ದಾವಣಗೆರೆ: ಲಿಂಗತ್ವ ಅಲ್ಪಸಂಖ್ಯಾತರಲ್ಲಿ ನ್ಯಾಯಯುತ ಹೋರಾಟ ಮಾಡಿ ಹಕ್ಕುಗಳನ್ನು ಪಡೆಯುವ ಗುಂಪು ಮತ್ತು ಗೂಂಡಾಗಿರಿ ಮಾಡಿ ಸಮುದಾಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಗುಂಪುಗಳ ನಡುವೆ ಮತ್ತೆ ವಿವಾದ ಉಂಟಾಗಿದೆ. ಅದರ ಪರಿಣಾಮವಾಗಿಯೇ ದಾವಣಗೆರೆಯಲ್ಲಿ ಶಾಂತಿ ಕದಡಿದೆ.
ಮಲ್ಲಪ್ಪ ಕುಂಬಾರ್ ರಾಜ್ಯ ಸಂಚಾಲಕರಾಗಿ ‘ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ’ಯನ್ನು ನಿರ್ಮಿಸಿಕೊಂಡಿದ್ದಾರೆ. ಈ ವೇದಿಕೆ ಎಲ್ಲ ಜಿಲ್ಲೆಗಳ ಲಿಂಗತ್ವ ಅಲ್ಪಸಂಖ್ಯಾತರನ್ನು ಸದಸ್ಯರನ್ನಾಗಿ ಮಾಡಿಕೊಂಡು ಹೋರಾಟ ಮಾಡುತ್ತಿದೆ. ಈ ವೇದಿಕೆ ಅಲ್ಲದೆಯೂ ಹಲವು ಸಂಘಟನೆಗಳು ಅಸ್ತಿತ್ವದಲ್ಲಿವೆ. ಯಾವ ಸಂಘಟನೆಗಳ ಅಡಿಗೂ ಬಾರದೇ ತಮ್ಮದೇ ಗುಂಪು ಕಟ್ಟಿಕೊಂಡವರೂ ಇದ್ದಾರೆ. ಇಂಥ ಒಂದು ಗುಂಪೇ ಈಗ ಹೊಡೆದು ಬಡಿದು ನಮ್ಮನ್ನು ಅಡಿಯಾಳು ಮಾಡಲು ನೋಡುತ್ತಿದೆ’ ಎಂದು ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಸದಸ್ಯೆ, ಅಭಯ ಸ್ಪಂದನದ ಕಾರ್ಯದರ್ಶಿಯೂ ಆಗಿರುವ ಚೈತ್ರಾ ಎಸ್. ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.
‘ಮನೋಪರಿವರ್ತನೆಯ ಕಾರಣಕ್ಕೆ ನಮ್ಮನ್ನು ನಮ್ಮ ಮನೆಯವರು ಒಪ್ಪುತ್ತಿಲ್ಲ. ನಮ್ಮನ್ನು ಮನುಷ್ಯರು ಎಂದು ಸಮಾಜ ಇನ್ನೂ ತಿಳಿಯುತ್ತಿಲ್ಲ. ನಮ್ಮ ನೆರವಿಗೆ ಕಾನೂನುಗಳಿದ್ದರೂ ಅವನ್ನು ಜಾರಿ ಮಾಡಬೇಕಾದವರೇ ಕಾನೂನು ಮುರಿಯುತ್ತಾರೆ. ನಿಂದನಾ ಪದಗಳನ್ನು ಬಳಸಬಾರದು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದ್ದರೂ ಅಂಥ ಶಬ್ದಗಳನ್ನು ಕಾನೂನು ಪಾಲಕರೇ ಬಳಸುತ್ತಿದ್ದಾರೆ. ಹೀಗಾದರೆ ನಾವು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸುತ್ತಾರೆ ವೇದಿಕೆ ಪ್ರಧಾನ ಕಾರ್ಯದರ್ಶಿ ಅಕ್ಷತಾ ಕೆ.ಸಿ.
