ADVERTISEMENT

ನ್ಯಾಮತಿಯಲ್ಲೂ ಕಂಪನ ಅನುಭವ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 1:11 IST
Last Updated 23 ಜನವರಿ 2021, 1:11 IST

ನ್ಯಾಮತಿ: ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ನ್ಯಾಮತಿ ತಾಲ್ಲೂಕಿನ ಸುತ್ತಮುತ್ತಲ ಕೆಲವು ಗ್ರಾಮಗಳ ಜನತೆಗೂ ಇದೇ ರೀತಿಯ ಅನುಭವವಾಗಿದೆ.

‘ಚೀಲೂರು ಗ್ರಾಮದಲ್ಲಿ ಸಣ್ಣದಾಗಿ ಶಬ್ದ ಕೆಲವರಿಗೆ ಕೇಳಿಸಿದೆ. ಗ್ರಾಮೀಣ ಪ್ರದೇಶ ಹಾಗೂ ಚಳಿಗಾಲ ಇರುವುದರಿಂದ ಜನರು ನಿದ್ರೆಗೆ ಜಾರಿದ್ದಾರೆ. ಎಚ್ಚರವಿದ್ದ ಕೆಲವರಿಗೆ ಶಬ್ದ ಕೇಳಿ ಬಂದಿದೆ’ ಎಂದು ಚೀಲೂರು ಆಶಾ ಕಾರ್ಯಕರ್ತೆ ಮಂಜಮ್ಮ ಅನುಭವ ಹಂಚಿಕೊಂಡರು.

ಸಾಮಾಜಿಕ ಕಾರ್ಯಕರ್ತ ಚೀಲೂರು ಪುರುವಂತರ ಪರಮೇಶ್ವರಪ್ಪ ಅವರು, ‘ರಾತ್ರಿ ಮನೆಯ ಮೇಲೆ ಏನು ಬಿದ್ದ ಅನುಭವವಾಯಿತು. ನಾವು ವಿದ್ಯುತ್ ಪರಿವರ್ತಕ ಶಬ್ದವಿರಬಹುದು ಎಂದು ಭಾವಿಸಿದ್ದೆವು. ಗ್ರಾಮದ ಸೇಂದಿ ರಾಜಪ್ಪ ಎಂಬುವರ ಮನೆಯ ಮುಚ್ಚಿದ ಕಿಟಕಿ ಬಾಗಿಲುಗಳು ಭೂಮಿ ಕಂಪನಕ್ಕೆ ಅಲುಗಾಡಿದವು’ ಎಂದುಮಾಹಿತಿ ನೀಡಿದರು.

ADVERTISEMENT

‘ರಾತ್ರಿ 10 ಗಂಟೆಯ ಸುಮಾರಿಗೆ ಇಲಾಖೆಗೆ ಸಂಬಂಧಿಸಿದ ವಸತಿಗೃಹದಲ್ಲಿ ಬರವಣಿಗೆಯಲ್ಲಿ ತೊಡಗಿದ್ದಾಗ, ಭೂಮಿ ಕಂಪಿಸಿದ ಅನುಭವ ಆಯಿತು. ಕಿಟಕಿ ಬಾಗಿಲುಗಳು ಅಲುಗಾಡಿ, ಕಿಟಕಿಗೆ ಹಾಕಿದ್ದ ಗಾಜುಗಳು ಒಡೆದವು’ ಎಂದು ಟಿ. ಗೋಪಗೊಂಡನಹಳ್ಳಿ ಕಿರಿಯ ಆರೋಗ್ಯ ಸಹಾಯಕಿ ಆಶಾ ಅನುಭವಹಂಚಿಕೊಂಡರು.

‘ಸೂರಗೊಂಡನಕೊಪ್ಪ, ಚಿನ್ನಿಕಟ್ಟೆ,ಹೊಸಜೋಗ ಮತ್ತು ಹಳೆಜೋಗ ಗ್ರಾಮಗಳಲ್ಲಿ ಭೂಕಂಪನ ಶಬ್ದ ಗ್ರಾಮಸ್ಥರ ಅನುಭವಕ್ಕೆ ಬಂದಿದ್ದು, ಸೂರಗೊಂಡನಕೊಪ್ಪ ಗ್ರಾಮದಲ್ಲಿ ನಿಲ್ಲಿಸಿದ್ದ ಕೆಲ ಆಟೊಗಳು ಕದಲಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ’ ಎಂದು ನ್ಯಾಮತಿ ತಾಲ್ಲೂಕು ಪಂಚಾಯಿತಿ ಪ್ರಾಜೆಕ್ಟ್ ಯೋಜನಾಧಿಕಾರಿ ಜಿ.ಬಿ. ವಿಜಯಕುಮಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.