿ ₹ 2.34 ಕೋಟಿ ದಂಡ ಪಾವತಿಸಿದ್ದಾರೆ. 47,743 ಪ್ರಕರಣಗಳು ದಾಖಲಾಗಿವೆ. ಪೊಲೀಸರಿಗೆ ಸಿಕ್ಕಿಹಾಕಿಕೊಂಡು ದಂಡ ಕಟ್ಟಿದರೂ ಮತ್ತದೇ ತಪ್ಪುಗಳು ಮರುಕಳಿಸುತ್ತಿವೆ.
ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವ ಪ್ರವೃತ್ತಿ ಬಹುತೇಕರಲ್ಲಿದೆ. ಇದಕ್ಕೆ ನಗರ, ಗ್ರಾಮೀಣ ಭಾಗ ಎಂಬ ಬೇಧವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಂತೂ ಹೆಲ್ಮೆಟ್ ಅಪರೂಪವೇ. ನಗರಕ್ಕೆ ಬರುವವರಿದ್ದರೆ ನಾಮಕಾವಸ್ತೆ ಎಂಬಂತೆ ಜೀವ ಉಳಿಸಲಾರದ, ಪ್ಲಾಸ್ಟಿಕ್ ತಂಬಿಗೆಯಂಥ ಹೆಲ್ಮೆಟ್ ಧರಿಸುತ್ತಾರೆಯೇ ವಿನಾ ಅದು ಪ್ರಾಣರಕ್ಷಕ ಎಂಬ ಅರಿವೂ ಬಹುತೇಕರಲ್ಲಿಲ್ಲ.
ನಗರ ಪ್ರದೇಶಗಳಲ್ಲಿ ಪೊಲೀಸರು ಸಾಮಾನ್ಯವಾಗಿ ನಿಗಾ ವಹಿಸುವ ವೃತ್ತಗಳನ್ನು ಹೊರತಪಡಿಸಿ ಬೇರೆ ಕಡೆಗಳಲ್ಲಿ ಹೆಲ್ಮೆಟ್ ರಹಿತ ಪ್ರಯಾಣ ಮುಂದುವರಿದಿದೆ. ಮುಖ್ಯರಸ್ತೆಯನ್ನು ಸಂಪರ್ಕಿಸುವ ಒಳಗಿನ ರಸ್ತೆಗಳು, ಅಡ್ಡರಸ್ತೆಗಳು, ಬಡಾವಣೆಗಳ ಒಳಗೆ ಸಣ್ಣಪುಟ್ಟ ಕೆಲಸಕ್ಕೆಂದು ಓಡಾಡುವ ಬಹುತೇಕರಿಗೆ ಹೆಲ್ಮೆಟ್ ಎಂಬ ಸಾಧನ ಒಂದಿದೆ ಎಂಬುದು ಗೊತ್ತೇ ಇಲ್ಲ ಎಂಬಂತಿದ್ದಾರೆ. ನಗರದ ಹೊರವಲಯಗಳಲ್ಲೂ ಇದು ಸಾಮಾನ್ಯವಾಗಿದೆ. ಈ ಬಗ್ಗೆ ಇಲಾಖೆಯಿಂದ ನಿರಂತರವಾಗಿ ಜಾಗೃತಿ ಮೂಡಿಸಿದರೂ ಫಲ ನೀಡುತ್ತಿಲ್ಲ ಎನ್ನುತ್ತಾರೆ ಪೊಲೀಸರು.
ಜಿಲ್ಲೆಯಲ್ಲಿ ಆರು ತಿಂಗಳಲ್ಲಿ ಸಂಚಾರ ಪೊಲೀಸರು ದಾಖಲಿಸಿರುವ ಪ್ರಕರಣಗಳಲ್ಲಿ ಶೇ 71.9ರಷ್ಟು ಪ್ರಕರಣಗಳು ಹೆಲ್ಮೆಟ್ ರಹಿತ ಪ್ರಯಾಣಕ್ಕೆ ಸಂಬಂಧಿಸಿವೆ ಎಂಬುದು ಗಮನಾರ್ಹ. 34,330 ಮಂದಿ ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಸಿಕ್ಕಿಬಿದ್ದಿದ್ದಾರೆ. ಹೆಲ್ಮೆಟ್ ವಿಚಾರದಲ್ಲಿ ಅವರಿಗಿರುವ ದಿವ್ಯ ನಿರ್ಲಕ್ಷ್ಯವನ್ನು ಇದು ಎತ್ತಿ ತೋರುತ್ತದೆ.
‘ನಿಗದಿತ ಪಥ ಬಿಟ್ಟು ಸಂಚರಿಸುವುದು, ರೆಡ್ ಸಿಗ್ನಲ್ ಅವಧಿ ಮುಗಿಯುವ ಮುನ್ನವೇ ನುಗ್ಗುವುದನ್ನು ನೋಡಿದರೆ, ಇವರೆಲ್ಲಾ ಯಾವಾಗ ಸರಿಹೋಗುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ’ ಎನ್ನುತ್ತಾರೆ ಅಮೆರಿಕದ ಜಾರ್ಜಿಯಾದಲ್ಲಿ ವಾಸವಾಗಿರುವ ದಾವಣಗೆರೆ ಮೂಲದ ಮೋಹನ್.
ಪೊಲೀಸರು ರೂಪಿಸುವ ನಿಯಮಗಳಲ್ಲೇ ವೈರುಧ್ಯಗಳಿವೆ ಎನ್ನುತ್ತಾರೆ ಆಟೊ ಚಾಲಕ ರಫೀಕ್. ‘ಪ್ರತಿ ಸೀಟಿಗಿಷ್ಟು ಅಂತ ಶುಲ್ಕ ಪಡೆಯುವ ಟಂಟಟಂಗಳಲ್ಲಿ ಎಷ್ಟು ಪ್ರಯಾಣಿಕರಾದರೂ ಸಂಚರಿಸಬಹುದು. ಚಾಲಕನ ಅಕ್ಕಪಕ್ಕದಲ್ಲೂ ಕುಳಿತುಕೊಳ್ಳಬಹುದು. ಆದರೆ, ಮೂವರನ್ನು ಮಾತ್ರ ಕರೆದೊಯ್ಯುವ ಸಾಮಾನ್ಯ ಆಟೊಗಳಲ್ಲಿ ಹೆಚ್ಚು ಜನರನ್ನು ಕೂರಿಸುವಂತಿಲ್ಲ ಎಂಬ ನಿರ್ಬಂಧಗಳಿವೆ. ಹೀಗೇಕೆ?’ ಎಂದು ಅವರು ಪ್ರಶ್ನಿಸುತ್ತಾರೆ.
ನಗರದ ಬಹುತೇಕ ಕಡೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ಇರಿಸಲು ಪೊಲೀಸರೇ ಇರುವುದಿಲ್ಲ. ಪೊಲೀಸರು ಇದ್ದರೆ ವಾಹನ ಸವಾರರು ನಿಯಮ ಉಲ್ಲಂಘಿಸುವ ‘ಧೈರ್ಯ’ ತೋರುವುದಿಲ್ಲ. ಅಥವಾ ಒಮ್ಮೆ ನಿಯಮ ಉಲ್ಲಂಘಿಸಿದವರು ಸಿಕ್ಕಿ ಹಾಕಿಕೊಮಡರೆ ಇನ್ನೊಮ್ಮೆ ಅಂಥ ದುಸ್ಸಾಹಸಕ್ಕೆ ಕೈಹಾಕುವುದಿಲ್ಲ ಆದರೆ ನಗರದಲ್ಲಿ ಬಹುತೇಕ ಕಡೆ ಸಂಚಾರ ಠಾಣೆ ಪೊಲೀಸರೇ ಇರುವುದಿಲ್ಲ ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ.
ದಾವಣಗೆರೆ ನಗರದ ಹಾಗೆಯೇ, ತಾಲ್ಲೂಕು ಕೇಂದ್ರಗಳಾದ ಜಗಳೂರು, ಹೊನ್ನಾಳಿ, ಚನ್ನಗಿರಿ ಪಟ್ಟಣಗಳಲ್ಲೂ ವಾಹನಗಳ ಸಂಖ್ಯೆ ಅಧಿಕವಿದೆ. ಆದರೆ ಈ ಪಟ್ಟಣಗಳಲ್ಲಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ರೂಪಿಸಿಲ್ಲ. ಹರಿಹರದ ಗಾಂಧಿ ವೃತ್ತದಲ್ಲಿರುವ ಸಿಗ್ನಲ್ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ವಿಚಾರ ಈಚೆಗೆ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಚರ್ಚೆಯಾಗಿತ್ತು. ‘ಸಿಗ್ನಲ್ ಅಳವಡಿಸಿದರೆ ಹೆಚ್ಚುತ್ತಿರುವ ದಟ್ಟಣೆ ನಿರ್ವಹಣೆ ಮಾಡಲು ಸಿದ್ಧರಿದ್ದೇವೆ, ಆದರೆ ಅನುದಾನದ ಕೊರತೆಯಿದೆ’ ಎಂದು ಪೊಲೀಸರು ಸಭೆಗೆ ಮಾಹಿತಿ ನೀಡಿದ್ದರು.
