ADVERTISEMENT

ತುಂಗಭದ್ರಾ ನದಿ ಪ್ರವಾಹ ಇಳಿಕೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 5:40 IST
Last Updated 11 ಆಗಸ್ಟ್ 2022, 5:40 IST
ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ಹರಿಹರ ತಾಲ್ಲೂಕಿನ ಸಾರಥಿ-ಚಿಕ್ಕಬಿದರಿ ಗ್ರಾಮಗಳ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ಹರಿಹರ ತಾಲ್ಲೂಕಿನ ಸಾರಥಿ-ಚಿಕ್ಕಬಿದರಿ ಗ್ರಾಮಗಳ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ.   

ಹರಿಹರ: ತುಂಗಭದ್ರಾ ನದಿಯಲ್ಲಿ ಬುಧವಾರ ನೀರಿನ ಹರಿವು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಜನರ ಪರದಾಟ ತಪ್ಪಿಲ್ಲ.

ನದಿ ಹಿನ್ನೀರಿನಿಂದಾಗಿ ಗಂಗಾನಗರದ ಅಂದಾಜು 20 ಕುಟುಂಬಗಳು ಮನೆ ತೊರೆದಿವೆ. ಸಾರಥಿ-ಚಿಕ್ಕಬಿದರಿ ಗ್ರಾಮಗಳ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಾವಿರಾರು ಎಕರೆ ಜಮೀನಿನ ಬೆಳೆ ಜಲಾವೃತವಾಗಿವೆ.

ನದಿ ಹಿನ್ನೀರಿನಿಂದಾಗಿ ಸಾರಥಿ ಗ್ರಾಮದ ಸ್ಮಶಾನ ಸಂಪೂರ್ಣ ಜಲಾವೃತವಾಗಿದೆ. ಅಂತ್ಯಸಂಸ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಸಾರಥಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೀಟೂರು ಗ್ರಾಮದ ಬಳಿ ಹರಪನಹಳ್ಳಿ ಹೆದ್ದಾರಿ ಕಡೆ ಸಾಗುವ ರಸ್ತೆಯ ಸಮೀಪದವರೆಗೆ ನದಿ ಹಿನ್ನೀರು ಬಂದಿದೆ. ನದಿಯಲ್ಲಿ ನೀರಿನ ಹರಿವು ಮತ್ತಷ್ಟು ಏರಿಕೆಯಾದರೆ ಈ ರಸ್ತೆಯೂ ಜಲಾವೃತವಾಗುವ ಆತಂಕ ಎದುರಾಗಿದೆ.

ADVERTISEMENT

ಮಂಗಳವಾರ 11.600 ಮೀ. ವರೆಗೂ ಏರಿದ್ದ ನದಿ ನೀರಿನ ಪ್ರಮಾಣ ಬುಧವಾರ 10.400 ಮೀ.ಗೆ ಇಳಿಕೆಯಾಗಿತ್ತು. ಇದರಿಂದ ಜನರ ಆತಂಕ ಅಲ್ಪ ಮಟ್ಟಿಗೆ
ಕಡಿಮೆಯಾಗಿದೆ.

ಜಿಟಿ, ಜಿಟಿ ಮಳೆಯಿಂದಾಗಿ ತಾಲ್ಲೂಕಿನ ಬೆಳ್ಳೂಡಿ ಹಾಗೂ ಎಳೆಹೊಳೆಯಲ್ಲಿ ತಲಾ ಒಂದು ಪಕ್ಕಾ ಮನೆಗೆ ಹಾನಿಯಾಗಿದೆ. ನಾಗೇನಹಳ್ಳಿ, ಮಲೇಬೆನ್ನೂರಿನಲ್ಲಿ ತಲಾ ಒಂದು ಮನೆಗೆ ಭಾಗಶಃ ಹಾನಿಯಾಗಿದ್ದು, ಒಟ್ಟು ₹ 5.10 ಲಕ್ಷ ನಷ್ಟವಾಗಿದೆ.

ಹರಿಹರದಲ್ಲಿ 5.4 ಮಿ.ಮೀ., ಮಲೇಬೆನ್ನೂರು 7.4 ಮಿ.ಮೀ., ಕೊಂಡಜ್ಜಿ 4.0 ಮಿ.ಮೀ., ಹೊಳೆಸಿರಿಗೆರೆಯಲ್ಲಿ 4.0 ಮಿ.ಮೀ., ಒಟ್ಟು 20.8, ಸರಾಸರಿ 5.20 ಮಿ.ಮೀ. ಮಳೆ ದಾಖಲಾಗಿದೆ.

ಐದಾರು ದಿನಗಳಿಂದ ಜಿಟಿ, ಜಿಟಿ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಜನರಿಗೆ ಜ್ವರ, ಶೀತ, ಕೆಮ್ಮಿನ ಬಾಧೆ ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.