ADVERTISEMENT

ದಾವಣಗೆರೆ | ಪಾಲಿಕೆ–ಸಾಕಾಣಿಕೆದಾರಲ್ಲಿ ಮೂಡದ ಒಮ್ಮತ

ಹಂದಿ ಪುನರ್ವಸತಿಗೆ ‘ವರಹಾ ಶಾಲೆ’ ಸಜ್ಜು, ಸ್ಥಳಾವಕಾಶ ಕೋರಿ ಸಲ್ಲಿಕೆಯಾಗದ ಅರ್ಜಿ

ಜಿ.ಬಿ.ನಾಗರಾಜ್
Published 24 ಜೂನ್ 2024, 5:55 IST
Last Updated 24 ಜೂನ್ 2024, 5:55 IST
ದಾವಣಗೆರೆಯ ಹೆಬ್ಬಾಳ ಬಳಿಯ ಹೊಸಹಳ್ಳಿ ಬಳಿ ನಿರ್ಮಿಸಿರುವ ವರಹಾ ಶಾಲೆ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಹೆಬ್ಬಾಳ ಬಳಿಯ ಹೊಸಹಳ್ಳಿ ಬಳಿ ನಿರ್ಮಿಸಿರುವ ವರಹಾ ಶಾಲೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ತಾಲ್ಲೂಕಿನ ಹೆಬ್ಬಾಳ ಸಮೀಪದ ಹೊಸಹಳ್ಳಿಯಲ್ಲಿ ಮಹಾನಗರ ಪಾಲಿಕೆ ನಿರ್ಮಿಸಿದ ‘ವರಹಾ ಶಾಲೆ’ಗೆ ಹಂದಿಗಳನ್ನು ಸ್ಥಳಾಂತರಿಸಲು ಸಾಕಾಣಿಕೆದಾರರು ಆಸಕ್ತಿ ತೋರದಿರುವುದು ಹೊಸ ಬಿಕ್ಕಟ್ಟು ಸೃಷ್ಟಿಸಿದೆ. ಸಾಕಾಣಿಕೆದಾರರ ಮನವೊಲಿಕೆಯ ಪ್ರಯತ್ನ ವಿಫಲವಾದರೆ ಹಂದಿಗಳ ಸಮೀಕ್ಷೆ ಕೈಗೊಂಡು ಎಚ್ಚರಿಕೆಯ ಹೆಜ್ಜೆ ಇಡಲು ಪಾಲಿಕೆ ಮುಂದಾಗಿದೆ.

‘ವರಹಾ ಶಾಲೆ’ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಹಂದಿಗಳನ್ನು ಸ್ಥಳಾಂತರಿಸಲು ಸಾಕಾಣಿಕೆರರಿಗೆ ಮಹಾನಗರ ಪಾಲಿಕೆ ಎರಡು ಬಾರಿ ಬಹಿರಂಗ ಸೂಚನೆ ನೀಡಿದೆ. ಪಾಲಿಕೆಯ ಈ ಪ್ರಯತ್ನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಶಾಲೆಯಲ್ಲಿ ಹಂದಿಗಳಿಗೆ ಸ್ಥಳಾವಕಾಶ ಕೋರಿ ಈವರೆಗೆ ಒಂದು ಅರ್ಜಿ ಕೂಡ ಸಲ್ಲಿಕೆಯಾಗಿಲ್ಲ.

