ADVERTISEMENT

ಕೋಳಿಫಾರಂಗಳ ತ್ಯಾಜ್ಯದಿಂದ ಹೆಚ್ಚಿದ ಸಮಸ್ಯೆ: ನೊಣಗಳ ಕಾಟಕ್ಕೆ ಗ್ರಾಮಸ್ಥರು ಹೈರಾಣ

ಪ್ರಜಾವಾಣಿ ವಿಶೇಷ
Published 30 ಜುಲೈ 2023, 5:15 IST
Last Updated 30 ಜುಲೈ 2023, 5:15 IST
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಮನೆಯೊಂದರ ಅಡುಗೆ ಮನೆಯಲ್ಲಿ ನೊಣಗಳ ಹಾವಳಿ 
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಮನೆಯೊಂದರ ಅಡುಗೆ ಮನೆಯಲ್ಲಿ ನೊಣಗಳ ಹಾವಳಿ    

ದಾವಣಗೆರೆ: ತಾಲ್ಲೂಕಿನ ಹೆಬ್ಬಾಳು, ಆಲೂರಹಟ್ಟಿ, ಹುಣಸೆಕಟ್ಟೆ ಗ್ರಾಮಗಳಲ್ಲಿನ ಕೋಳಿಫಾರಂಗಳಿಂದ ನೊಣಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ನೊಣಗಳ ಕಾಟಕ್ಕೆ ಬೇಸತ್ತಿದ್ದಾರೆ.

ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ಹಳ್ಳಿಗಳಲ್ಲೂ ಈ ಸಮಸ್ಯೆ ಇದ್ದು, ಹೆಬ್ಬಾಳು, ಆಲೂರಹಟ್ಟಿ, ಮಂಡಲೂರು, ಹುಣಸೆಕಟ್ಟೆ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.

ಮನೆಯಲ್ಲಿ ಎಲ್ಲೆಂದರಲ್ಲಿ ನೊಣಗಳ ಹಾವಳಿ ಅಡುಗೆ ಮನೆಯ ತುಂಬೆಲ್ಲಾ ರಾಶಿ ರಾಶಿ ನೊಣಗಳು, ಆಹಾರ ಪದಾರ್ಥದ ಮೇಲೆಲ್ಲಾ ನೊಣಗಳ ಹಾವಳಿಯಿಂದ ಊಟ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ಗ್ರಾಮಸ್ಥರದ್ದು. ಎಲ್ಲಿ ನೋಡಿದರಲ್ಲಿ ನೊಣಗಳ ರಾಶಿಯಿಂದ ಮನೆಯಲ್ಲಿ ಇರಲು ಆಗದ ಸ್ಥಿತಿ ಇದೆ.

ADVERTISEMENT

ಕೋಳಿ ಫಾರಂಗಳ ತ್ಯಾಜ್ಯದಿಂದ ದುರ್ವಾಸನೆ ಹೆಚ್ಚಿದ್ದು, ಮನೆಯಲ್ಲಿ ಇರಲಿ ಆಗದ ಸ್ಥಿತಿ ಇದೆ. ಗ್ರಾಮದ ಮಧ್ಯದಲ್ಲೇ ಈ ಕೋಳಿಫಾರಂಗಳು ಇರುವ ಕಾರಣ ಸಮಸ್ಯೆ ಉಲ್ಬಣಿಸಿದೆ. ಗರ್ಭಿಣಿಯರು, ಬಾಣಂತಿಯರು, ವೃದ್ಧರು, ಮಕ್ಕಳು ನೊಣಗಳ ಹಾವಳಿಯಿಂದ ತೊಂದರೆ ಅನುಭವಿಸುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. 2015ರಿಂದಲೂ ಈ ಸಮಸ್ಯೆ ಇದ್ದು, ಹಲವು ಜಿಲ್ಲಾಧಿಕಾರಿಗಳು, ತಾಲ್ಲೂಕು ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಹೆಬ್ಬಾಳು ಗ್ರಾಮ ವ್ಯಾಪ್ತಿಯಲ್ಲಿ 7ಕ್ಕೂ ಹೆಚ್ಚು ಕೋಳಿಫಾರಂಗಳಿದ್ದು, ತ್ಯಾಜ್ಯದ ಸಮರ್ಪಕ ವಿಲೇವಾರಿ ಮಾಡದಿರುವುದು, ರಾಸಾಯನಿಕ ಸಿಂಪಡಿಸಿದ ಕಾರಣ ಸಮಸ್ಯೆಯಾಗಿದೆ ಎಂಬುದು ಗ್ರಾಮಸ್ಥರ ದೂರು.

ಈ ಬಗ್ಗೆ ಕೋಳಿಫಾರಂಗಳ ಮಾಲೀಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವೈಜ್ಞಾನಿಕವಾಗಿ ಕೋಳಿ ಫಾರಂಗಳನ್ನು ನಿರ್ವಹಣೆ ಮಾಡದ ಕಾರಣ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

‘2015ರಿಂದಲೂ ಲಿಖಿತ ಮನವಿ ಸಲ್ಲಿಸುತ್ತಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಹುಣಸೆಕಟ್ಟೆ ಗ್ರಾಮದಲ್ಲಿ ನೊಣಗಳ ಹಾವಳಿ ಉಲ್ಬಣಿಸಿದೆ. ಸಂಜೆಯಾದರೆ ದುರ್ವಾಸನೆ ಹೆಚ್ಚುತ್ತದೆ. ಈಗ ಮಳೆ ಸುರಿಯುತ್ತಿರುವುದರಿಂದ ದುರ್ವಾಸನೆಯಿಂದ ಮನೆಯಲ್ಲಿ ಇರಲು ಆಗುತ್ತಿಲ್ಲ‘ ಎಂದು ಹೆಬ್ಬಾಳು ಗ್ರಾಮದ ವಿಜಯಕುಮಾರ್‌ ಎಚ್‌.ಆರ್‌. ಅಳಲು ತೋಡಿಕೊಂಡರು.