ವಾಹನಗಳ ದಟ್ಟಣೆ ನಿರ್ವಹಣೆ ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ದೈನಂದಿನ ತಪಾಸಣೆ, ನಿಗಾ, ಗಸ್ತು, ಜಾಗೃತಿ ಅಭಿಯಾನ, ದಟ್ಟಣೆ ನಿರ್ವಹಣೆ ತಂತ್ರಜ್ಞಾನ ಅಳವಡಿಕೆಯಂತಹ ಕ್ರಮಗಳನ್ನು ಕಾರ್ಯಗತಗೊಳಿಸಿದ್ದಾರೆ. ನಗರದ 23 ಕಡೆಗಳಲ್ಲಿ ನಿಗಾ ವ್ಯವಸ್ಥೆಯನ್ನು ರೂಪಿಸಲಾಗಿದೆ. ವಾಹನಗಳ ವೇಗದ ಮಿತಿಯನ್ನು ಗುರುತಿಸಿ, ಆನ್‌ಲೈನ್ ಮೂಲಕವೇ ವಾಹನ ಸವಾರರಿಗೆ ದಂಡದ ಚೀಟಿ ಕಳುಹಿಸುವ ವ್ಯವಸ್ಥೆ ರೂಪಿಸಲಾಗಿದೆ. ಕಟ್ಟುನಿಟ್ಟಿನ ಕಾನೂನು ಕ್ರಮಗಳ ಜತೆಗೆ ನಿಯಮ ಪಾಲನೆ ಬಗ್ಗೆ ಜನರಲ್ಲಿ ಸ್ವಯಂ ಪ್ರೇರಣೆ ಮೂಡಬೇಕು ಎನ್ನುತ್ತಾರೆ ಸಂಚಾರ ಪೊಲೀಸರು.
ಅಧಿಕ ದಂಡ ವಸೂಲಿ ಮಾಡಿದ ಪ್ರಕರಣಗಳು ಪ್ರಕರಣ;ದಂಡ (2024 ಜನವರಿ–2024 ಜುಲೈ) ಹೆಲ್ಮೆಟ್;34,330;₹1.4 ಕೋಟಿ ಮದ್ಯ ಸೇವಿಸಿ ಚಾಲನೆ;228;₹17.2 ಲಕ್ಷ ಲೇನ್ ಡಿಸಿಪ್ಲಿನ್;3,748;₹17 ಲಕ್ಷ ಸೀಟ್‌ಬೆಲ್ಟ್ ರಹಿತ ಪ್ರಯಾಣ;2,635;₹13 ಲಕ್ಷ ಟ್ರಿಪಲ್ ರೈಡಿಂಗ್;1,581;₹7.3 ಲಕ್ಷ ಅತಿವೇಗದ ಚಾಲನೆ;177;5.9 ಲಕ್ಷ ಹೈಬೀಮ್ ಲೈಟ್ ಬಳಕೆ;632;₹3.1 ಲಕ್ಷ
ಫುಟ್‌ಪಾತ್ ಒತ್ತುವರಿಯಿಂದಾಗಿ ಪಾದಚಾರಿಗಳು ಓಡಾಡಲು ರಸ್ತೆಗೆ ಇಳಿಯುತ್ತಾರೆ. ಹೀಗಾಗಿ ಅಪಘಾತ ಸಂಭವಿಸುವ ಹಾಗೂ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಹೆಚ್ಚು. ಪಾಲಿಕೆಯವರು ಒತ್ತುವರಿ ತೆರವು ಮಾಡಿದರೆ ವಾಹನ ದಟ್ಟಣೆ ನಿರ್ವಹಣೆ ಸುಲಭವಾಗಲಿದೆಉಮಾ ಪ್ರಶಾಂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.