ನಗರ ವ್ಯಾಪ್ತಿಯಲ್ಲಿ ಹಂದಿಗಳ ಹಾವಳಿಯನ್ನು ನಿಯಂತ್ರಿಸುವ ಉದ್ದೇಶದಿಂದ ಮಹಾನಗರ ಪಾಲಿಕೆ ಪುನರ್ವಸತಿ ಕೇಂದ್ರ ಸ್ಥಾಪಿಸಿದೆ. ಹೊಸಹಳ್ಳಿ ಬಳಿ ಮೂರು ಎಕರೆ ಪ್ರದೇಶದಲ್ಲಿ ಸುಮಾರು ₹ 1.3 ಕೋಟಿ ವೆಚ್ಚದಲ್ಲಿ ‘ವರಹಾ ಶಾಲೆ’ ನಿರ್ಮಿಸಿದೆ. ಸುತ್ತ ದೊಡ್ಡ ಕಾಂಪೌಂಡ್‌ ಕಟ್ಟಿ, ವಿದ್ಯುತ್‌ ಸೌಲಭ್ಯ, ಸಂಚಾರಕ್ಕೆ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲೆಗೆ ಹಂದಿಗಳನ್ನು ಸ್ಥಳಾಂತರಿಸುವಂತೆ ಮನವೊಲಿಸಲು ಸಾಕಾಣಿಕೆದಾರರೊಂದಿಗೆ ಪಾಲಿಕೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಹಂದಿ ಸ್ಥಳಾಂತರ ನಿರ್ಧಾರಕ್ಕೆ ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ.

ADVERTISEMENT

‘ಹಂದಿಗಳ ಹಾವಳಿ ನಿಯಂತ್ರಿಸಲು ಮಹಾನಗರ ಪಾಲಿಕೆ ಅನುದಾನ ಹೊಂದಿಸಿ ವರಹಾ ಶಾಲೆ ನಿರ್ಮಿಸಿದೆ. ಹಂದಿ ಸಾಕಾಣಿಕೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕುಳುವ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಇನ್ನಷ್ಟು ಸೌಲಭ್ಯ ಕಲ್ಪಿಸಲು ಪಾಲಿಕೆ ಸಿದ್ಧವಿದೆ. ಹಂದಿಗಳ ಸಂಖ್ಯೆಗೆ ಅನುಗುಣವಾಗಿ ಸಾಕಾಣಿಕೆದಾರರಿಗೆ ಶಾಲೆಯಲ್ಲಿ ಸ್ಥಳಾವಕಾಶ ಕಲ್ಪಿಸಲು ಎರಡು ಬಾರಿ ಬಹಿರಂಗ ಸೂಚನೆ ನೀಡಲಾಗಿದೆ. ಇದಕ್ಕೆ ಯಾರೊಬ್ಬರೂ ಸರಿಯಾಗಿ ಸ್ಪಂದಿಸಿಲ್ಲ’ ಎಂದು ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದಲ್ಲಿ ಬಿಸಾಡುವ ಹಸಿ ಕಸ ಹಂದಿಗಳ ಪ್ರಮುಖ ಆಹಾರ. ಹಾಸ್ಟೆಲ್, ಹೋಟೆಲ್‌, ಛತ್ರ, ಕಲ್ಯಾಣ ಮಂಪಟದಲ್ಲಿ ಸೃಷ್ಟಿಯಾಗುವ ಆಹಾರ ತ್ಯಾಜ್ಯವನ್ನು ಹಂದಿಗಳಿಗೆ ನೀಡಲಾಗುತ್ತದೆ. ‘ವರಹಾ ಶಾಲೆ’ಯಲ್ಲಿ ಹಂದಿಗಳಿಗೆ ಈ ಆಹಾರ ಸಿಗುತ್ತದೆಯೇ ಎಂಬ ಅನುಮಾನ ಸಾಕಾಣಿಕೆದಾರರಲ್ಲಿದೆ. ಮನೆ, ಹೋಟೆಲ್‌ಗಳಿಂದ ಸಂಗ್ರಹಿಸುವ ಆಹಾರ ತ್ಯಾಜ್ಯ ಮತ್ತು ಹಸಿ ಕಸವನ್ನು ಪುನರ್ವಸತಿ ಕೇಂದ್ರಕ್ಕೆ ತಲುಪಿಸುವುದಾಗಿ ಪಾಲಿಕೆ ಅಧಿಕಾರಿಗಳು ನೀಡುತ್ತಿರುವ ಭರವಸೆಯನ್ನು ಹಂದಿಗಳ ಮಾಲೀಕರು ನಂಬುತ್ತಿಲ್ಲ.