‘ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಕೋಶದ ಸದಸ್ಯೆಯಾಗಿ ನಾನು ಇದ್ದೇನೆ. ನಮ್ಮ ಸಮಸ್ಯೆಗಳನ್ನು ಈ ಕೋಶದ ಮೂಲಕ ಮುಂದಿಡುತ್ತೇವೆ. ಪ್ರತಿ ಆರು ತಿಂಗಳಿಗೊಮ್ಮೆ ರಕ್ತ ಪರೀಕ್ಷೆ, ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದೆ. ಮೈತ್ರಿ, ಸ್ವ ಉದ್ಯೋಗ ಯೋಜನೆಯಡಿ ತರಬೇತಿಯನ್ನು ಕೊಡಿಸಿದ್ದೇನೆ. ಜಿಲ್ಲೆಯಲ್ಲಿ ಸುಮಾರು 400 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ತಾಲ್ಲೂಕಿನಲ್ಲಿ 160ಕ್ಕೂ ಅಧಿಕ ಮಂದಿ ಇದ್ದಾರೆ. ಇವರೆಲ್ಲರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ಬಗ್ಗಿಸಿ ಹಫ್ತಾ ನೀಡುವಂತೆ ಮಾಡುವುದೇ ಹಲ್ಲೆ ಮಾಡಿದವರ ಉದ್ದೇಶ’ ಎಂದು ಚೈತ್ರಾ ಎಸ್. ವಿವರಿಸಿದರು.
‘ಬೆಂಗಳೂರಿನ ಪ್ರೇಮಾ, ಕಸ್ತೂರಿ ಒಳಗೊಂಡಂತೆ ಸುಮಾರು 40 ಮಂದಿ ಗುಂಪು ಕಟ್ಟಿಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ. ತಿಂಗಳಿಗೆ ಇಷ್ಟು ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಒಪ್ಪದ ಕಾರಣಕ್ಕೆ 15 ಮಂದಿಯ ತಂಡ ಕಟ್ಟಿಕೊಂಡು ಬಂದು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ಗೂಂಡಾಗಿರಿ, ದಾದಾಗಿರಿ ಬಿಟ್ಟು ನ್ಯಾಯಯುತವಾಗಿ, ಕಾನೂನುಬದ್ಧವಾಗಿ ಹೋರಾಟ ಮಾಡಲಿ’ ಎಂಬುದು ಅವರ ಒತ್ತಾಯ.
‘ನ್ಯಾಯಸಿಗದೇ ಇದ್ದರೆ ಆತ್ಮಹತ್ಯೆಯೊಂದೇ ದಾರಿ’
‘ಪ್ರೇಮಾ, ಸ್ಪಂದನ, ಕಸ್ತೂರಿ, ಸಾನಿಯಾ, ಜಯ, ಆವಂತಿಕಾ, ಪ್ರೀತಿ, ಅಲ್ಪಿಯ, ವಾಸವಿ, ಶಬನಾ, ಬಸವರಾಜ್, ಪ್ರಕಾಶ್, ಹೇಮಂತ್, ಮಂಜುನಾಥ್, ಆರ್ಯ ಮುಂತಾದವರು ಬಂದು ಹಲ್ಲೆ ನಡೆಸಿದ್ದಾರೆ. ಅರುಂಧತಿಯ ತಲೆ ಒಡೆದು ಹಾಕಿದ್ದಾರೆ. ಲಾಸ್ಯಳ ಸ್ಥಿತಿಯೂ ಗಂಭೀರವಾಗಿದೆ. ನಾನು, ವೀಣಾ, ಸುರಕ್ಷ ಎಲ್ಲ ಹಲ್ಲೆಗೆ ಈಡಾಗಿದ್ದೇವೆ. ಗೊಂಬೆ, ಜಾಹ್ನವಿ, ಸತ್ಯ, ಛಾಯಾ ಅವರಿಗೂ ಬೆದರಿಕೆ ಒಡ್ಡಿದ್ದಾರೆ. ವಿವಿಧ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ. ಅವರು ನ್ಯಾಯ ಒದಗಿಸಿಕೊಡದಿದ್ದರೇ ಆತ್ಮಹತ್ಯೆಯೊಂದೇ ಉಳಿದಿರುವ ದಾರಿ’ ಎಂದು ಚೈತ್ರಾ ಎಸ್. ಕಣ್ಣೀರಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.