ಭಾಯಾಗಡ್(ನ್ಯಾಮತಿ): ‘ಮುಂದಿನ ವರ್ಷದ ಸೇವಾಲಾಲ್ ಜಯಂತ್ಯುತ್ಸವ ವೇಳೆಗೆ ಭಾಯಾಗಡ್‌ಗೆ ರೈಲು ಸಂಚಾರ ಆರಂಭ ಮತ್ತು ಭಾಯಾಗಡ್ ರೈಲು ನಿಲ್ದಾಣ ಉದ್ಘಾಟನೆ ಮಾಡಲಾಗುವುದು’ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದರು.
ಬುಧವಾರ ನಡೆದ ಸಂತ ಸೇವಾಲಾಲ್ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಶಿವಮೊಗ್ಗ ಶಿಕಾರಿಪುರ ರೈಲು ಸಂಚಾರ ಮಾರ್ಗವನ್ನು ಸೂರಗೊಂಡನಕೊಪ್ಪ ಮಾರ್ಗವಾಗಿ ರಾಣೆಬೆನ್ನೂರಿಗೆ ಸಂಚರಿಸಲು ರೈಲು ಮಾರ್ಗಕ್ಕೆ ₹ 2 ಸಾವಿರ ಕೋಟಿ ಅನುದಾನದಲ್ಲಿ ರೈಲು ಮಾರ್ಗ ನಿರ್ಮಾಣವಾಗಲಿದೆ’ ಎಂದರು.
‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಸಂತ ಸೇವಾಲಾಲ್ ಕ್ಷೇತ್ರಕ್ಕೆ ₹ 40 ಕೋಟಿ ಅನುದಾನವನ್ನು ಪ್ರಥಮವಾಗಿ ನೀಡಿದರು. ನಂತರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಾ ಹೆಚ್ಚಿನ ಅನುದಾನ ನೀಡಿದರು. ವ್ಯಕ್ತಿಗಳು ಶಾಶ್ವತವಲ್ಲ ನಾವು ಏನು ಮಾಡಿದೆವು ಎಂಬುದು ಮುಖ್ಯ ಎಂಬುದಕ್ಕೆ ಸೇವಾಲಾಲ್ ಅವರ ಕ್ಷೇತ್ರವೇ ಸಾಕ್ಷಿ’ ಎಂದು ಹೇಳಿದರು.
‘ಸೇವಾಲಾಲ್ ಅವರ ಜನ್ಮಸ್ಥಾನಕ್ಕೆ ಪಕ್ಷಾತೀತವಾಗಿ ಎಲ್ಲರೂ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಈ ಕ್ಷೇತ್ರ ಅಯ್ಯಪ್ಪಸ್ವಾಮಿ, ಧರ್ಮಸ್ಥಳ ಪುಣ್ಯಕ್ಷೇತ್ರಗಳಂತೆ ಬೆಳೆಯಬೇಕಿದೆ. ಸಂತ ಸೇವಾಲಾಲ್ ದೇವಸ್ಥಾನಕ್ಕೆ ಮಾಲಾಧಾರಿಗಳು ಬರಿಗಾಲಿನಲ್ಲಿ, ಮುಡಿ ಕಟ್ಟಿಕೊಂಡು ಬರುತ್ತಿರುವ ಯುವ ಸಮುದಾಯವನ್ನು ಕಂಡು ಸಂತಸವಾಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.