ದಾವಣಗೆರೆ: ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು. ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ. ಕೂಡಲೇ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಜಿಲ್ಲಾ ಭೋವಿ ಸಮಾಜ ಒತ್ತಾಯಿಸಿದೆ.
ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಹಾಗೂ ಸಿದ್ಧರಾಮೇಶ್ವರ ಜಯಂತಿ ಸಂಬಂಧ ಸೋಮವಾರ ನಗರದ ರಂಗ ಮಹಲ್‌ನಲ್ಲಿ ನಡೆದ ಸಭೆಯಲ್ಲಿ ಸಮಾಜದ ಮುಖಂಡರು ಈ ಬಗ್ಗೆ ಒಮ್ಮತದ ತೀರ್ಮಾನ ಕೈಗೊಂಡರು.
ವರದಿಯನ್ನು ಶಿಫಾರಸು ಮಾಡುವ ಮುನ್ನ ಬಹಿರಂಗಗೊಳಿಸಬೇಕು. ಎಲ್ಲ ಸಮುದಾಯಗಳಿಗೂ ವರದಿಯ ಪ್ರತಿಯನ್ನು ನೀಡಬೇಕು ಎಂದು ಒತ್ತಾಯಿಸಲಾಯಿತು.
ಒಳಮೀಸಲಾತಿ ಸಂಬಂಧ ಸದಾಶಿವ ಆಯೋಗದ ವರದಿಯ ಅನುಷ್ಠಾನ ಮಾಡದಂತೆ ಒತ್ತಾಯಿಸಿ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಜನವರಿ 10ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಪಾಲ್ಗೊಳ್ಳಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
ಜನವರಿ 14ರಿಂದ ಫೆಬ್ರುವರಿ 14ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಿದ್ಧರಾಮೇಶ್ವರ ಜಯಂತಿ ಆಯೋಜಿಸಬೇಕು. ಸದಾಶಿವ ಆಯೋಗದ ವರದಿಯನ್ನುವಿರೋಧಿಸಲು ಜಯಂತಿಯನ್ನು ಶಕ್ತಿ ಪ್ರದರ್ಶನದ ವೇದಿಕೆಯಾಗಿಸಬೇಕು ಎಂದುಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಎಚ್. ಜಯಣ್ಣ ಹೇಳಿದರು.
‘ಆಯೋಗ ವರದಿ ಅಸಂವಿಧಾನಿಕ. ಅವೈಜ್ಞಾನಿಕ. ಮೀಸಲಾತಿಯನ್ನು ಬಳಸಿಕೊಂಡು ಯಾವ ಯಾವ ಸಮುದಾಯಗಳು ಎಷ್ಟು ಅಭಿವೃದ್ಧಿ ಆಗಿವೆ ಎಂಬುದರ ವರದಿ ನೀಡುವಂತೆ ಸರ್ಕಾರ ಸದಾಶಿವ ಆಯೋಗವನ್ನು ನೇಮಿಸಿತ್ತು. ಆದರೆ ಆಯೋಗ ಸರ್ಕಾರದ ಸೂಚನೆ ಮೀರಿ, ಜನಸಂಖ್ಯೆ ಆಧಾರಿತ ಮೀಸಲಾತಿ ನೀಡಿ ಎಂದು ಹೇಳಿದೆ. ವರದಿ ಜಾರಿಗೂ ಮುನ್ನ ಸೋರಿಕೆ ಆಗಬಾರದು. ಈಗಾಗಲೇ ವಿವಿಧ ಸಮುದಾಯಗಳು ಜನಸಂಖ್ಯೆ ಆಧಾರಿತ ಮೀಸಲಾತಿ ನೀಡಿ ಎಂದು ಸದಾಶಿವ ಆಯೋಗ ಹೇಳಿದ್ದು, ಜಾರಿಗೆ ಒತ್ತಾಯಿಸುತ್ತಿವೆ. ಹಾಗಾದರೆ ವರದಿ ಸೋರಿಕೆ ಆಗಿದೆ ಎಂದರ್ಥ. ಇದು ಖಂಡನೀಯ’ ಎಂದರು.
‘ವರದಿ ಸುಳ್ಳಿನಿಂದ ಕೂಡಿದೆ. ಇದನ್ನು ರದ್ದು ಮಾಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದರೆ ಹೊಸ ಆಯೋಗ ರಚಿಸಿ, ವರದಿ ನೀಡಲಿ’ ಎಂದು ಅವರು ಆಗ್ರಹಿಸಿದರು.
ಸಭೆಯಲ್ಲಿ ಸಮಾಜದ ಗೌರವಾಧ್ಯಕ್ಷ ಬಿ.ಟಿ. ಸಿದ್ದಪ್ಪ, ಉಪಾಧ್ಯಕ್ಷ ಡಿ. ಶ್ರೀನಿವಾಸ್, ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್, ಮುಖಂಡರಾದ ಆರ್. ಶ್ರೀನಿವಾಸ್, ವಿ. ಗೋಪಾಲ್, ಮಂಜಪ್ಪ, ಉಮಾದೇವಿ, ಎ.ಬಿ. ನಾಗರಾಜ್, ದೇವರಾಜ್, ವೀರಭದ್ರಪ್ಪ, ವಿಜಯಕುಮಾರ್ ಸೇರಿದಂತೆ ಪದಾಧಿಕಾರಿಗಳು ಸಮುದಾಯದ ಮುಖಂಡರು ಇದ್ದರು.
ವರದಿಪಾರದರ್ಶಕ ಆಗಿದ್ದರೆ ಜಾರಿ ಮಾಡಲಿ.ಕುರುಡಾಗಿ ಅಂಗೀಕರಿಸುವವುದು ಸರಿಯಲ್ಲ. ಸದಾಶಿವ ಆಯೋಗದ ವರದಿ ಬಿಡುಗಡೆ ಹಾಗೂ ಚರ್ಚೆಗೆ ಆಗ್ರಹಿಸಿ ಜ. 10ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
–ಎಚ್. ಜಯಣ್ಣ, ಅಧ್ಯಕ್ಷ, ಜಿಲ್ಲಾ ಭೋವಿ ಸಮಾಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.