ದಾವಣಗೆರೆ: ‘ಇಷ್ಟು ದಿನ ತಿಂದಿದ್ದು ಸಾಕ್ರಪ್ಪ.. ಇನ್ನಾದರೂ ಬಡವರ ಪರ ಕೆಲಸ ಮಾಡ್ರಪ್ಪ..’ ಎಂದು ವಸತಿ ಸಚಿವವಿ.ಸೋಮಣ್ಣಅವರು ತಾಲ್ಲೂಕು ಪಂಚಾಯಿತಿ ಇಒ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಿಗೆ ಮನವಿ ಮಾಡಿದರು.
ಶನಿವಾರ ಇಲ್ಲಿ ನಡೆದ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕು ಪಂಚಾಯಿತಿ ಇಒಗಳು ಜನರಿಗೆ ಮನೆ ನಿರ್ಮಿಸಿಕೊಡುವ ಕಡೆ ಹೆಚ್ಚು ಗಮನ ಹರಿಸಬೇಕು. ಬೇರೆಲ್ಲ ಯೋಜನೆಗಳಂತಲ್ಲ ಸೂರು ಕೊಡುವ ಯೋಜನೆ. ಮಳೆಗಾಲದಲ್ಲಿ ಜನರ ಶಾಪ ತಟ್ಟದಿರಲು ನೀವು ಮನೆ ನಿರ್ಮಿಸಿಕೊಡಬೇಕು’ ಎಂದು ಸೂಚಿಸಿದರು.
‘ಕೆಲವು ಕಡೆ ಮನೆ ಮಂಜೂರು ಮಾಡಲು ₹ 20 ಸಾವಿರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಇದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದಾಗ, ‘ತಿಂದಿದ್ದು ಸಾಕ್ರಪ್ಪ..’ ಎಂದು ಸಚಿವರು ಕೇಳಿಕೊಂಡರು.
‘ಕೊಳೆಗೇರಿಯಲ್ಲಿ ಮನೆ ನಿರ್ಮಾಣಕ್ಕೆ ಎಕ್ಸಿಕ್ಯುಟಿವ್ ಎಂಜಿನಿಯರ್ ಅವರೇ ತಕರಾರು ತೆಗೆಯುತ್ತಾರೆ’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದಾಗ, ಇಇ ಕಬಿನಿ ಗೌಡ ಅವರನ್ನು ಸಚಿವರು ಎದುರಿಗೆ ಕರೆಸಿಕೊಂಡರು. ‘ಮೈಸೂರಿಂದ ಇಲ್ಲಿಗೆ ವರ್ಗಾವಣೆ ಮಾಡಿದ್ರೂ ನಿಮ್ಮ ಹೊಟ್ಟೆ ಇಳಿದಿಲ್ಲ. ಇವರು ಮತ್ತು ಪದ್ಮನಾಭ ಎಂಬಿಬ್ಬರು ಅಧಿಕಾರಿಗಳೇ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ದೊಡ್ಡ ತಿಮಿಂಗಿಲಗಳು’ ಎಂದು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.