ADVERTISEMENT

ದಾವಣಗೆರೆ: ಅರ್ಧ ಸೆಂಚುರಿ ಬೆಲೆ ದಾಟಿದ ಟೊಮೆಟೊ, ಕ್ಯಾರೆಟ್, ಬೀನ್ಸ್

ಮಳೆ ಸೃಷ್ಟಿಸಿದ ಅವಾಂತರದಿಂದ ಕೊಳ್ಳುವವರ ಕೈಗೆ ಬರೆ l ಕೃಷಿಕರಿಗೂ ಇಲ್ಲ ಲಾಭ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 4:55 IST
Last Updated 20 ನವೆಂಬರ್ 2021, 4:55 IST
ಕೆ.ಆರ್. ಮಾರುಕಟ್ಟೆ ತರಕಾರಿ ವ್ಯಾಪಾರ.
ಕೆ.ಆರ್. ಮಾರುಕಟ್ಟೆ ತರಕಾರಿ ವ್ಯಾಪಾರ.   

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿ ತರಕಾರಿ ಹಾಳಾಗಿದ್ದರಿಂದ ಟೊಮೆಟೊ, ಕ್ಯಾರೆಟ್, ಬೀನ್ಸ್, ಬೆಂಡೆಕಾಯಿ ದರಗಳು ₹ 50 ರೂಪಾಯಿ ದಾಟಿ ಹೋಗಿವೆ. ಗೌರಿ ಹುಣ್ಣಿಮೆಯ ಸಡಗರಕ್ಕೆ ಖರೀದಿ ಮಾಡಬೇಕಿದ್ದ ಗ್ರಾಹಕರಿಗೆ ಬರೆ ಬಿದ್ದಂತಾಗಿದೆ. ಅತ್ತ ರೈತರಲ್ಲೂ ತರಕಾರಿ ಇಲ್ಲದೇ ಅವರಿಗೂ ಈ ಬೆಲೆ ಏರಿಕೆಯ ಪ್ರಯೋಜನ ಸಿಗದಂತಾಗಿದೆ.

ಬೆಳೆ ಹಾನಿಯಿಂದಾಗಿ ತರಕಾರಿಗಳು ಮಾರುಕಟ್ಟೆಗೆ ಕಡಿಮೆ ಪೂರೈಕೆ ಆಗುತ್ತಿದೆ. ಇದರಿಂದ ಸಹಜವಾಗಿಯೇ ದರ ಏರಿಕೆ ಕಂಡಿದೆ. ಎರಡು ತಿಂಗಳ ಹಿಂದೆ ಟೊಮೆಟೊ ಕೆ.ಜಿ.ಗೆ ₹ 15ರಿಂದ ₹ 20ರ ವರೆಗೆ ಇತ್ತು. ಪ್ರಸ್ತುತ ₹ 50ರಿಂದ ₹ 60ರ ವರೆಗೆ ಮಾರಾಟವಾಗುತ್ತಿದೆ. ಅಧಿಕ ಬೆಲೆಯಿಂದ ಟೊಮೆಟೊ ಕೊಳ್ಳಲು ಹಿಂದೇಟು ಹಾಕುತ್ತಿರುವ ಗ್ರಾಹಕರು ಹುಣಸೆ ಹಣ್ಣು ಖರೀದಿಸಲು ಮುಂದಾಗುತ್ತಿದ್ದಾರೆ. ಕೆಲವರು ಮಾತ್ರ ವಿಧಿಯಿಲ್ಲದೆ ಇರುವಷ್ಟು ಬೆಲೆಯನ್ನು ಕೊಟ್ಟು ಖರೀದಿಸುತ್ತಿದ್ದಾರೆ. ಶುಂಠಿ ₹ 40, ಈರುಳ್ಳಿ ₹ 35, ಬೀನ್ಸ್ ₹ 60, ಕ್ಯಾರೆಟ್ ₹ 50, ಬದನೆಕಾಯಿ ₹ 30, ಬೆಂಡೆಕಾಯಿ ₹ 60ಕ್ಕೆ
ತಲುಪಿದೆ.

ಮೆಣಸಿನಕಾಯಿ ₹ 25 ಕ್ಕೆ ಮಾರಾಟವಾಗುತ್ತಿದೆ.‌ ಬೆಳ್ಳುಳ್ಳಿ ಕೆ.ಜಿ.ಗೆ ₹ 100ರ ಗಡಿ ತಲುಪಿದೆ.

ADVERTISEMENT

ಚಳಿಗಾಲದ ಫಸಲಾಗಿರುವ ನಿಂಬೆಯು ಮಾರುಕಟ್ಟೆಗೆ ಯಥೇಚ್ಛವಾಗಿ ಬರುತ್ತಿದ್ದು, ಈ ಕಾಲದಲ್ಲಿ ಬೇಡಿಕೆ ಕಡಿಮೆ ಇರುವ ಕಾರಣ ಸಹಜವಾಗಿಯೇ ಬೆಲೆ ಕೂಡ ತಗ್ಗಿದೆ. ನಿಂಬೆಯನ್ನು ಕೊಳ್ಳುವವರ ಸಂಖ್ಯೆಯೂ ವಿರಳವಾಗಿದೆ. ಚೀಲಕ್ಕೆ ₹ 1100ಕ್ಕೆ ಮಾರಿದರಷ್ಟೇ ಅಸಲು ಬರುತ್ತದೆ. ಆದರೆ ಬೇಡಿಕೆ ಇಲ್ಲದೇ ₹ 400ಕ್ಕೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.

ವಾಯುಭಾರ ಕುಸಿತದಿಂದ ಉಂಟಾದ ಮಳೆಯಿಂದ ಬೆಳೆಹಾನಿ ಸಂಭವಿಸಿದೆ. ಈ ಬಿಸಿ ಇತರ ರಾಜ್ಯಗಳಿಗೂ ಮುಟ್ಟಿರುವುದರಿಂದ ಹೊರ ರಾಜ್ಯಗಳಿಗೆ ತರಕಾರಿ ಕಳುಹಿಸಬೇಕಾಗುತ್ತದೆ. ಇದರಿಂದ ಸ್ಥಳೀಯ ಮಾರುಕಟ್ಟೆಗಳಿಗೆ ಪೂರೈಕೆ ಕಡಿಮೆಯಾಗಿದೆ. ಇದೇ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ತರಕಾರಿ ವ್ಯಾಪಾರಿ ಎಂ.ಆರ್. ಮೂರ್ತಿ ಅವರು ‘ಪ್ರಜಾವಾಣಿ’ಗೆ
ತಿಳಿಸಿದರು.
.....

ದುಬಾರಿ ಬೆಲೆಯನ್ನು ನೀಡಿ ಟೊಮೆಟೊ ಸಹಿತ ತರಕಾರಿ ಖರೀದಿ ಮಾಡಬೇಕಿದೆ. ಅಡುಗೆಗೆ ತರಕಾರಿ ಬೇಕೇಬೇಕರಿವುದರಿಂದ ಖರೀದಿ ಮಾಡದೇ ವಿಧಿಯಿಲ್ಲ.

-ನಳಿನಾ, ಗ್ರಾಹಕರು, ದಾವಣಗೆರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.