ADVERTISEMENT

ಸಾಗರಪೇಟೆ–ಸಂಗಾಹಳ್ಳಿ ರಸ್ತೆ ದುರಸ್ತಿಗೆ ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 14:10 IST
Last Updated 24 ಅಕ್ಟೋಬರ್ 2024, 14:10 IST
ಬಸವಾಪಟ್ಟಣ ಸಮೀಪದ ಸಾಗರಪೇಟೆ ಸಂಗಾಹಳ್ಳಿಯ ರಸ್ತೆ ಹಾಳಾಗಿರುವುದು
ಬಸವಾಪಟ್ಟಣ ಸಮೀಪದ ಸಾಗರಪೇಟೆ ಸಂಗಾಹಳ್ಳಿಯ ರಸ್ತೆ ಹಾಳಾಗಿರುವುದು   

ಬಸವಾಪಟ್ಟಣ: ಸಮೀಪದ ಸಾಗರಪೇಟೆ ಸಂಗಾಹಳ್ಳಿಯ ಸುಮಾರು ಒಂದೂವರೆ ಕಿ.ಮೀ. ದೂರದ ರಸ್ತೆಯಲ್ಲಿ ನೂರಾರು ಗುಂಡಿಗಳು ಉಂಟಾಗಿದ್ದು ಜನ, ಜಾನುವಾರು ಮತ್ತು ವಾಹನ ಸಂಚಾರ ದುಸ್ತರವಾಗಿದೆ.

ಸಂಗಾಹಳ್ಳಿಯಿಂದ ಸಾಗರಪೇಟೆ ಮೂರು ಕಿ.ಮೀ. ದೂರವಿದ್ದು, ಮೂರು ವರ್ಷದ ಹಿಂದೆ ಸಂಗಾಹಳ್ಳಿಯಿಂದ ಒಂದು ಕಿ.ಮೀ.ವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಅದರ ಮುಂದಿನ ರಸ್ತೆ ಕಾಮಗಾರಿಯನ್ನು ವಿನಾಕಾರಣ ನಿಲ್ಲಿಸಲಾಗಿದೆ. ಈ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಿದ್ದು, ಪ್ರತಿನಿತ್ಯ ಈ ದಾರಿಯಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ರೈತರು, ಕೂಲಿಕಾರರು, ವ್ಯಾಪಾರಿಗಳು ಹಾಗೂ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದೆ. ಗುಂಡಿಗಳ ಕಾರಣ ನಿತ್ಯವೂ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಈ ಅವಧಿಯಲ್ಲಿ ಬಂದ ಎರಡು ಸಾರ್ವಜನಿಕ ಚುನಾವಣೆಗಳ ಸಮಯದಲ್ಲಿ ಜನಪ್ರತಿನಿಧಿಗಳು ಈ ರಸ್ತೆಯನ್ನು ಸರಿಪಡಿಸುವ ಆಶ್ವಾಸನೆ ನೀಡಿದ್ದಾರೆಯೇ ಹೊರತು ಕಾರ್ಯ ರೂಪಕ್ಕೆ ತಂದಿಲ್ಲ ಎಂದು ಸಂಗಾಹಳ್ಳಿಯ ಎಸ್‌.ಬಸವರಾಜಪ್ಪ ಹೇಳಿದರು.

ರಸ್ತೆ ದುರಸ್ತಿ ಕುರಿತು ಅನೇಕ ಸಲ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳು ರಸ್ತೆಯ ದುಃಸ್ಥಿತಿಯನ್ನು ನೋಡಿಕೊಂಡು ಹೋಗಿದ್ದು, ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕಾಗಿ ಮಂಜೂರಾತಿಗೆ ವರದಿ ಸಲ್ಲಿಸಲಾಗಿದೆ ಎಂದು ಸಮಜಾಯಿಷಿ ನೀಡುತ್ತಾ ಬಂದಿದ್ದಾರೆ. ಆದರೆ, ಕಾಮಗಾರಿ ಈವರೆಗೂ ಮಂಜೂರಾಗಿಲ್ಲ. ಈ ಮಳೆಗಾಲದಲ್ಲಿ ಇಲ್ಲಿ ಸಂಚಾರ ದುಸ್ತರವಾಗಿದೆ ಎಂದು ಗ್ರಾಮಸ್ಥರಾದ ಹಾಲೇಶಪ್ಪ, ಎಂ.ಬಸಪ್ಪ, ಕೆ.ಮಂಜಪ್ಪ ಅಳಲು ತೋಡಿಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.