ADVERTISEMENT

ಮಿಟ್ಲಕಟ್ಟೆಯಲ್ಲಿ ವೀರಾಚಾರಿ ಅಂತ್ಯ ಸಂಸ್ಕಾರ

ಕಂಬನಿ ಮಿಡಿದ ಸಾವಿರಾರು ಜನ: ಬೇಡಿಕೆ ಈಡೇರಿಕೆಗೆ ರೈತ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 5:04 IST
Last Updated 22 ಸೆಪ್ಟೆಂಬರ್ 2022, 5:04 IST
ಹರಿಹರ ತಾಲ್ಲೂಕು ಮಿಟ್ಲಕಟ್ಟೆ ಗ್ರಾಮದ ರುದ್ರಭೂಮಿಯಲ್ಲಿ ಪರಿಸರ ಪ್ರೇಮಿ ವೀರಾಚಾರಿ ಅವರಿಗೆ ತಹಶೀಲ್ದಾರ್ ಡಾ.ಎಂ.ಬಿ.ಅಶ್ವತ್ಥ್ ಅಂತಿಮ ನಮನ ಸಲ್ಲಿಸಿದರು.
ಹರಿಹರ ತಾಲ್ಲೂಕು ಮಿಟ್ಲಕಟ್ಟೆ ಗ್ರಾಮದ ರುದ್ರಭೂಮಿಯಲ್ಲಿ ಪರಿಸರ ಪ್ರೇಮಿ ವೀರಾಚಾರಿ ಅವರಿಗೆ ತಹಶೀಲ್ದಾರ್ ಡಾ.ಎಂ.ಬಿ.ಅಶ್ವತ್ಥ್ ಅಂತಿಮ ನಮನ ಸಲ್ಲಿಸಿದರು.   

ಹರಿಹರ: ನ್ಯಾಯ ಬೆಲೆ ಅಂಗಡಿಯ ಅವ್ಯವಹಾರದ ವಿರುದ್ಧ ಧ್ವನಿ ಎತ್ತಿ ನ್ಯಾಯ ಸಿಗದೇ ಆತ್ಮಹತ್ಯೆಗೆ ಶರಣಾಗಿದ್ದ ಪರಿಸರ ಪ್ರೇಮಿ ಸಾಲುಮರದ ವೀರಾಚಾರಿಯವರ ಅಂತಿಮ ಸಂಸ್ಕಾರ ಬುಧವಾರ ಮಧ್ಯಾಹ್ನ ಅವರ ಸ್ವಗ್ರಾಮ ಮಿಟ್ಲಕಟ್ಟೆಯಲ್ಲಿ ನೆರೆವೇರಿಸಲಾಯಿತು.

ರಸ್ತೆ ತಡೆ: ವೀರಾಚಾರಿಯವರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ, ವೀರಾಚಾರಿ ಸ್ಮಾರಕ ನಿರ್ಮಿಸಬೇಕು, ಸರ್ಕಾರದಿಂದ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಡಳಿತ ಲಿಖಿತವಾಗಿ ಭರವಸೆ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘದ ಮುಖಂಡರಾದ ಬಲ್ಲೂರು ರವಿಕುಮಾರ್,ಹಾವೇರಿ ವೀರಣ್ಣ ಅವರ ನೇತೃತ್ವದಲ್ಲಿ ಗ್ರಾಮದ ದಾವಣಗೆರೆ-ಮಲೇಬೆನ್ನೂರು ರಸ್ತೆ ತಡೆ ನಡೆಸಲಾಯಿತು.

