ADVERTISEMENT

ಗುಂಡಿಗಳ ರಸ್ತೆಯಲ್ಲಿ ಸಂಚಾರ ಸಂಕಟ; ತಪ್ಪದ ಪರದಾಟ

ಕ್ಯಾಸಿನಕೆರೆ-ನಲ್ಲೂರು ಮಾರ್ಗದಲ್ಲಿ ಪ್ರಯಾಣಿಕರ ಪ‍್ರಯಾಸ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 6:22 IST
Last Updated 5 ನವೆಂಬರ್ 2024, 6:22 IST
ಸಾಸ್ವೆಹಳ್ಳಿ ಸಮೀಪದ ಕ್ಯಾಸಿನಕೆರೆಯ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಮಳೆ ನೀರು ನಿಂತಿರುವುದು
ಸಾಸ್ವೆಹಳ್ಳಿ ಸಮೀಪದ ಕ್ಯಾಸಿನಕೆರೆಯ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಮಳೆ ನೀರು ನಿಂತಿರುವುದು   

ಸಾಸ್ವೆಹಳ್ಳಿ: ಸಮೀಪದ ಕ್ಯಾಸಿನಕೆರೆ–ನಲ್ಲೂರು ಮಾರ್ಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.

ಹೋಬಳಿ ವ್ಯಾಪ್ತಿಯ ಕುಳಗಟ್ಟೆ, ಕ್ಯಾಸಿನಕೆರೆ, ಚೀಲಾಪುರ, ತ್ಯಾಗದಕಟ್ಟೆ ಹಾಗೂ ಚನ್ನಗಿರಿ ತಾಲ್ಲೂಕಿನ ಹಾಲೇಶಪುರ, ಗುಡ್ಡದ ಕೋಮಾರನಹಳ್ಳಿ, ಮಲ್ಲಿಗೇನಹಳ್ಳಿ ಮೂಲಕ ನಲ್ಲೂರು ಸಂಪರ್ಕಿಸುವ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚು. ರಸ್ತೆಯಲ್ಲಿ ಗುಂಡಿ ಬಿದ್ದ ಕಾರಣ ಸಂಚರಿಸಲು ಪರದಾಟ ಅನಿವಾರ್ಯ ಎಂಬುದು ವಾಹನ ಸವಾರರ ಅಳಲು.

ಹೊನ್ನಾಳಿ ಮತ್ತು ಚನ್ನಗಿರಿ ಸಂಪರ್ಕಿಸುವ ಪ್ರಮುಖ ರಸ್ತೆ ಇದು. ಸಾಸ್ವೆಹಳ್ಳಿಯಿಂದ ಚನ್ನಗಿರಿ, ಸಂತೇಬೆನ್ನೂರು, ದಾವಣಗೆರೆ ಭಾಗದ ಗ್ರಾಮಗಳಿಗೆ ಈ ರಸ್ತೆಯ ಮೂಲಕವೇ ಸಂಚರಿಸಬೇಕು. ರಸ್ತೆಯ ತುಂಬಾ ಗುಂಡಿಗಳು ಬಿದ್ದಿರುವುದರಿಂದ ಊರಿಗೆ ಹೊಸದಾಗಿ ಬರುವವರು ರಸ್ತೆಯಲ್ಲಿ ಕೆರೆ ನಿರ್ಮಿಸಿದ್ದಾರೆ ಅಂದುಕೊಳ್ಳುವಂತಿದೆ ರಸ್ತೆಯ ಸ್ಥಿತಿ ಎಂದು ಬೇಸರಿಸಿದರು ಕ್ಯಾಸಿನಕೆರೆ ಗ್ರಾಮದ ನಿವಾಸಿ ಬಸವರಾಜ್.

ಮಳೆ ಬಂದರೆ ಗುಂಡಿಗಳಲ್ಲಿ ನೀರು ನಿಂತು ಕೆರೆಯಂತಾಗುತ್ತದೆ. ದ್ವಿಚಕ್ರವಾಹನ ಸವಾರರು ಸ್ವಲ್ಪ ಆಯ ತಪ್ಪಿದರೆ ಬೀಳುವುದು ಖಚಿತ. ಗುಂಡಿಗಳಲ್ಲಿ ಹಲವು ವಾಹನ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳು ಇವೆ. ಆದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

‘ರಸ್ತೆ ಹದಗೆಟ್ಟಿದ್ದರಿಂದ ಬೇರೆ ಮಾರ್ಗದ ಮೂಲಕ ಸಂಚರಿಸುತ್ತಿದ್ದೇವೆ. ಇದರಿಂದ ಪೆಟ್ರೋಲ್‌, ಡೀಸೆಲ್‌ಗೆ ಹೆಚ್ಚುವರಿ ಹಣ, ಸಮಯ ಎರಡೂ ವ್ಯರ್ಥವಾಗುತ್ತಿದೆ. ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಬೈರನಹಳ್ಳಿಯ ಪರಮೇಶ್ ಹೇಳಿದರು.

ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಗುತ್ತಿಗೆದಾರ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಅವರನ್ನು ಸಂಪರ್ಕಿಸಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು
ಡಿ.ಜಿ. ಶಾಂತನಗೌಡ ಶಾಸಕ ಹೊನ್ನಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT