ADVERTISEMENT

₹180 ಲಕ್ಷ ಕೋಟಿ ಸಾಲ ಮಾಡಿರುವ ಪ್ರಧಾನಿ ಅಕ್ಷಯ ಪಾತ್ರೆ ನೀಡಲು ಸಾಧ್ಯವೇ: ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 4:51 IST
Last Updated 29 ಏಪ್ರಿಲ್ 2024, 4:51 IST
ವಿ.ಎಸ್. ಉಗ್ರಪ್ಪ
ವಿ.ಎಸ್. ಉಗ್ರಪ್ಪ   

ದಾವಣಗೆರೆ: ‘₹180 ಲಕ್ಷ ಕೋಟಿ ಸಾಲ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಜನರಿಗೆ ಅಕ್ಷಯ ಪಾತ್ರೆ ನೀಡಲು ಸಾಧ್ಯವಿಲ್ಲ’ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿಯವರು ದೇಶದ ಆರ್ಥಿಕ ಪರಿಸ್ಥಿತಿಯನ್ನು ಹಾಳು ಮಾಡಿದ್ದಾರೆ. ಕಾಂಗ್ರೆಸ್ ಆಡಳಿತದ 50 ವರ್ಷಗಳಲ್ಲಿ ₹ 52 ಲಕ್ಷ ಕೋಟಿ ಸಾಲ ಇತ್ತು. ಈಗ ಇವರ ಆಡಳಿತದ ಅವಧಿಯಲ್ಲಿ ₹180 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮೋದಿ ಅಕ್ಷಯ ಪಾತ್ರೆ ನೀಡಿಲ್ಲ. ಬದಲಾಗಿ ಭಸ್ಮಾಸುರ ಪ್ರವೃತ್ತಿಯ ನಾಯಕ ಎಂದು ಟೀಕಿಸಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮೀಸಲಾತಿ ಕಡಿಮೆ ಮಾಡಿ ಶೇ 7.50ರಷ್ಟು ಇರುವ ಮೇಲ್ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ನೀಡಲು ಹೊರಟಿದೆ. ರಾಜ್ಯದಲ್ಲಿ ಒಬಿಸಿ ಮೀಸಲಾತಿ ನೀಡಿದವರು ಎಚ್.ಡಿ. ದೇವೇಗೌಡ ಅವರು, ಮುಂದಿನ ಜನ್ಮದಲ್ಲಿ ಮುಸ್ಲಿಮರಾಗಿ ಹುಟ್ಟಬೇಕು ಎಂದು ಹೇಳುತ್ತಿದ್ದ ಎಚ್.ಡಿ. ದೇವೇಗೌಡ ಅವರು ಬಿಜೆಪಿ ಜೊತೆ ಕೈಜೋಡಿಸಿರುವ ಅವರ ದ್ವಂದ್ವ ನಿಲುವು ಏನು ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಜಾತಿ ಆಧಾರಿತ ಮೀಸಲಾತಿ ನೀಡಿಲ್ಲ. ಬದಲಾಗಿ ವರ್ಗ ಆಧಾರಿತ ಮೀಸಲಾತಿ ನೀಡಿದೆ’ ಎಂದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ತಾಳಿಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರಿಗೆ ತಾಳಿಯ ಪಾವಿತ್ರ್ಯತೆ ಗೊತ್ತಿಲ್ಲ. ಪ್ರಧಾನಿ ಅವರು ಗೌರವಾನ್ವಿತ ರಾಜಕಾರಣಿ ಆಗಬೇಕು. ವಿನಾಕಾರಣ ಮಂಗಳಸೂತ್ರದ ಬಗ್ಗೆ ಮಾತನಾಡಿರುವುದಕ್ಕೆ ಮಹಿಳೆಯರ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಮೇಕೆದಾಟು, ಕಳಸಾಬಂಡೂರಿ ಯೋಜನೆಗಳಿಗೆ ಇದ್ದ ಅಡೆತಡೆ ನಿವಾರಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗಳಿಗೆ ₹5300 ಬಿಡುಗಡೆ ಮಾಡುತ್ತೇನೆ ಎಂದು ಹೇಳಿ ₹3 ಕೋಟಿಯನ್ನು ಬಿಡುಗಡೆ ಮಾಡಿಲ್ಲ. ಹಸಿವಿನ ಸೂಚ್ಯಂಕದಲ್ಲಿ ಭಾರತ ಈ 63ನೇ ಸ್ಥಾನದಲ್ಲಿ ಇತ್ತು. ಈಗ 107ನೇ ಸ್ಥಾನದಲ್ಲಿದೆ. ನರೇಂದ್ರ ಮೋದಿ ಸುಳ್ಳು ಹೇಳುವುದನ್ನು ಬಿಡಬೇಕು’ ಎಂದು ಟೀಕಿಸಿದರು.

‘ದಾವಣಗೆರೆ ಕ್ಷೇತ್ರದಲ್ಲಿ 10 ವರ್ಷಗಳಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಕೊಡುಗೆ ಶೂನ್ಯ. ಹೇಳಿಕೊಳ್ಳುವಂತಹ ದೊಡ್ಡ ಯೋಜನೆ ಮಾಡಿಲ್ಲ. ದೊಡ್ಡ ಕೈಗಾರಿಕೆ ತಂದಿಲ್ಲ’ ಎಂದು ಟೀಕಿಸಿದರು.

‘ನರೇಂದ್ರ ಮೋದಿ ಅವರು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರದ ವಿಷಯದಲ್ಲಿ ಧಾರಾಳತನ ತೋರಿಸಬೇಕಿತ್ತು. ಆದರೆ ₹3,454 ಕೋಟಿ ನೀಡುವ ಮೂಲಕ ಅನ್ಯಾಯ ಮಾಡಲಾಗಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ’ ಎಂದರು.

ನಾಯಕ ಸಮಾಜದ ಮುಖಂಡ ವೀರಣ್ಣ, ಆಸಗೋಡು ಜಯಸಿಂಹ, ದಿನೇಶ್ ಕೆ.ಶೆಟ್ಟಿ, ಹುಲ್ಮನಿ ಗಣೇಶ್, ಸೀಮೆಎಣ್ಣೆ ಮಲ್ಲೇಶ್, ಬಿಳಿಚೋಡು ಶಾಮರಾವ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.