ಹೊನ್ನಾಳಿ: ಪಟ್ಟಣದ ದುರ್ಗಿಗುಡಿ ಬಡಾವಣೆಯಲ್ಲಿರುವ ಖಾಲಿ ನಿವೇಶನಗಳಲ್ಲಿ ಮುಳ್ಳುಕಂಟೆ, ಇತರೆ ಗಿಡಗಂಟಿಗಳು ಮನೆಯೆತ್ತರಕ್ಕೆ ಬೆಳೆದು ನಿಂತಿದ್ದು, ಹಂದಿಗಳ ವಾಸಸ್ಥಾನವಾಗಿವೆ.
ಈ ಹಿಂದೆ ಕೇವಲ ಒಂದು ವಾರ್ಡ್ ಆಗಿದ್ದ ದುರ್ಗಿಗುಡಿ ಬಡಾವಣೆ, ಈಗ ಮೂರು ವಾರ್ಡ್‍ಗಳಾಗಿ ವಿಂಗಡಣೆಯಾಗಿದ್ದು, ಇನ್ನೂ ಒಂದೆರಡು ವಾರ್ಡ್‍ಗಳಾಗಿ ವಿಂಗಡಣೆಯಾಗುವ ನಿರೀಕ್ಷೆ ಇದೆ. ವರ್ಷವೊಂದಕ್ಕೆ ನೂರಾರು ಮನೆಗಳು ಈ ಬಡಾವಣೆಗಳಲ್ಲಿ ತಲೆ ಎತ್ತಿ ನಿಲ್ಲುತ್ತಿವೆ. ಹೊಸದಾಗಿ ಭೂ ಪರಿವರ್ತನೆ ಮಾಡಿ ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ. ಆ ಖಾಲಿ ನಿವೇಶನಗಳು ನೈರ್ಮಲ್ಯರಹಿತ ತಾಣಗಳಾಗಿ ಮಾರ್ಪಾಡಾಗುತ್ತಿವೆ.
ದುರ್ಗಿಗುಡಿ ಭಾಗದಲ್ಲಿ ರಾತ್ರಿ ವೇಳೆ ನಾಯಿಗಳ ಕಾಟ ಹೆಚ್ಚಾಗಿದೆ. ದೂರದ ಮನೆಗಳವರು ಖಾಲಿ ನಿವೇಶನಗಳಲ್ಲಿ ಮುಸುರೆ ಪದಾರ್ಥಗಳನ್ನು ತಂದು ಹಾಕುತ್ತಿದ್ದು, ದುರ್ವಾಸನೆ ಬೀರುತ್ತದೆ. ಜತೆಗೆ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಇನ್ನೂ ಕೆಲವರು ಮೂತ್ರ ವಿಸರ್ಜನಿಗೆ ಈ ಗಿಡಗಂಟಿಗಳನ್ನೇ ಆಶ್ರಯಿಸಿದ್ದು ಸಮಸ್ಯೆಗೆ ಕಾರಣವಾಗಿದೆ.
‘ನಿವೇಶನ ಮಾಲೀಕರು ಕಂದಾಯ ಕಟ್ಟಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಆದರೆ, ಅವರು ತಮ್ಮ ನಿವೇಶನಗಳಲ್ಲಿ ಬೆಳೆದು ನಿಂತ ಗಿಡಗಂಟಿಗಳನ್ನು ತೆರವು ಮಾಡಿಸಬೇಕು ಎಂಬುದನ್ನು ಮರೆತಿದ್ದಾರೆ. ಪುರಸಭೆ ಮುಖ್ಯಾಧಿಕಾರಿಗಳು ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಎಚ್ಚರಿಕೆಯ ನೋಟಿಸ್ ಜಾರಿಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಯುವರಾಜ್ ಪಾಳೇದ್ ಒತ್ತಾಯಿಸಿದರು.
‘ಗಿಡಗಂಟಿ ತೆರವುಗೊಳಿಸುವುದರಿಂದ ಸೊಳ್ಳೆಗಳ ಕಾಟ ಕ್ಷೀಣವಾಗುತ್ತದೆ. ಹಂದಿಗಳ ವಾಸ ತಪ್ಪುತ್ತದೆ. ಮುಸುರೆ ಹಾಕುವವರು ಹಿಂದೆಮುಂದೆ ನೋಡುವಂತಾಗುತ್ತದೆ. ದುರ್ವಾಸನೆಯೂ ತಪ್ಪುತ್ತದೆ. ರೋಗ ರುಜಿನ ಕಡಿಮೆಯಾಗುತ್ತವೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳು ಗಮನಹರಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ನಿವೇಶನ ಮಾಲೀಕರು ಕನಿಷ್ಠ 3ರಿಂದ 6 ತಿಂಗಳ ಗಡುವಿನೊಳಗೆ ಗಿಡಗಂಟಿಗಳನ್ನು ತೆರವು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ನೋಟಿಸ್ ಜಾರಿ ಮಾಡಬೇಕಾಗುತ್ತದೆ. ಈಗ ಚುನಾವಣೆ ಒತ್ತಡ ಇರುವುದರಿಂದ ಮುಂದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಮುಖ್ಯಾಧಿಕಾರಿಗೆ ಹಾಗೂ ಆರೋಗ್ಯ ನಿರೀಕ್ಷಕರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತೇನೆ. ವಿ. ಅಭಿಷೇಕ್ ಪುರಸಭೆ ಆಡಳಿತಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.