‘ಮಳೆಗಾಲದಲ್ಲಿ ಸ್ವಲ್ಪ ಸಮಸ್ಯೆ ಇರುತ್ತದೆ. ಕೋಳಿ ಫಾರಂಗಳಲ್ಲಿ ತಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಆಗಾಗ ರಾಸಾಯನಿಕ ಸಿಂಪಡಿಸುತ್ತಿದ್ದೇವೆ. ನಮ್ಮ ಮನೆಯೂ ಫಾರಂ ಬಳಿಯೇ ಇದೆ. ಗ್ರಾಮದ ಹೊರವಲಯದಲ್ಲಿ ಕೋಳಿ ಫಾರಂ ಇರುವುದರಿಂದ ಹೆಚ್ಚು ಸಮಸ್ಯೆ ಆಗುತ್ತಿಲ್ಲ. ಆಗುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ವಿನಾಯಕ ಕೋಳಿ ಫಾರಂನ ಕೃಷ್ಣ ತಿಳಿಸಿದರು.

ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಮನೆಯೊಂದರಲ್ಲಿ ಪಾತ್ರೆಗಳ ಮೇಲೆ ನೊಣಗಳ ಹಾವಳಿ 
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಮನೆಯೊಂದರಲ್ಲಿ ಪಾತ್ರೆಗಳ ಮೇಲೆ ನೊಣಗಳ ಹಾವಳಿ 
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಕೋಳಿಫಾರಂನಲ್ಲಿ ತ್ಯಾಜ್ಯ ರಾಶಿ ಬಿದ್ದಿರುವುದು
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಮನೆಯೊಂದರಲ್ಲಿ ಪಾತ್ರೆಗಳ ಮೇಲೆ ನೊಣಗಳ ಹಾವಳಿ 
ನೊಣಗಳ ಕಾಟದಿಂದ ಬೇಸತ್ತು ಹೋಗಿದ್ದೇವೆ. ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು.
-ವಿಜಯಕುಮಾರ್‌ ಎಚ್‌.ಆರ್‌. ಗ್ರಾಮಸ್ಥ ಹೆಬ್ಬಾಳು
ಹೆಬ್ಬಾಳು ಗ್ರಾಮದಲ್ಲಿನ ನೊಣದ ಸಮಸ್ಯೆ ಗಮನಕ್ಕೆ ಬಂದಿದೆ. ಪ್ರತಿವರ್ಷ ಇದೇ ಸಮಸ್ಯೆ ಇದೆ. ಮಳೆಗಾಲವಾದ್ದರಿಂದ ಸಮಸ್ಯೆ ಹೆಚ್ಚಿದೆ. ಮಳೆ ಸ್ವಲ್ಪ ಬಿಡುವು ನೀಡಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಔಷಧ ಸಿಂಪಡಣೆ ಮಾಡಲಾಗುವುದು. 
- ಹಿಮವಂತರಾಜ್‌ ಪಿಡಿಒ
‘ಸಮಸ್ಯೆಗೆ ಪರಿಹಾರ ನೀಡಿದವರಿಗೆ ಬಹುಮಾನ’
‘ಹಲವು ವರ್ಷಗಳಿಂದ ನೊಣಗಳ ಹಾವಳಿಯಿಂದ ಬೇಸತ್ತಿದ್ದೇವೆ. ಕೋಳಿಫಾರಂಗಳ ತ್ಯಾಜ್ಯದಿಂದ ಉಲ್ಬಣಿಸುತ್ತಿರುವ ಸಮಸ್ಯೆಗೆ ಮುಕ್ತಿ ಕೊಡಿಸುವ ಅಧಿಕಾರಿಗೆ ₹ 1 ಲಕ್ಷ ಬಹುಮಾನ ನೀಡುತ್ತೇನೆ’ ಎಂದು ವಿಜಯ ಕುಮಾರ್‌ ತಿಳಿಸಿದರು. ‘ಕಳೆದ ಬಾರಿ ₹ 51000 ನಗದು ಬಹುಮಾನ ನೀಡುವುದಾಗಿ ಹೇಳಿದ್ದೆ. ಆದರೆ ಈ ಬಾರಿ ₹ 1 ಲಕ್ಷ ನೀಡಲಾಗುವುದು. ‘ಹೆಬ್ಬಾಳು ರತ್ನ‘ ಬಿರುದು ನೀಡಿ ತೆರೆದ ವಾಹನದಲ್ಲಿ ಅಧಿಕಾರಿಯನ್ನು ಮೆರವಣಿಗೆ ಮಾಡಲಾಗುವುದು. 10000 ಪಟಾಕಿ ಸಿಡಿಸುವುದರೊಂದಿಗೆ ಸಂಭ್ರಮ ಪಡುತ್ತೇವೆ. ನಮ್ಮ ಮನವಿಗೆ ಅಧಿಕಾರಿಗಳು ಸ್ಪಂದಿಸಿ ಸಮಸ್ಯೆ ಪರಿಹರಿಸಬೇಕು‘ ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.