ಕೆ.ಆರ್.ಎಸ್‌ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಹಾಗೂ ಕಾರ್ಯಕರ್ತರು ಗ್ರಾಮಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

ADVERTISEMENT

‘ವೀರಾಚಾರಿಯವರ ಬಗ್ಗೆ ಸಮಗ್ರ ವರದಿಯನ್ನು ಜಿಲ್ಲಾಡಳಿತದಿಂದ ಕಳುಹಿಸಲಿದ್ದು, ಗ್ರಾಮದಲ್ಲಿ ಬೇರೆ ಸ್ಥಳ ಇಲ್ಲದೇ ಇರುವುದರಿಂದ ರುದ್ರಭೂಮಿಯಲ್ಲೇ ಗ್ರಾಮ ಪಂಚಾಯಿತಿಯಿಂದ ಸ್ಮಾರಕ ನಿರ್ಮಿಸಲು ಈಗಾಗಲೇ ಸೂಚಿಸಲಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬಹುದು, ಮೃತರ ಪತ್ನಿಗೆ ವಿಧವಾವೇತನಕ್ಕೆ ಆದೇಶ ನೀಡಲಾಗುತ್ತದೆ’ ಎಂದು ಗ್ರಾಮದಲ್ಲೆ ಇದ್ದ ತಹಶೀಲ್ದಾರ್ ಡಾ.ಎಂ.ಬಿ.ಅಶ್ವತ್ಥ್ ಅವರು ಭರವಸೆ ನೀಡಿದ ಬಳಿಕ ರಸ್ತೆ ತಡೆ ಸ್ಥಗಿತಗೊಳಿಸಲಾಯಿತು.

ಗ್ರಾಮಸ್ಥರು, ವೀರಾಚಾರಿಯವರ ಒಡನಾಡಿಗಳು, ಪರಿಸರ ಪ್ರೇಮಿಗಳು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಮೃತರ ಸ್ಮರಣಾರ್ಥ ರುದ್ರಭೂಮಿಯಲ್ಲಿ ತಹಶೀಲ್ದಾರ್ ಡಾ.ಎಂ.ಬಿ.ಅಶ್ವತ್ಥ್‌ ಹಾಗೂ ರೈತರು ನಾಲ್ಕು ಸಸಿಗಳನ್ನು ನೆಟ್ಟರು.

‘ಗ್ರಾಮ ಪಂಚಾಯಿತಿ ನಿರ್ವಹಣೆಯಲ್ಲಿರುವ ಸ್ಮಶಾನದಲ್ಲಿ 5 ಎಕರೆಯನ್ನು ಸ್ಮಾರಕ ನಿರ್ಮಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಾಲತೇಶ್ ಎನ್. ತಿಳಿಸಿದರು.

ಗ್ರಾಮದ ಎ.ಕೆ. ಕಾಲೊನಿಯಲ್ಲಿ ನಿವಾಸಿಗಳು ಶ್ರದ್ಧಾಂಜಲಿ ಅರ್ಪಿಸಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಾಲತೇಶ್ ಎನ್., ಡಿ.ಮಹೇಶ್ವರಪ್ಪ, ಗುಡ್ಡಪ್ಪ, ನೀಲಪ್ಪ, ಅಣ್ಣಪ್ಪ, ಸಂತೋಷ್, ಭೀಮಪ್ಪ ನುಡಿ ನಮನ ಸಲ್ಲಿಸಿದರು.

ಗ್ರಾಮಾಂತರ ಠಾಣೆ ಪಿಎಸ್‌ಐ ಅರವಿಂದ್, ಕಂದಾಯ ಅಧಿಕಾರಿ ಸಮೀರ್ ಅಹ್ಮದ್, ಆಹಾರ ಇಲಾಖೆ ಶಿರಸ್ತೆದಾರ್ ಯು.ರಮೇಶ್
ಇದ್ದರು.

ವೀರಾಚಾರಿ ಅವರು ಸಾರ್ವಜನಿಕರಿಗೋಸ್ಕರ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದರು. ದಾವಣಗೆರೆಯ ಯಾವುದಾದರೂ ಉದ್ಯಾನಕ್ಕೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಮನವಿ ಸಲ್ಲಿಸಲಾಗುವುದು.

–ಗಿರೀಶ್ ದೇವರಮನಿ, ಅಧ್ಯಕ್ಷ, ಪರಿಸರ ಸಂರಕ್ಷಣಾ ವೇದಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.