ಹಂದಿಗಳನ್ನು ಸ್ಥಳಾಂತರಿಸುವ ಮಹಾನಗರ ಪಾಲಿಕೆಯ ಪ್ರಯತ್ನವನ್ನು ಪ್ರಶ್ನಿಸಿ ಸಾಕಾಣಿಕೆದಾರರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಒತ್ತಾಯಪೂರ್ವ ಕ್ರಮದ ಬದಲಿಗೆ ಮನವೊಲಿಕೆ ಮಾಡುವಂತೆ ಹಾಗೂ ತರಬೇತಿ ನೀಡುವಂತೆ ನ್ಯಾಯಾಲಯ ಪಾಲಿಕೆಗೆ ಸೂಚನೆ ನೀಡಿದೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದು, ಮನವೊಲಿಕೆ ಪ್ರಯತ್ನ ವಿಫಲವಾದರೆ ಪಾಲಿಕೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

‘ವರಹಾ ಶಾಲೆ’ಗೆ ಹಂದಿಗಳನ್ನು ಸ್ಥಳಾಂತರಿಸಲು ಸಾಕಣೆದಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದೇವೆ. ವಾಹನ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ಬಲವಂತ ಮಾಡುವುದಿಲ್ಲ. -ರೇಣುಕಾ ಆಯುಕ್ತೆ ಮಹಾನಗರ ಪಾಲಿಕೆ

‘ಮೊದಲು ಮೂಲಸೌಲಭ್ಯ ಕಲ್ಪಿಸಿ’

ಹೆಬ್ಬಾಳ ಸಮೀಪ ನಿರ್ಮಿಸಿದ ‘ವರಾಹ ಶಾಲೆ’ಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿದರೆ ಮಾತ್ರ ಹಂದಿಗಳನ್ನು ಸ್ಥಳಾಂತರಿಸಲು ಆಲೋಚಿಸಲಾಗುವುದು. ಈ ಕುರಿತು ಹಲವು ಬಾರಿ ಪಾಲಿಕೆ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ಉಪಾಧ್ಯಕ್ಷ ಆನಂದಪ್ಪ ಅಸಮಾಧಾನ ವ್ಯಕ್ತಪಡಿಸಿದರು. ‘ದಾವಣಗೆರೆಯಲ್ಲಿ ಹಂದಿ ಸಾಕಾಣಿಕೆದಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮೂರು ಎಕರೆಯಲ್ಲಿ ನಿರ್ಮಿಸಿದ ಶಾಲೆ ಸಾಕಾಗದು ಎಂಬ ಆಕ್ಷೇಪವನ್ನು ಈ ಹಿಂದೆಯೇ ಸಲ್ಲಿಸಿದ್ದೇವೆ. ಕನಿಷ್ಠ 15ಎಕರೆಯಷ್ಟು ವಿಶಾಲ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುವಂತೆ ನೀಡಿದ ಸಲಹೆಯನ್ನು ಪಾಲಿಕೆ ಪರಿಗಣಿಸಿಲ್ಲ. ಗೋದಾಮು ಮಾದರಿಯ ವರಹಾ ಶಾಲೆಯಲ್ಲಿ ಹಂದಿ ಸಾಕುವುದು ಹೇಗೆ’ ಎಂದು ಅವರು ಪ್ರಶ್ನಿಸಿದರು. ‘ಹೋಟೆಲ್‌ ಹಾಸ್ಟೆಲ್‌ ಮುಸುರೆಯನ್ನು ನಿತ್ಯ ಹಂದಿಗಳಿಗೆ ನೀಡುತ್ತೇವೆ. ನಗರದಿಂದ ದೂರದಲ್ಲಿರುವ ವರಹಾ ಶಾಲೆಗೆ ನಿತ್ಯ ಆಹಾರ ಕೊಂಡೊಯ್ಯಲು ಕಷ್ಟವಾಗುತ್ತದೆ. ಸಾಕಾಣಿಕೆದಾರರು ತೆರಳಲು ಮಾರುಕಟ್ಟೆಗೆ ಬರುವುದು ಕೂಡ ಸುಲಭವಲ್ಲ. ವಾಹನ ರಸ್ತೆ ವಿದ್ಯುತ್ ಹಾಗೂ ವಸತಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಸಲ್ಲಿಸಿದ ಕೋರಿಕೆಗೆ ಪಾಲಿಕೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.