ಹರಿಹರ: ಅತಿಯಾದ ಮಳೆಯಿಂದಾಗಿ ಸೊಪ್ಪು, ತರಕಾರಿ ದರ ದುಪ್ಪಟ್ಟಾಗಿದ್ದು ಜನಸಾಮಾನ್ಯರು ಖರೀದಿಗೆ ಹಿಂದೇಟು ಹಾಕುವಂತಾಗಿದೆ.
ಪ್ರಸಕ್ತ ತಿಂಗಳ ಮೊದಲ ಮತ್ತು ಎರಡನೇ ವಾರದಲ್ಲಿ ಸುರಿದ ಚಿತ್ತಾ ಮಳೆ ನಾಡಿನ ಜಲಾಶಯ, ನದಿ, ಕೆರೆ, ಕಟ್ಟೆ, ಹಳ್ಳಗಳನ್ನು ತುಂಬಿಸಿದ ಖುಷಿ ನೀಡಿತ್ತು. ಭಾರಿ ಪ್ರಮಾಣದ ಬೆಳೆ ಹಾನಿಯೂ ಉಂಟಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಗೆ ರೈತರನ್ನು ನೂಕಿತ್ತು. ಮಳೆಯಿಂದಾಗಿ ಸೊಪ್ಪು, ವಿವಿಧ ತರಕಾರಿ ಬೆಳೆಗೂ ಸಾಕಷ್ಟು ಹಾನಿ ಉಂಟಾಗಿದೆ.
ಈ ಹಿಂದೆ ₹ 5ಕ್ಕೆ ಒಂದು ಸಿವುಡು (ಕಟ್ಟು) ಸಿಗುತ್ತಿದ್ದ ಸೊಪ್ಪಿನ ಬೆಲೆ ಈಗ ₹ 10 ರಿಂದ ₹ 15ಕ್ಕೆ ಏರಿದೆ. ಹೋಲ್‌ಸೇಲ್ ಬೆಲೆ 100 ಸಿವುಡಿಗೆ ₹ 800 ಆಗಿದೆ. ಕೊತ್ತಂಬರಿ, ಮೆಂತೆ, ರಾಜಗಿರಿ, ಎಳೆ ಅರಬಿ, ಪಾಲಕ್, ಸಬ್ಬಸಿಗೆ, ಪುದೀನ, ಬಸಳೆ ಹೀಗೆ ವಿವಿಧ ಬಗೆಯ ಸೊಪ್ಪುಗಳ ಬೆಲೆ ದುಪ್ಪಟ್ಟಾಗಿದೆ. ಸಸ್ಯಹಾರಿಗಳ ಜೊತೆಗೆ ಮಾಂಸಹಾರಿಗಳಿಗೂ ಅಡುಗೆಗೆ ಸೊಪ್ಪು ಬೇಕೇ ಬೇಕು.
ಇನ್ನು ಟೊಮೊಟೊ, ಆಲೂಗೆಡ್ಡೆ, ಬದನೆಕಾಯಿ, ಬೀನ್ಸ್, ಮುಳುಗಾಯಿ, ಕ್ಯಾರೆಟ್, ಹೂ ಕೂಸು, ಎಲೆ ಕೋಸು, ಸೋರೆಕಾಯಿ, ದೊಣ್ಣೆ ಮೆಣಸಿನಕಾಯಿ, ಗೆಡ್ಡೆ ಕೋಸು, ನವಿಲು ಕೋಸು, ಬೆಂಡೆ ಕಾಯಿ, ಈರುಳ್ಳಿ ಹೀಗೆ ವಿವಿಧ ತರಕಾರಿ ದರವೂ ಏರಿಕೆಯಾಗಿದೆ.
ಹೋಟೆಲ್‌ಗಳಲ್ಲಿ ಸೊಪ್ಪು, ತರಕಾರಿಯನ್ನು ಹೆಚ್ಚಾಗಿ ಬಳಸುವುದರಿಂದ ಮಾಲೀಕರಿಗೂ ಬೆಲೆ ಏರಿಕೆ ಬಿಸಿ ಮುಟ್ಟಿದೆ.
‘ದುಬಾರಿ ಬಾಡಿಗೆ, ಸಿಬ್ಬಂದಿ ವೇತನದ ಜತೆಗೆ ಸೊಪ್ಪು, ತರಕಾರಿ ದರ ಏರಿಕೆಯನ್ನೂ ಸಹಿಸಿಕೊಂಡು ವ್ಯಾಪಾರ ನಡೆಸಬೇಕಾದ ಸ್ಥಿತಿ ಎದುರಾಗಿದೆ’ ಎಂದು ಹೋಟೆಲ್ ಮಾಲೀಕ ಶಿವಣ್ಣ ತಿಳಿಸಿದರು.
ಗ್ರಾಹಕರಿಗೂ ಇದರ ಬಿಸಿ ತಟ್ಟಿದ್ದು, ಇದ್ದಷ್ಟು ಹಣದಲ್ಲೇ ಸೊಪ್ಪು, ತರಕಾರಿ ಖರೀದಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ನಾಲ್ಕು ಸಿವುಡು ಖರೀದಿಸುವವರು ಎರಡಕ್ಕೆ, ಅರ್ಧ ಕೆ.ಜಿ. ತರಕಾರಿ ಕೊಳ್ಳುವವರು ಕಾಲು ಕೆ.ಜಿ.ಗೆ ಸೀಮಿತರಾಗಿದ್ದಾರೆ. ಮುಂದೆ ದೀಪಾವಳಿ ಹಬ್ಬ ಇರುವುದರಿಂದ ದರ ಇನ್ನಷ್ಟು ಏರುವ ಸಾಧ್ಯತೆ ಇದೆ. ಹೀಗಾದರೆ ಹಬ್ಬ ಆಚರಿಸುವುದು ಹೇಗೆ ಎಂಬ ಚಿಂತೆಯೂ ಗ್ರಾಹಕರನ್ನು ಕಾಡುತ್ತಿದೆ.
‘ದರ ದುಪ್ಪಟ್ಟಾಗಿರುವುದರಿಂದ ಗ್ರಾಹಕರು ಸೊಪ್ಪು, ತರಕಾರಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಗ್ರಾಹಕರ ಜೊತೆ ವಾದ ಮಾಡಿ ಸಾಕಾಗುತ್ತಿದೆ. ನಾನೂ ಕೂಡ ಮುಂಚೆಗಿಂತ ಕಡಿಮೆ ಮಾಲು ತರಿಸಿದ್ದೇನೆ. ಗ್ರಾಹಕರ ನಿರಾಸಕ್ತಿಯಿಂದ ಕೆಲ ಸೊಪ್ಪು ಹಳದಿ ಬಣ್ಣಕ್ಕೆ ತಿರುಗಿ ನಷ್ಟವಾಗುತ್ತಿದೆ’ ಎಂದು ಸೊಪ್ಪಿನ ವ್ಯಾಪಾರಿ ಅಕ್ಕಮ್ಮ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.